ರಾಜ್ಯದ ವಿವಿಧ ನಗರಗಳಲ್ಲಿ ಫುಟ್‌ಪಾತ್ ಹಾಗೂ ಬೀದಿ ಬದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ಬುಲ್ಡೋಜರ್ ತೆರವು ಕಾರ್ಯಾಚರಣೆಗಳನ್ನು ಖಂಡಿಸಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ತುಮಕೂರುರಾಜ್ಯದ ವಿವಿಧ ನಗರಗಳಲ್ಲಿ ಫುಟ್‌ಪಾತ್ ಹಾಗೂ ಬೀದಿ ಬದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ಬುಲ್ಡೋಜರ್ ತೆರವು ಕಾರ್ಯಾಚರಣೆಗಳನ್ನು ಖಂಡಿಸಿ ಹಾಗೂ ಬೀದಿ ವ್ಯಾಪಾರಿಗಳ ಕಾನೂನು ಬದ್ಧ ಹಕ್ಕುಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾ ಫುಟ್‌ಪಾತ್ ವ್ಯಾಪಾರಿಗಳ ಸಂಘ (ಸಿಐಟಿಯು) ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮೆರವಣೆಗೆ ಮೂಲಕ ಜಿಲ್ಲಧಿಕಾರಿಗಳ ಕಚೇರಿ ವರಗೆ ತೆರಳಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ಮಾತನಾಡಿ, ಒಂದು ಕಡೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿಗಳು ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯಗಳು ಮತ್ತು ವಿವಿಧ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ಆದರೆ ಮತ್ತೊಂದು ಕಡೆ ದೇಶದ ವಿವಿಧ ನಗರಗಳಲ್ಲಿ ಬುಲ್ಡೋಜರ್ ಬಳಸಿ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕ್ರಮಗಳು ನಡೆಯುತ್ತಿವೆ. ಇದು ಬಡ ವ್ಯಾಪಾರಿಗಳ ಬಗ್ಗೆ ಸರ್ಕಾರ ಅನುಸರಿಸುತ್ತಿರುವ ದ್ವಂದ್ವ ನೀತಿಯನ್ನು ಬಯಲಿಗೆಳೆಯುತ್ತದೆ ಎಂದು ಆರೋಪಿಸಿದರು.

ಕರ್ನಾಟಕ ಸರ್ಕಾರವೂ ಈಗಾಗಲೇ ತುಮಕೂರು ಬೆಂಗಳೂರು, ಕಲಾಸಿಪಾಳ್ಯ, ಮಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಅಭಿವೃದ್ಧಿ ಮತ್ತು ಸೌಂದರ್ಯೀಕರಣದ ಹೆಸರಿನಲ್ಲಿ ಅದೆ ಮಾದರಿಯನ್ನು ಜಾರಿಗೊಳಿಸುತ್ತಿದ್ದು, ಬೀದಿಬದಿ ವ್ಯಾಪಾರಿಗಳ ಜೀವನೋಪಾಯದ ಮೇಲೆ ದಾಳಿ ನಡೆಸುತ್ತಿದೆ ಎಂದು ಅವರು ತೀವ್ರವಾಗಿ ಖಂಡಿಸಿದರು. ಸಂಘದ ಪ್ರಧಾನಕಾರ್ಯದರ್ಶಿ ವಸೀಂ ಅಕ್ರಂ ಮಾತನಾಡಿ ರಾಜ್ಯ ಸರ್ಕಾರವು ತಕ್ಷಣವೇ ಬುಲ್ಡೋಜರ್ ತೆರವು ಕಾರ್ಯಾಚರಣೆಗಳನ್ನು ನಿಲ್ಲಿಸಿ, ರಾಷ್ಟ್ರೀಯ ಬೀದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ–2014 ಹಾಗೂ ರಾಜ್ಯದ ನಿಯಮಾವಳಿಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು. ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಯಾವುದೇ ಬೀದಿ ವ್ಯಾಪಾರಿಯನ್ನು ತೆರವುಗೊಳಿಸಬಾರದು ಎಂದು ಅವರು ಆಗ್ರಹಿಸಿದರು.

ಸಂಘದ ನಗರ ಅಧ್ಯಕ್ಷ ರಾಜು ಹಾಗೂ ವಿಶ್ವ ಪ್ರಭು ಮಾತನಾಡಿ, ಬೀದಿ ವ್ಯಾಪಾರಿಗಳು ನಗರ ಆರ್ಥಿಕತೆಯ ಅವಿಭಾಜ್ಯ ಭಾಗವಾಗಿದ್ದು, ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತುಗಳು ಮತ್ತು ಸೇವೆಗಳನ್ನು ಒದಗಿಸುವ ಇವರನ್ನು ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವುಗೊಳಿಸುವುದು ಅಮಾನವೀಯ ಕ್ರಮವಾಗಿದೆ ಎಂದರು. ತುಮಕೂರು ಎಂ.ಜಿ ರಸ್ತೆಯ ಪುಟ್ ಪಾತ್ ವ್ಯಾಪರಿಗಳ ಪರವಾಗಿ ಹೈಕೋರ್ಟ್ ಆದೇಶದ ಮೇರೆಗೆ ಪಾಲಿಕೆ ಕುಂದುಕೊರತೆ ನಿವಾರಣಾ ಸಮಿತಿ ನೀಡಿರುವ ತೀರ್ಪಿನ ಪ್ರಕಾರ ಕ್ರಮ ಜರುಗಿಸಬೇಕಾಗಿದ್ದರೂ, ಸುಮಾರು 10 ತಿಂಗಳು ಕಳೆದರೂ ಆದೇಶವನ್ನು ಪಾಲಿಸಲಾಗಿಲ್ಲ ಎಂದು ಅವರು ಆರೋಪಿಸಿದರು.

ಜಿಲ್ಲಾಡಳಿತ ಪರವಾಗಿ ಮನವಿ ಸ್ವೀಕರಿಸಿದ ಕೇಂದ್ರ ಸ್ಥಾನಿಕ ಅಧಿಕಾರಿ ಸರ್ಕಾರದ ಗಮನಕ್ಕೆ ವಿಷಯವನ್ನು ತರಲಾಗುವುದು ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ಪ್ರತಿಭಟನೆ ಉದ್ದೇಶಿಸಿ ರವಿಕುಮಾರ, ಮುತ್ತುರಾಜು, ಶಶಿ, ಅಲ್ಲಭಕ್ಷ, ಪ್ರೇಮ,ಕೃಷ್ಣಮೂರ್ತಿ, ಮತನಾಡಿದರು. ಪ್ರತಿಭಟನೆಯಲ್ಲಿ ಆನಂದ,ಪ್ರಭು, ಶೆಕ್ ಫಜಮಾನ್,ಮಾರುತಿ ಪ್ರಸನ್ನ,ನಾಗಣ್ಣ ಮುಂತಾದವರು ಉಪಸ್ಥಿತರಿದ್ದರು.