ರೈತರ ಸಮಸ್ಯೆ ಪರಿಹರಿಸಲು ಆಗ್ರಹ

| Published : Sep 27 2025, 12:00 AM IST

ಸಾರಾಂಶ

ಚನ್ನಪಟ್ಟಣ: ರೈತರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಿ, ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನಗರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಚನ್ನಪಟ್ಟಣ: ರೈತರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಿ, ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನಗರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಕಚೇರಿ ಮುಂಭಾಗ ಜಮಾಯಿಸಿದ ರೈತ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು.

ಸರ್ಕಾರ ಬಲವಂತವಾಗಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಕೈಬಿಡಬೇಕು. ರಾಜಕಾರಣಿಗಳು ಸ್ವಾರ್ಥ ರಾಜಕಾರಣ ಬಿಟ್ಟು ರೈತರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಬಿಡದಿ ಭಾಗದಲ್ಲಿ ಟೌನ್‌ಶಿಪ್‌ಗೋಸ್ಕರ ೧೨,೦೦೦ ಎಕರೆ ಭೂಮಿ ಸ್ವಾಧೀನ ಪಡೆಯುವುದಕ್ಕೆ ಹೊರಟಿದೆ. ಸರ್ಕಾರ ಬಲವಂತದಿಂದ ಭೂ ಸ್ವಾಧೀನ ಮಾಡುವುದನ್ನು ಬಿಡಬೇಕು. ಡಿಸಿಎಂ ಡಿ.ಕೆ.ಶಿವಕುಮಾರ್ ಚಳುವಳಿಗಾರರ ಮೇಲೆ ಉಡಾಫೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಬೆಸ್ಕಾಂ ಇಲಾಖೆಯು ಮನೆಗಳಿಗೆ ಅಳವಡಿಸುತ್ತಿರುವ ಸ್ಮಾರ್ಟ್ ಮೀಟರ್‌ಗಳನ್ನು ಕೂಡಲೇ ನಿಲ್ಲಿಸಿ ಹಿಂದೆ ಆಳವಡಿಸಿರುವ ಮೀಟರ್‌ಗಳನ್ನು ಮುಂದುವರೆಸಬೇಕು.

ಅರಣ್ಯ ಇಲಾಖೆಯಿಂದ ರೈತರಿಗೆ ಸಾಕಷ್ಟು ಅನ್ಯಾಯ ಆಗುತ್ತಿದೆ. ಆನೆ, ಹಂದಿ, ಚಿರತೆ ಮತ್ತು ಇತರೆ ಪ್ರಾಣಿಗಳಿಂದ ರೈತರಿಗೆ ಹಾಗೂ ರೈತರ ಜಾನುವಾರುಗಳಿಗೆ ಆಕಸ್ಮಿಕ ಸಾವುಂಟಾದರೆ ತಕ್ಷಣ ಪರಿಹಾರ ಕೊಡಬೇಕು. ಅರಣ್ಯದಲ್ಲಿ ರೈತರ ಜಾನುವಾರುಗಳನ್ನು ಮೇಯಲು ಅಡ್ಡಿಪಡಿಸುತ್ತಿರುವ ಕ್ರಮವನ್ನು ಕೈಬಿಟ್ಟು, ಯಥಾಸ್ಥಿತಿ ಕಾಪಾಡುವಂತೆ ಆಗ್ರಹಿಸಿದರು.

ಕಂದಾಯ ಇಲಾಖೆಯಲ್ಲಿ ಭ್ರಷ್ಟಚಾರ ತಾಂಡವ ಆಡುತ್ತಿದ್ದು, ಇದರಿಂದ ರೈತರು ಕಷ್ಟಪಡುವಂತಾಗಿದೆ. ರೈತರಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಒದಗಿಸಬೇಕು ಹಾಗೂ ದಲ್ಲಾಳಿಗಳ ಕಾಟವನ್ನು ತಡೆಗಟ್ಟಬೇಕು. ರೈತರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಸಕ್ರಮಗೊಳಿಸಿ ರೈತರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.

ಇಗ್ಗಲೂರು ಏತ ನೀರಾವರಿಯಲ್ಲಿ ನೀರು ಲಭ್ಯವಿದ್ದರೂ ಕಾವೇರಿ ನಿಗಮದ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಉದಾಸೀನದಿಂದ ಕನಿಷ್ಠ ತಾಲೂಕಿನ ಕೆರೆಗಳಿಗೆ ನೀರನ್ನು ತುಂಬಿಸುತ್ತಿಲ್ಲ. ತಾಲೂಕಿನ ೧೧೦ ಕೆರೆಗಳಲ್ಲಿ ೫೦ ರಿಂದ ೬೦ ಸಣ್ಣ ಕೆರೆಗಳನ್ನು ಬಿಟ್ಟರೆ ದೊಡ್ಡ ಕೆರೆಗಳಿಗೆ ನೀರು ಬಿಟ್ಟಿರುವುದಿಲ್ಲ. ಈ ಕೂಡಲೇ ನೀರು ಬಿಡಲು ಕ್ರಮವಹಿಸಬೇಕು.

ತಾಲೂಕು ದಂಡಾಧಿಕಾರಿಗಳು ರೈತರ ಕುಂದು ಕೊರತೆಗಳು ಸಭೆಯನ್ನು ಕರೆಯಬೇಕು. ಮೈಕ್ರೋ ಫೈನಾನ್ಸ್‌ನಿಂದ ರೈತರಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಿ ನೆಮ್ಮದಿಯಿಂದ ಜೀವನ ಮಾಡಲು ಅವಕಾಶ ಕಲ್ಪಿಸಬೇಕು.

ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಕ್ರಮ ವಹಿಸಲು ರೈತರ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಕುಮಾರಸ್ವಾಮಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ಕಾರ್ಯದರ್ಶಿ ರಮ್ಯ ರಾಮಣ್ಣ, ಹಿರಿಯ ರೈತ ರುದ್ರಪ್ಪ, ರಾಜ್ಯ ಸಮಿತಿಯ ಎಚ್.ಸಿ.ಕೃಷ್ಣಯ್ಯ, ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಯುವ ಜಿಲ್ಲಾಧ್ಯಕ್ಷ ರವಿಕುಮಾರ್, ಜಿಲ್ಲಾ ಕಾರ್ಯದರ್ಶಿ ಪುಟ್ಟಸ್ವಾಮಿ, ತಾಲೂಕು ಅಧ್ಯಕ್ಷ ವಿಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್. ವೆಂಕಟೇಶ್, ತಾಲೂಕು ಗೌರವಧ್ಯಕ್ಷ ರಾಮಕೃಷ್ಣಪ್ಪ, ಜಿಲ್ಲಾ ಮಹಿಳಾ ಆಧ್ಯಕ್ಷೆ ರತ್ನಮ್ಮ, ಇತರರು ಇದ್ದರು.

ಪೊಟೋ೨೬ಸಿಪಿಟಿ೧:

ಚನ್ನಪಟ್ಟಣದ ತಾಲೂಕು ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.