ರಾಜ್ಯಾದ್ಯಂತ ರೈತರಿಗೆ ಅಗತ್ಯ ಪ್ರಮಾಣದ ರಸಗೊಬ್ಬರ ಪೂರೈಸುವ ಜೊತೆಗೆ ಅನೇಕ ದಶಕಗಳಿಂದ ಗೊಬ್ಬರ ಪೂರೈಕೆಯಲ್ಲಿ ರೈತರಿಗೆ ಆಗುತ್ತಿರುವ ಮೋಸ, ವಂಚನೆ ತಡೆಯುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಸ್.ವೀರಭದ್ರಪ್ಪ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.

- ರೈತರಿಗೆ ಅಗತ್ಯ ರಸಗೊಬ್ಬರ ಪೂರೈಸಲು ತಾಕೀತು । ಅನ್ಯಾಯ ತಡೆಗೆ ಕೆಆರ್‌ಎಸ್‌ ಸಹಾಯವಾಣಿ ಸ್ಥಾಪನೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯಾದ್ಯಂತ ರೈತರಿಗೆ ಅಗತ್ಯ ಪ್ರಮಾಣದ ರಸಗೊಬ್ಬರ ಪೂರೈಸುವ ಜೊತೆಗೆ ಅನೇಕ ದಶಕಗಳಿಂದ ಗೊಬ್ಬರ ಪೂರೈಕೆಯಲ್ಲಿ ರೈತರಿಗೆ ಆಗುತ್ತಿರುವ ಮೋಸ, ವಂಚನೆ ತಡೆಯುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಸ್.ವೀರಭದ್ರಪ್ಪ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ರಸಗೊಬ್ಬರ ಮಾರಾಟಗಾರರು ಎಫ್‌ಸಿಒ 1985 ಷರತ್ತುಗಳ ಪ್ರಕಾರ ರಸಗೊಬ್ಬರ ಅಂಗಡಿಗಳಲ್ಲಿ ಬೆಲೆ, ದಾಸ್ತಾನು ವಿವರ, ಇತ್ಯಾದಿ ಮಾಹಿತಿಯನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ರಸಗೊಬ್ಬರ ಅಕ್ರಮದ ಬಗ್ಗೆ ದೂರು ನೀಡಲು ಸಂಬಂಧಿಸಿದ ತಾಲೂಕು ಸಹಾಯಕ ಕೃಷಿ ನಿರ್ದೇಶಕ (ಎಡಿ), ಮೊಬೈಲ್ ನಂಬರ್ ಸಹ ಫಲಕದಲ್ಲಿ ಕಡ್ಡಾಯವಾಗಿರಬೇಕು. ರಸಗೊಬ್ಬರ ಮಾರಾಟ ಕಂಪನಿಗಳು ಕಡ್ಡಾಯವಾಗಿ ವಿತರಕರಿಗೆ ನಿಯಮಾನುಸಾರ ಅಂಗಡಿಗಳ ಬಾಗಿಲಿಗೆ ವಿತರಣೆ ಮಾಡುವುದನ್ನು ಖಾತ್ರಿಪಡಿಸಬೇಕು. ಕಂಪನಿಗಳು ಸಬ್ಸಿಡಿ ರಸಗೊಬ್ಬರದ ಜೊತೆಗೆ ವಿತರಕರಿಗೆ ಲಿಂಕ್ ಉತ್ಪನ್ನ ನೀಡುವುದನ್ನು ನಿಲ್ಲಿಸಬೇಕು. ವಿತರಕರು, ಮಾರಾಟಗಾರರು ಲಿಂಕ್ ಉತ್ಪನ್ನ ರೈತರಿಗೆ ಮಾರುವುದನ್ನು ತಡೆಯಬೇಕು ಎಂದು ಹೇಳಿದರು.

ನಿಯಮಗಳನ್ನು ಮೀರುತ್ತಿರುವ ಬಗ್ಗೆ ಯಾವುದೇ ದೂರು ಬಂದರೂ ಅಂತಹ ವಿತರಕರ ಪರವಾನಿಗೆಯನ್ನೇ ರದ್ದುಪಡಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರ ಹಾಗೂ ಕೃಷಿ ಇಲಾಖೆ ಕಟ್ಟುನಿಟ್ಟಾಗಿ ನಿಯಮಗಳನ್ನು ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ರಸಗೊಬ್ಬರದ ಅಕ್ರಮವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಈಗ ಮುಂಗಾರಿನಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ರೈತರ ಅನುಕೂಲಕ್ಕಾಗಿ ಕೆಆರ್‌ಎಸ್‌ ಪಕ್ಷ ಸಹಾಯವಾಣಿ (73495-77130) ಸ್ಥಾಪಿಸಿದೆ. ಅಕ್ರಮ ಕಂಡುಬಂದರೆ ರೈತರು ಈ ನಂಬರ್‌ಗೆ ಮಾಹಿತಿ ನೀಡುವಂತೆ ವೀರಭದ್ರಪ್ಪ ಮನವಿ ಮಾಡಿದರು.

