ಸಾರಾಂಶ
ಪ್ರತಿಭಟನೆಯ ಎಚ್ಚರಿಕೆ : ರೈಲು ಅಧಿಕಾರಿಗಳ ಜೊತೆ ಚರ್ಚೆಕನ್ನಡಪ್ರಭ ವಾರ್ತೆ ಯಾದಗಿರಿ
ಯಾದಗಿರಿ ರೈಲು ನಿಲ್ದಾಣದಲ್ಲಿ ವಂದೇ ಭಾರತ ರೈಲು ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ್ ನೇತೃತ್ವದಲ್ಲಿ ಕಾರ್ಯಕರ್ತರು ರೈಲು ನಿಲ್ದಾಣ ಅಧಿಕಾರಿಗಳ ಜೊತೆ ಸಭೆ ನಡೆಸಿದರು.ಜು.27ರಂದು ರೈಲು ನಿಲುಗಡೆಯಾಗಲಿದೆ ಎಂದು ಹೊರಡಿಸಿದ ಆದೇಶವನ್ನು ರದ್ದುಪಡಿಸಲಾಗಿದೆ. ಈ ಹಿಂದೆಯೂ ಕೂಡ ಹೀಗೆಯೇ ಆಗಿತ್ತು. ನಿಲುಗಡೆ ನಿರ್ಧಾರವನ್ನು ಪದೇ ಪದೇ ಮುಂದೂಡುತ್ತಿರುವ ಹಿಂದೆ ಯಾರ ಒತ್ತಡವಿದೆ ಎಂದು ಕಿಡಿ ಕಾರಿದ ಭೀಮುನಾಯಕ್, ಇದು ಖಂಡನೀಯ ಎಂದರು.
ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ರೈಲು ನಿಲ್ಲುವುದನ್ನು ಪದೇ ಪದೇ ಮುಂದೂಡಿಕೆಗೆ ರಾಜಕೀಯ ದೊಂಬರಾಟ ಕಾರಣವಾಗಿದೆ. ರೈಲ್ವೆ ಇಲಾಖೆ ಹಾಗೂ ಇಲ್ಲಿನ ಜನಪ್ರತಿನಿಧಿಗಳು ಜನರ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜು.27ರಂದು ರೈಲು ನಿಲುಗಡೆಗೆ ರಾಯಚೂರು ಸಂಸದ ಜಿ.ಕುಮಾರನಾಯಕ ಚಾಲನೆ ನೀಡುವವರಿದ್ದರು. ಗೆಲುವಿನ ನಂತರ ಜಿಲ್ಲೆಯ ಜನರಿಗೆ ಕೃತಜ್ಞತೆ ತಿಳಿಸಲು ಸಮಯವಿಲ್ಲದ ಸಂಸದರಿಗೆ, ಈಗ ದಿಢೀರ್ ಜಿಲ್ಲೆಗೆ ರೈಲು ಚಾಲನೆಗೆ ಬರುತ್ತಿರುವುದು ತೋರಿಕೆಯ ಮತ್ತು ಫೋಟೊ ಶೂಟ್‌ಗೆ ಬರುತ್ತಿರುವಂತಿದೆ ಎಂದು ನಾಯಕ್ ಟೀಕಿಸಿದ್ದಾರೆ. ಯಾದಗಿರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಸಂಸದರು ಕೇಂದ್ರ ರೈಲ್ವೆ ಇಲಾಖೆಗೆ ಒತ್ತಡ ತರುವ ಕಾರ್ಯ ಮಾಡಬೇಕು. ಜೊತೆಘೇ ಇಲ್ಲಿ ಪ್ರಮುಖ ರೈಲುಗಳ ನಿಲುಗಡೆಯೂ ಆಗಬೇಕಿದೆ. ಸಂಸದರು ಈ ಬಗ್ಗೆ ಧ್ವನಿಯಾಗಬೇಕು ಎಂದು ಅವರು ಆಗ್ರಹಿಸಿದರು. ಕರವೇ ತಾಲೂಕಾ ಅಧ್ಯಕ್ಷರಾದ ಮಲ್ಲು ಮಾಳಿಕೇರಿ, ಸಿದ್ದುನಾಯಕ ಹತ್ತಿಕುಣಿ, ಅಂಬ್ರೇಶ ಹತ್ತಿಮನಿ, ಸಂತೋಷಕುಮಾರ ನಿರ್ಮಲಕರ್, ವಿಶ್ವರಾಜ್ ಹೊನಗೇರಾ, ಸುರೇಶ ಬೆಳಗುಂದಿ, ಕಾಶಿನಾಥ ನಾನೇಕ ಇತರರಿದ್ದರು