ಸಾರಾಂಶ
ಗೋಕರ್ಣ: ಈ ಹಿಂದೆ ಪ್ರವಾಸಿ ತಾಣದಿಂದ ಸಂಜೆ ೫ ಗಂಟೆಗೆ ಬೆಂಗಳೂರಿಗೆ ಬಿಡುತ್ತಿದ್ದ ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್ ಸಂಚಾರವನ್ನು ಪುನಃ ಆರಂಭಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ . ಅಂಕೋಲಾ- ಗೋಕರ್ಣ, ಕುಮಟಾ, ಶಿರಸಿ, ಹಾವೇರಿ ಮಾರ್ಗವಾಗಿ ಬೆಂಗಳೂರಿಗೆ ಹಲವು ವರ್ಷಗಳಿಂದ ಬಸ್ ಸಂಚರಿಸುತ್ತಿತ್ತು. ಆದರೆ ಎರಡು ವರ್ಷದ ಹಿಂದೆ ಸಾಮಾನ್ಯ ಸಾರಿಗೆಯನ್ನು ರಾಜಹಂಸ ಬಸ್ ಬಿಡುವ ಮೂಲಕ ಸುಖಾಸಿನ ಸಾರಿಗೆ ಮಾಡಿದ್ದರು. ಇದರಿಂದ ಸಾಮಾನ್ಯ ಪ್ರಯಾಣಿಕರ ಪ್ರಯಾಣದ ದರ ಹೆಚ್ಚಳವಾದ್ದರಿಂದ ಪ್ರಯಾಣಿಸಲಿಲ್ಲ. ಇನ್ನೂ ಹೆಚ್ಚು ಹಣ ನೀಡಿ ಪ್ರಯಾಣಿಸುವವರಿಗೆ ಕೇವಲ ₹೨೦೦ ಹೆಚ್ಚು ನೀಡಿದರೆ ಸ್ಲೀಪರ ಕೋಚ್ ಸಿಗುವುದರಿಂದ ಈ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖಗೊಂಡಿತು. ನಂತರ ಜನ ಆಗುವುದಿಲ್ಲ, ಆದಾಯವಿಲ್ಲ ಎಂದು ಕಳೆದ ಒಂದು ವರ್ಷದಿಂದ ಸಾರಿಗೆ ಸೇವೆ ಸ್ಥಗಿತಗೊಳಿಸಲಾಗಿದೆ.ನೇರ ಬಸ್ ಇಲ್ಲದೆ ತೊಂದರೆ: ಇಲ್ಲಿಂದ ನೇರವಾಗಿ ಶಿರಸಿಗೆ ತೆರಳಲು ಯಾವುದೇ ಬಸ್ ಇಲ್ಲದೆ ಕುಮಟಾಕ್ಕೆ ಸಾಗಿ ಹೋಗಬೇಕಾಗಿದ್ದು, ಇದ್ದ ಒಂದು ಬಸ್‌ನ್ನು ರದ್ದುಗೊಳಿಸಿರುವುದರಿಂದ ತೀವ್ರ ತೊಂದರೆಯಾಗುತ್ತದೆ. ಅಲ್ಲದೇ ಬೆಂಗಳೂರಿಗೆ ಮತ್ತಿತರ ಕಡೆ ಮಹಿಳೆಯರಿಗೆ ಸರ್ಕಾರದ ಉಚಿತ ಪ್ರಯಾಣಕ್ಕೂ ಸಾಮಾನ್ಯ ಬಸ್ ಇಲ್ಲವಾಗಿದ್ದು, ಈ ಬಗ್ಗೆ ಸಾರಿಗೆ ಸಂಸ್ಥೆ ಅಧಿಕಾರಿಗಳು ತ್ವರಿತವಾಗಿ ಬಸ್ ಸೇವೆ ಪ್ರಾರಂಭಿಸಬೇಕಿದೆ.ಉಳಿದ ಸಾರಿಗೆ ಬಂದ್: ಶಿರಸಿ ದೇವನಹಳ್ಳಿ ವಡ್ಡಿ ಘಾಟ ಮಾರ್ಗವಾಗಿ ಸಂಚರಿಸುತ್ತಿದ್ದ ಗೋಕರ್ಣ- ಶಿರಸಿ ಬಸ್ ಸಹ ಮೂರು ತಿಂಗಳಿಂದ ಸಂಚಾರ ನಿಲ್ಲಿಸಿದೆ. ಇದನ್ನು ಪುನಃ ಪ್ರಾರಂಭಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ. ಶಿರಸಿ ತಾಲೂಕಿನ ಮತ್ತಿಘಟ್ಟಾ ಮತ್ತಿತರ ಗ್ರಾಮೀಣ ಪ್ರದೇಶದ ಜನರು ಘಟ್ಟದ ಕೆಳಗಿನ ತಾಲೂಕು, ಪ್ರವಾಸಿ ತಾಣಗಳಿಗೆ ತೆರಳಲು ಹಾಗೂ ಈ ಮಾರ್ಗದ ಹಳ್ಳಿಗಳ ಜನರಿಗೆ ನಿತ್ಯ ಸಂಚರಿಸಲು ಅನುಕೂಲವಾಗಲು ಬಸ್ ಬಿಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ಶಿರಸಿ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಆರು ತಿಂಗಳ ಹಿಂದೆ ನೂತನ ಸಾರಿಗೆ ವ್ಯವಸ್ಥೆಗೆ ಚಾಲನೆ ನೀಡಿದ್ದರು. ಆದರೆ ಬಂದ್ ಆಗಿದ್ದ ಸಾರಿಗೆ ವ್ಯವಸ್ಥೆ ಪುನಃ ಶಾಸಕರು ಪ್ರಾರಂಭಿಸುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.