ಸಾರಾಂಶ
ಹಾವೇರಿ: ಇಲ್ಲಿನ ಸುಭಾಷ್ ವೃತ್ತದ ಸಮೀಪದಲ್ಲಿರುವ ಸ್ಮಶಾನ ಭೂಮಿಯಲ್ಲಿ ಅಂಜುಮನ್ ಸಂಸ್ಥೆಯವರು ಅನಧಿಕೃತವಾಗಿ ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದು, ಕೂಡಲೇ ಇದನ್ನು ನಿಲ್ಲಿಸಬೇಕು. ಯಾವ ಉದ್ದೇಶಕ್ಕೆ ಭೂಮಿ ಮಂಜೂರಾಗಿದೆಯೋ ಅದೇ ಉದ್ದೇಶಕ್ಕೆ ಆ ಭೂಮಿಯನ್ನು ಬಳಕೆ ಮಾಡಿಕೊಳ್ಳಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಶಂಭಣ್ಣ ಜತ್ತಿ ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ಮಶಾನ ಭೂಮಿಯಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು ಕಾನೂನು ಪ್ರಕಾರ ಎಲ್ಲಿಯೂ ಅವಕಾಶ ಇಲ್ಲ. ಇದನ್ನು ಹಲವು ಪ್ರಕರಣಗಳಲ್ಲಿ ಹೈಕೋರ್ಟ್, ಸುಪ್ರೀಂಕೋರ್ಟ್ ಪುನರುಚ್ಚರಿಸಿದೆ. ಅಂಜುಮನ್ ಸಂಸ್ಥೆಯವರು ಬೇರೆ ಎಲ್ಲೋ ವಾಣಿಜ್ಯ ಮಳಿಗೆ ನಿರ್ಮಿಸುವುದಾಗಿ ೨೦೧೬ರಲ್ಲಿ ನಗರಸಭೆಯಿಂದ ಪರವಾನಗಿ ಪಡೆದು ಈಗ ಸ್ಮಶಾನ ಭೂಮಿಯಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದಾರೆ. ಇಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸದಂತೆ ನಗರಸಭೆ ತಡೆಯಾಜ್ಞೆ ನೀಡಿದರೂ ಕಾಮಗಾರಿ ನಡೆಸುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕಟ್ಟಡ ನಿರ್ಮಿಸದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.ಹಿರಿಯ ವಕೀಲ ಕೆ.ಸಿ. ಪಾವಲಿ ಮಾತನಾಡಿ, ಖಬರಸ್ಥಾನಕ್ಕೆ ೧೯೩೦ರಲ್ಲಿ ಎರಡು ಎಕರೆ ಜಾಗ ಮಂಜೂರಾಗಿದೆ. ಇದರ ಎದುರುಗಡೆ ದಾನಮ್ಮದೇವಿ ದೇವಸ್ಥಾನ, ಬಸವ ಭವನ ಇದೆ. ಹೀಗಿದ್ದರೂ ಎರಡೂ ಸಮುದಾಯದವರು ಈ ವರೆಗೂ ಅವರವರ ಧಾರ್ಮಿಕ ಆಚರಣೆಗಳನ್ನು ಶಾಂತಿಯುತವಾಗಿ ಆಚರಿಸಿಕೊಂಡು ಬಂದಿದ್ದಾರೆ. ಈಗ ಇಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದು ಸರಿಯಲ್ಲ ಎಂದರು.
ನಗರಸಭೆ ಮಾಜಿ ಸದಸ್ಯ ನಿರಂಜನ ಹೇರೂರ ಮಾತನಾಡಿ, ದಾನಮ್ಮದೇವಿ ದೇವಸ್ಥಾನದ ಎದುರು ವಾಣಿಜ್ಯ ಕಟ್ಟಡ ಕಟ್ಟಡದಂತೆ ನಾವು ಸೌಹಾರ್ದಯುತವಾಗಿ ಮನವಿ ಮಾಡಿಕೊಳ್ಳುತ್ತೇವೆ. ಒಂದು ವೇಳೆ ಕಟ್ಟಡ ಕಾಮಗಾರಿ ಮುಂದುವರಿದರೆ ಸ್ವಯಂ ಪ್ರೇರಿತವಾಗಿ ಹಾವೇರಿ ಬಂದ್ ಮಾಡಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮುಖಂಡ ಪ್ರದೀಪ ಮುಳ್ಳೂರು ಮಾತನಾಡಿ, ರಾಣಿಬೆನ್ನೂರು, ಹಾನಗಲ್‌ನ ಸ್ಮಶಾನ ಭೂಮಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ. ನಾವೂ ಕಾನೂನು ಹೋರಾಟ ಆರಂಭಿಸುತ್ತೇವೆ. ಅದಕ್ಕೂ ಮೊದಲು ಸೌಹಾರ್ದತೆಗೆ ಹೆಸರಾಗಿರುವ ಹಾವೇರಿಯಲ್ಲಿ ಶಾಂತಿಯುತವಾಗಿ ಈ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದರು.
ವಾಣಿಜ್ಯ ಮಳಿಗೆ ನಿರ್ಮಿಸದಂತೆ ನಗರಸಭೆ ನೋಟಿಸ್ ನೀಡಿದರೂ ಕಾಮಗಾರಿ ನಡೆಸುತ್ತಿದ್ದಾರೆ ಎಂದರೆ ಇವರು ಕಾನೂನಿಗೆ ಎಷ್ಟರ ಮಟ್ಟಿಗೆ ಗೌರವ ಕೊಡುತ್ತಾರೆ ಎಂಬುದು ಗೊತ್ತಾಗುತ್ತದೆ. ಆಡಳಿತ ವ್ಯವಸ್ಥೆಯೂ ಇವರ ಬೆನ್ನಿಗೆ ನಿಂತಿದೆ ಎಂಬ ಅನುಮಾನ ಕಾಡುತ್ತಿದೆ. ಕಾರಣ ಜಿಲ್ಲಾಡಳಿತ, ಜಿಲ್ಲಾ ಪೊಲೀಸರು ಸೌಹಾರ್ದಯುತವಾಗಿ ಈ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.ಪ್ರಮುಖರಾದ ವಿಜಯಕುಮಾರ ಚಿನ್ನಿಕಟ್ಟಿ, ಮೋಹನ್‌ಸಿಂಗ್ ರಜಪೂತ, ಬಸವರಾಜ ಹಾಲಪ್ಪನವರ, ಕಿರಣ ಕೊಳ್ಳಿ, ಅಶೋಕ ಮರೆಣ್ಣನವರ, ವೆಂಕಟೇಶ ನಾರಾಯಣಿ, ದ್ಯಾಮಣ್ಣ ಕೊಟ್ಟೂರು, ಮಹಾಲಿಂಗಯ್ಯ ಹಿರೇಮಠ ಇತರರು ಇದ್ದರು.