ಬಿತ್ತನೆ ವೇಳೆಯೇ ಕೃತಕವಾಗಿ ಬೀಜ, ಗೊಬ್ಬರದ ಅಭಾವ ಸೃಷ್ಟಿ ಮಾಡುವುದನ್ನು ತಡೆಯಬೇಕು. ಸಬ್ಸಿಡಿ ವ್ಯಾಪ್ತಿಗೊಳಪಡುವ ಯೂರಿಯಾ, ಡಿಎಪಿ ರಸಗೊಬ್ಬರವನ್ನು ಅವುಗಳ ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದರೂ, ಕೃಷಿ ಇಲಾಖೆ ಮೌನ ವಹಿಸಿರುವುದು ಸರಿಯಲ್ಲ. ಈ ಮೂಲಕ ಅಕ್ರಮ ಮಾಡುತ್ತಿರುವ ವಿತರಕರಿಗೆ ಮತ್ತು ಕಂಪನಿಗಳಿಗೆ ಬೆಂಬಲ ಸರಿಯಲ್ಲ. ಯೂರಿಯಾ ಗೊಬ್ಬರದ ಬೆಲೆ ಪ್ರತಿ ಚೀಲ (45 ಕೆಜಿ)ಕ್ಕೆ ₹266.5 ಇದ್ದರೂ, ರಾಜ್ಯದೆಲ್ಲೆಡೆ ₹320ರಿಂದ ₹600 ದರಕ್ಕೆ ಮಾರಾಟ ಮಾಡಿಕೊಳ್ಳುತ್ತಿರುವುದನ್ನು ತಡೆಯಬೇಕು ಎಂದರು.

ಡಿಎಪಿ ಗೊಬ್ಬರ ಗರಿಷ್ಠ ಮಾರಾಟ ಬೆಲೆ 50 ಕೆಜಿ ಚೀಲಕ್ಕೆ ₹1,350 ಇದ್ದರೂ ₹1450 ರಿಂದ ₹2100 ವರೆಗೆ ಮಾರಿಕೊಳ್ಳುತ್ತಿರುವುದಕ್ಕೆ ಕಡಿವಾಣ ಹಾಕಬೇಕು. ಈಚೆಗೆ ಅಧಿಕಾರಿಗಳೇ ವಿತರಕರಿಗೆ ಯೂರಿಯಾ ಮತ್ತು ಡಿಎಪಿ ರಸಗೊಬ್ಬರವನ್ನು ಎಂಆರ್‌ಪಿ ಬೆಲೆಗಿಂತಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಭಾಗದಲ್ಲಿ ನೋಂದಣಿಯಾಗಿ ರೈತರಿಗಾಗಿ ಕೆಲಸ ಮಾಡುತ್ತಿರುವ ಹಾಗೂ ರಸಗೊಬ್ಬರ ಮಾರಾಟ ಮಾಡುತ್ತಿರುವ ಕರ್ನಾಟಕ ರೈತ ಸಹಾಯಕ ರೈತ ಉತ್ಪಾದಕರ ಕಂಪನಿಯ ಮೂಲಕ ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಇಂತಹದ್ದು ಮರುಕಳಿಸಬಾರದು ಎಂದು ತಾಕೀತು ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಗುಡ್ಡಪ್ಪ, ಶಿವಣ್ಣ, ಕೆ.ಓ.ಶ್ರೀಧರ, ಕೆ.ಮಲ್ಲಪ್ಪ, ಶಶಿಕುಮಾರ, ಸಂದೀಪ ಇತರರು ಇದ್ದರು.

- - -

(ಬಾಕ್ಸ್‌)

* ರೈತರ ಶೋಷಣೆ ತಡೆಗೆ ಸರ್ಕಾರ ಮುಂದಾಗಲಿ ಮಧ್ಯ ಪ್ರದೇಶ, ಉತ್ತರ ಪ್ರದೇಶದಲ್ಲಿ ರಸಗೊಬ್ಬರ ಕಂಪನಿಗಳ ಲಿಂಕ್ ಉತ್ಪನ್ನ ಮಾರಾಟ ತಡೆಯಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಮಾಡಬೇಕು. ರಸಗೊಬ್ಬರವನ್ನು ಮಾರಾಟಗಾರರ ಅಂಗಡಿ, ಸೊಸೈಟಿಗೆ ತಲುಪಿಸುವ ಜವಾಬ್ದಾರಿ ಮತ್ತು ಖರ್ಚು ಆಯಾ ಕಂಪನಿಯದ್ದಾಗಿರುತ್ತದೆ. ಆದರೆ, ಅದನ್ನೂ ಮಾರಾಟಗಾರರ ಮೇಲೆ ಹೊರಿಸಲಾಗುತ್ತಿದೆ. ಲಿಂಕ್ ಉತ್ಪನ್ನಗಳನ್ನು ಕಂಪನಿಗಳು ಕಡ್ಡಾಯವಾಗಿ ಖರೀದಿಸುವಂತೆ ವಿತರಕರ ಮೇಲೆ ಒತ್ತಡ ಹಾಕಿ, ಗೊಬ್ಬರದ ಜೊತೆಗೆ ಕಳಿಸುವುದನ್ನು ನಿಲ್ಲಿಸಬೇಕು. ರೈತರಿಗೆ ಆಗುವ ಅನ್ಯಾಯ, ಶೋಷಣೆ, ಮೋಸ, ವಂಚನೆ ತಡೆಗೆ ಸರ್ಕಾರ ಮುಂದಾಗಬೇಕು ಎಂದು ಕೆ.ಎಸ್.ವೀರಭದ್ರಪ್ಪ ಒತ್ತಾಯಿಸಿದರು.

- - -

-16ಕೆಡಿವಿಜಿ2, 3:

ದಾವಣಗೆರೆಯಲ್ಲಿ ಮಂಗಳವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಸ್.ವೀರಭದ್ರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.