ಪಂಚ ರಾಜ್ಯಗಳ ಚುನಾವಣೆ ಮುಗಿದ ತಕ್ಷಣ ಕಳೆದ ೧೦ ದಿನಗಳಲ್ಲಿ ೪ ಬಾರಿ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ಸಿಎನ್ ಜಿ ದರಗಳನ್ನು ವಿಪರೀತ ಏರಿಸಿರುವುದು ರೈತಾಪಿ ಜನರು ಸೇರಿ ದೇಶದ ಜನಸಾಮಾನ್ಯರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ.

ಕರ್ನಾಟಕ ಪ್ರಾಂತ ರೈತ ಸಂಘ ಉ.ಕ. ಜಿಲ್ಲಾ ಸಮಿತಿಯಿಂದ ತಹಸೀಲ್ದಾರ ಮೂಲಕ ಪ್ರಧಾನಿಗೆ ಮನವಿ

ಕನ್ನಡಪ್ರಭ ವಾರ್ತೆ ಅಂಕೋಲಾ

ಪಂಚ ರಾಜ್ಯಗಳ ಚುನಾವಣೆ ಮುಗಿದ ತಕ್ಷಣ ಕಳೆದ ೧೦ ದಿನಗಳಲ್ಲಿ ೪ ಬಾರಿ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ಸಿಎನ್ ಜಿ ದರಗಳನ್ನು ವಿಪರೀತ ಏರಿಸಿರುವುದು ರೈತಾಪಿ ಜನರು ಸೇರಿ ದೇಶದ ಜನಸಾಮಾನ್ಯರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಕೂಡಕೇ ಬೆಲೆ ಏರಿಕೆ ವಾಪಸ್‌ ಪಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಉ.ಕ. ಜಿಲ್ಲಾ ಸಮಿತಿಯಿಂದ ಬುಧವಾರ ತಹಸೀಲ್ದಾರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.ರೈತ ಸಂಘದ ಜಿಲ್ಲಾ ಅಧ್ಯಕ್ಷ ಶಾಂತಾರಾಮ ನಾಯಕ ಮಾತನಾಡಿ, ವಿಶ್ವದ ಅನೇಕ ದೇಶಗಳು ತಮ್ಮ ನಾಗರಿಕರ ಹಿತರಕ್ಷಣೆಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣ ಕ್ರಮ ಕೈಗೊಂಡಿವೆ. ಆದರೆ ಭಾರತ ಸರಕಾರ ದುಡಿಯುವ ಜನರ ಮತ್ತು ಜನಸಾಮಾನ್ಯರ ಬದುಕನ್ನು ರಕ್ಷಣೆಗೆ ಮುಂದಾಗದಿರುವುದು ಖಂಡನೀಯವಾದದ್ದು. ಜನಹಿತಕ್ಕಿಂತ ಕೇಂದ್ರದಲ್ಲಿ ಆಡಳಿತ ನಡೆಸುವವರಿಗೆ ಮತ್ತೆ ಮತ್ತೆ ಚುನಾವಣೆ ಗೆಲ್ಲುವುದೇ ಮುಖ್ಯ ಎಂಬುದು ಮತ್ತೊಮ್ಮೆ ಈಗ ರುಜುವಾತಾಗಿದೆ ಎಂದರು.

ರಸಗೊಬ್ಬರಗಳ ಸಾಕಷ್ಟು ದಾಸ್ತಾನುಗಳನ್ನು ಖಚಿತಪಡಿಸಿಕೊಳ್ಳಲು ಸರಕಾರ ವಿಫಲವಾದ ಕಾರಣ ರಸಗೊಬ್ಬರ ಕೊರತೆ ಮತ್ತು ವೆಚ್ಚಗಳಲ್ಲಿ ಏರಿಕೆಯನ್ನು ರೈತರು ಎದರಿಸುತ್ತಿದ್ದಾರೆ. ಅಗತ್ಯ ಪೂರೈಕೆಗೆ ಸರಕಾರಗಳು ಕ್ರಮ ತೆಗೆದುಕೊಳ್ಳಬೇಕು ಮತ್ತು ಬೆಲೆ ಏರಿಕೆ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪ ಗೌಡ, ತಾಲೂಕು ಅಧ್ಯಕ್ಷ ಗೌರೀಶ ನಾಯಕ, ಜಂಟಿ ಕಾರ್ಯದರ್ಶಿ ಸಂತೋಷ ನಾಯ್ಕ, ಜಿಲ್ಲಾ ಸಮಿತಿ ಸದಸ್ಯರಾದ ಬುಜಂಗ ಚಿಬ್ಲಕರ, ಬಾಬು ಹನ್ಗೇಕರ, ಗಣಪತಿ ಸಿದ್ದಿ, ಉದಯ ನಾಯ್ಕ, ನಿತ್ಯಾನಂದ ಎನ್.ಸಿದ್ದಿ, ವಿನೋದ ನಾಯ್ಕ ಮುಂತಾದವರಿದ್ದರು.