ಸಾರಾಂಶ
- ನಮ್ಮ ಕರ್ನಾಟಕ ಸೇನೆಯಿಂದ ತಹಸೀಲ್ದಾರ್, ಆರಕ್ಷಕ ನಿರೀಕ್ಷಕರಿಗೆ ಮನವಿ
ಕನ್ನಡಪ್ರಭ ವಾರ್ತೆ ಶಹಾಪುರಪರವಾನಿಗೆ ಇಲ್ಲದೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮರಳು ಸಂಗ್ರಹಿಸಿ ದುಬಾರಿ ಬೆಲೆಗೆ ಮಾರಾಟ ಮಾಡುವ ದಂಧೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಬಳಿಕ ತಹಸೀಲ್ದಾರ್ ಮತ್ತು ಶಹಾಪುರ ನಗರ ಠಾಣೆಯ ಆರಕ್ಷಕ ನಿರೀಕ್ಷಕರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ನಮ್ಮ ಕರ್ನಾಟಕ ಸೇನೆಯ ರಾಜ್ಯ ಸಂಚಾಲಕ ಭೀಮಣ್ಣ ಶಖಾಪುರ, ಕೃಷ್ಣಾ ನದಿಯಲ್ಲಿ ದಂಧೆಕೋರರು ರಾಜಾರೋಷವಾಗಿ ಜೆಸಿಬಿಗಳಿಂದ ನದಿಯ ಒಡಲು ಬಗೆಯುತ್ತಿದ್ದಾರೆ. ಕಾನೂನು ಗಾಳಿಗೆ ತೂರಿ ಅಕ್ರಮ ಮರಳು ಮಾಫಿಯಾ ನಡೆಸಿದರೂ ಜಿಲ್ಲಾಡಳಿತ ಮಾತ್ರ ಮೌನವಾಗಿದೆ. ಅಲ್ಲದೆ, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮರಳು ಸಂಗ್ರಹಿಸಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಸಾಥ್ ನೀಡುತ್ತಿದೆ ಎನ್ನುವ ಅನುಮಾನ ಬರುತ್ತಿದೆ ಎಂದು ಆರೋಪಗಳನ್ನು ವ್ಯಕ್ತಪಡಿಸಿದರು.ಕೃಷ್ಣಾ ನದಿಯಲ್ಲಿ ಅವ್ಯಾಹತ ಮರಳು ಲಭಿಸುತ್ತಿದೆ. ಇದರಿಂದ ನಿತ್ಯ ರಾತ್ರಿ ವೇಳೆ ಅಕ್ರಮ ಮರಳು ಸಾಗಾಣೆ ಎಗ್ಗಿಲ್ಲದೆ ಸಾಗಿದೆ ಎಂದು ನದಿ ಪಾತ್ರದ ವ್ಯಾಪ್ತಿಯ ಜನರು ನೋವು ವ್ಯಕ್ತಪಡಿಸಿದ್ದಾರೆ. ಮರಳು ದಂಧೆಗೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಇದಕ್ಕೆ ಕಡಿವಾಣ ಹಾಕದ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದ್ದು, ಈಗಲಾದರೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಅಕ್ರಮ ಮರಳು ಸಾಗಾಣಿಕೆ ಮತ್ತು ಅಕ್ರಮ ಸಂಗ್ರಹಿಸಿಡಲಾದ ಅಡ್ಡೆಗಳ ಮೇಲೆ ದಾಳಿ ನಡೆಸಿ ಪೊಲೀಸ್ ವಶಕ್ಕೆ ಮರಳು ಪಡೆಯಬೇಕೆಂದು ಅವರು ಒತ್ತಾಯಿಸಿದರು.
ಸೇನೆಯ ತಾಲೂಕಾಧ್ಯಕ್ಷ ಸಿದ್ದು ಪಟ್ಟೇದಾರ್ ಮಾತನಾಡಿ, ರಾಖಂಗೇರಾ ಏರಿಯಾದಲ್ಲಿ ಬರುವ ಶಾಂತಿ ದಾಬಾದ ಹಿಂಭಾಗ ಬೃಹತ್ ಪ್ರಮಾಣದಲ್ಲಿ ಅಕ್ರಮ ಮರಳು ಸಂಗ್ರಹ ಮಾಡಿ, ಕಾನೂನಿನ ಭಯವಿಲ್ಲದೇ ರಾಜಾರೋಷ ಮಾರಾಟ ಮಾಡುತ್ತಿದ್ದಾರೆ. ಮಿನಿ ಟಿಪ್ಪರ್, ಭಾರತ ಬೆಂಜ್ ಟಿಪ್ಪರ್, ಟ್ರ್ಯಾಕ್ಟರ್ ಗಳ ಮೂಲಕ ಅಕ್ರಮವಾಗಿ ಮರಳು ಸಂಗ್ರಹ ಮಾಡಿ, ಹೆಚ್ಚಿನ ಬೆಲೆಗೆ ಜೆಸಿಬಿ ಮೂಲಕ ಬೇರೆ ಮಿನಿ ಟಿಪ್ಪರ್, ಟ್ರ್ಯಾಕ್ಟರ್ ಗಳ ನಗರದ ಮತ್ತು ಗ್ರಾಮೀಣ ಜನರಿಗೆ ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಆ ಮರಳನ್ನು ಸೀಜ್ ಮಾಡಿ, ಮಿನಿ ಟಿಪ್ಪರ್, ಭಾರತ ಬೆಂಜ್ ಟಿಪ್ಪರ್, ಟ್ರ್ಯಾಕ್ಟರ್‌ಗಳ ಲೈಸನ್ಸ್ ರದ್ದುಪಡಿಸಿ. ಇದರಲ್ಲಿ ಭಾಗಿಯಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಸೇನೆಯ ಜಿಲ್ಲಾ ಸಂಚಾಲಕ ಅಂಬರೀಶ್ ತೆಲಗರ್, ಯುವ ಘಟಕದ ತಾಲೂಕಾಧ್ಯಕ್ಷ ವಿಶ್ವನಾಥ್ ರೆಡ್ಡಿ ದೇಸಾಯಿ, ನಗರ ಅಧ್ಯಕ್ಷ ರಾಜು ಸಿಂಗ್, ಸಾಮಾಜಿಕ ಜಾಲತಾಣಗಳ ಅಧ್ಯಕ್ಷ ಚಂದ್ರಕಾಂತ ಹಲಗಿ, ಲಾಲು ನಾಯಕ್, ನಬಿ ಪಟೇಲ, ವಿಶ್ವರಾಧ್ಯ ನಾಯ್ಕೋಡಿ, ದೇವು ಶಹಾಪುರ, ರಾಮು ಸೈದಾಪುರ, ಖಾಜಾ ಸೂಗೂರು, ಶಂಕರ್ ಜಹಾಗೀರದಾರ್, ನಾಗಪ್ಪ ಯಳವಾರ ಇದ್ದರು.
----21ವೈಡಿಆರ್5: ಶಹಾಪುರದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮರಳು ಸಂಗ್ರಹಣ ಅಡ್ಡೆ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮತ್ತು ಆರಕ್ಷಕ ನಿರೀಕ್ಷಕರಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಯಿತು