ಸಾರಾಂಶ
ಯಾಳವಾರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ೭ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದರಿಂದ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.
ಕನ್ನಡಪ್ರಭ ವಾರ್ತೆ ಜೇವರ್ಗಿ
ತಾಲೂಕಿನ ಬಹುತೇಕ ಕಡೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಕುಡಿವ ನೀರಿನ ಸಮಸ್ಯಗೆ ಶಾಸ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕದಿಂದ ರಾಷ್ಟ್ರೀಯ ಹೆದ್ದಾರಿ ಚಿಗರಳ್ಳಿ ಕ್ರಾಸ್ ಹತ್ತಿರ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಕೆಲ್ಲೂರ ಮಾತನಾಡಿ, ತಾಲೂಕಿನ ಯಾಳವಾರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ೭ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದರಿಂದ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ. ಕುಡಿವ ನೀರಿನ ಸಮಸ್ಯೆಯನ್ನು ತಕ್ಷಣ ಸಂಭಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಬೆ.10ಕ್ಕೆ ರಾಷ್ಟ್ರೀಯ ಹೆದ್ದಾರಿ ಚಿಗರಳ್ಳಿ ಕ್ರಾಸ್‌ನಲ್ಲಿ ಸುಮಾರು ಒಂದು ಗಂಟೆಯ ಕಾಲ ರಸ್ತೆ ನಡೆಸಿದರು. ಕೂಡಲೆ ಕುಡಿವ ನೀರಿನ ಸಮಸ್ಯೆಗೆ ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ಮತ್ತೆ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು.ನಂತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ ಮಲ್ಲಣ್ಣ ಯಲಗೋಡ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸಣ್ಣಗೌಡ ಗಂವ್ಹಾರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೇವಕ್ಕಿ ಯಾಳವಾರ, ಅಲ್ಲಾಪಟೇಲ ಇಜೇರಿ, ರೇಣುಕಾ ಯಾಳವಾರ, ಗುರುಬಾಯಿ ಇಜೇರಿ, ದಾವೂದ ಹರನೂರ, ಟಿಪ್ಪು ಅನ್ವರ ಸಿಗರಥಳಿ, ಕಮಲ ಪಟೇಲ ಯಾಳವಾರ, ಬಾಬು ಪುಜಾರಿ ಸೇರಿದಂತೆ ಗ್ರಾಪಂ ಸದಸ್ಯರು ಸುತ್ತಮುತ್ತಲಿನ ಗ್ರಾಮಸ್ಥರು, ರೈತರು ಪಾಲ್ಗೊಂಡಿದ್ದರು.