ದೇವಾಲಯ ಜಾಗ ಉಳಿಸಿಕೊಡುವಂತೆ ಆಗ್ರಹ

| Published : May 29 2024, 12:47 AM IST

ಸಾರಾಂಶ

ಗ್ರಾಮಸ್ಥರ ಮನವಿಯ ಮೇರೆಗೆ ಚಿಕ್ಕಮಗಳೂರು ತಾಲೂಕಿನ ಹಲಸುಮನೆ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಜಾಗಕ್ಕೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಅಕ್ರಮವಾಗಿ ಒತ್ತುವರಿಯಾಗಿರುವ ದೇವಾಲಯದ ಜಾಗವನ್ನು ಉಳಿಸಿಕೊಡಬೇಕೆಂದು ಹಲಸುಮನೆ ಗ್ರಾಮಸ್ಥರು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.ತಾಲೂಕಿನ ವಸ್ತಾರೆ ಹೋಬಳಿಯ ಹಲಸುಮನೆ ಗ್ರಾಮಕ್ಕೆ ಶಾಸಕಿ ನಯನಾ ಮೋಟಮ್ಮ ಭೇಟಿ ನೀಡಿದ ವೇಳೆಯಲ್ಲಿ ಗ್ರಾಮಸ್ಥರ ಒತ್ತಾಯ ಮೇರೆಗೆ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ದೇವಾಲಯದ ಒತ್ತುವರಿ ಜಾಗವನ್ನು ತೆರವುಗೊಳಿಸಿಕೊಡಬೇಕು ಎಂದು ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ಗ್ರಾಮಸ್ಥರಾದ ಪ್ರೀತಮ್ ಮಾತನಾಡಿ, ಹಲಸುಮನೆ ಗ್ರಾಮದ ಸರ್ವೆ ನಂ.46/2 ರಲ್ಲಿ 1.20 ಎಕರೆ ಜಾಗವನ್ನು ಗ್ರಾಮದ ವ್ಯಕ್ತಿಯೊಬ್ಬರು ಅಕ್ರಮ ಒತ್ತುವರಿ ಮಾಡಿ ದಾಖಲಾತಿ ಮಾಡಿಕೊಂಡಿದ್ದಾರೆ. ಅಲ್ಲದೇ ಸುತ್ತಮುತ್ತಲು 50ಕ್ಕೂ ಹೆಚ್ಚು ಶ್ರೀಗಂಧ ಮರಗಳನ್ನು ಕಡಿದು ಹಾಗೂ ಕಲ್ಲುಬಂಡೆ ಸಿಡಿಸುತ್ತಿರುವ ಪರಿಣಾಮ ದೇವಾಲಯದ ಮೂಲ ಸ್ವರೂಪಕ್ಕೆ ತೊಂದರೆಯಾಗಿದೆ ಎಂದರು.ದೇವಾಲಯ ಸುತ್ತಲು ಅತ್ಯಂತ ಬೆಲೆಬಾಳುವ ಶ್ರೀಗಂಧವನ್ನು ತೆರವುಗೊಳಿಸಿರುವ ಗ್ರಾಮದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದಿಟ್ಟು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರೂ ಆತನ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.ಶಾಸಕರು ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಪುರಾತನ ಇತಿಹಾಸವುಳ್ಳ ದೇವಾಲಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಹಾಗೂ ಸಂಬಂಧಿಸಿದ ಜಾಗ ಉಳಿಸಿ ಕೊಡಬೇಕು ಎಂದು ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ನಯನಾ ಮೋಟಮ್ಮ ದೇವಾಲಯದ ಜಾಗದ ಸಮಸ್ಯೆ ಕುರಿತು ತಹಸೀಲ್ದಾರ್ ಹಾಗೂ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ನೈಜವಾಗಿ ಒತ್ತುವರಿ ಮಾಡಿಕೊಂಡಿದ್ದರೆ ನ್ಯಾಯಸಮ್ಮತವಾಗಿ ದೇವಾಲಯಕ್ಕೆ ಹಿಂತಿರುಗಿಸಿ ಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ದೇವಾಲಯದ ಅರ್ಚಕ ಪ್ರೇಮ್‌ಕುಮಾರ್, ಬಸ್ಕಲ್ ಗ್ರಾ.ಪಂ. ಅಧ್ಯಕ್ಷೆ ಲಲಿತಮ್ಮ, ಮುಖಂಡರಾದ ಸತೀಶ್, ಗಣೇಶ್, ಹೆಚ್.ಹೆಚ್.ಕುಮಾರ್, ಗ್ರಾಮಸ್ಥರಾದ ಧರ್ಮೇಶ್, ಮಲ್ಲೇಶ್, ರಾಧಾ, ಗೀತಾ, ಕಮಲಮ್ಮ ಇದ್ದರು.