ಮಳೆ ಕೊರತೆಯಿಂದ ರೈತರು ಹಾಗೂ ಜಾನುವಾರು ಸಾಕಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದು, ಜಾನುವಾರುಗಳಿಗೆ ಅಗತ್ಯವಿರುವ ಹೊಟ್ಟು ಹಾಗೂ ಮೇವು ಕೊರತೆ ಉಂಟಾಗುವ ಆತಂಕ ಎದುರಾಗಿದೆ.

ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಕಡಕೋಳ ಗ್ರಾಮದ ರೈತರ ಮನವಿ

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಮಳೆ ಕೊರತೆಯಿಂದ ರೈತರು ಹಾಗೂ ಜಾನುವಾರು ಸಾಕಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದು, ಜಾನುವಾರುಗಳಿಗೆ ಅಗತ್ಯವಿರುವ ಹೊಟ್ಟು ಹಾಗೂ ಮೇವು ಕೊರತೆ ಉಂಟಾಗುವ ಆತಂಕ ಎದುರಾಗಿದೆ. ಹೀಗಾಗಿ ಸರ್ಕಾರ ತಕ್ಷಣವೇ ರೈತರ ನೆರವಿಗೆ ಧಾವಿಸಿ ಜಾನುವಾರುಗಳಿಗೆ ಸಮರ್ಪಕ ಪ್ರಮಾಣದಲ್ಲಿ ಹೊಟ್ಟು, ಒಣಮೇವು ಹಾಗೂ ಹಸಿರು ಮೇವು ಪೂರೈಸಬೇಕು ಎಂದು ಆಗ್ರಹಿಸಿ ಹಾಲು ಉತ್ಪಾದಕರ ಸಹಕಾರಿ ಸಂಘ ಶಿರಹಟ್ಟಿ ಹಾಗೂ ಕಡಕೋಳ ಗ್ರಾಮದ ರೈತರಿಂದ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಶಿರಹಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಮಾತನಾಡಿ, ತಾಲೂಕಿನ ಹಲವು ಗ್ರಾಮಗಳಲ್ಲಿ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆ ಬೆಳೆಗಳು ಒಣಗಿದ್ದು, ಹೊಲಗಳಲ್ಲಿ ಜಾನುವಾರುಗಳಿಗೆ ಲಭ್ಯವಾಗುತ್ತಿದ್ದ ಮೇವು ಪ್ರಮಾಣವೂ ಕಡಿಮೆಯಾಗಿದೆ. ಇದರಿಂದ ಹಸು, ಎಮ್ಮೆ, ಕುರಿ, ಮೇಕೆ ಸೇರಿ ಜಾನುವಾರುಗಳನ್ನು ಸಾಕುತ್ತಿರುವ ರೈತರು ಮೇವು ಖರೀದಿಸಲು ಹೆಚ್ಚಿನ ಹಣ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಕೃಷಿ ಚಟುವಟಿಕೆಗಳಲ್ಲಿ ನಷ್ಟ ಅನುಭವಿಸಿರುವ ರೈತರಿಗೆ ಜಾನುವಾರು ಸಾಕಾಣಿಕೆಯೂ ಹೆಚ್ಚುವರಿ ಹೊರೆಯಾಗಿದೆ. ಮಾರುಕಟ್ಟೆಯಲ್ಲಿ ಹೊಟ್ಟು ಹಾಗೂ ಒಣಮೇವು ಬೆಲೆ ಹೆಚ್ಚಾದರೆ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಜಾನುವಾರುಗಳನ್ನು ಸಾಕುವುದು ಮತ್ತಷ್ಟು ಕಷ್ಟವಾಗಲಿದೆ. ಜಾನುವಾರುಗಳು ರೈತರ ಜೀವನೋಪಾಯದ ಪ್ರಮುಖ ಆಧಾರವಾಗಿರುವುದರಿಂದ ಅವುಗಳ ಸಂರಕ್ಷಣೆಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಸರ್ಕಾರ ಈಗಾಗಲೇ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಹಾಗಾಗಿ ಮಳೆ ಕೊರತೆಯಿಂದ ತೀವ್ರವಾಗಿ ಬಾಧಿತವಾಗಿರುವ ಪ್ರದೇಶಗಳನ್ನು ಗುರುತಿಸಿ ಗ್ರಾಮವಾರು ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಬೇಕು. ಅಗತ್ಯವಿರುವ ಪ್ರಮಾಣದಲ್ಲಿ ಹೊಟ್ಟು ಮತ್ತು ಮೇವನ್ನು ಸಂಗ್ರಹಿಸಿ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಬೇಕು. ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಮೇವು ಹಂಚಿಕೆ ಮಾಡುವ ಮೂಲಕ ಯಾವುದೇ ಗ್ರಾಮದಲ್ಲಿ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತರ ಜೀವನೋಪಾಯದ ಪ್ರಮುಖ ಆಧಾರವಾಗಿರುವ ಜಾನುವಾರುಗಳನ್ನು ಉಳಿಸಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ರೈತರ ಪರವಾಗಿ ಆಗ್ರಹಿಸಿದರು.

ತಿಪ್ಪಣ್ಣ ಕೊಂಚಿಗೇರಿ, ಅಜ್ಜನಗೌಡ್ರ ಪಾಟೀಲ, ಶರಣಪ್ಪ ಹರ್ಲಾಪೂರ, ಸುಧೀರ ಜಮಖಂಡಿ, ಸುರೇಶ ವರವಿ, ಶಿವಪ್ಪ ಕುಂಬಾರ, ಗೌಸಪೀರ ಮಕಾಂದಾರ, ಫಕ್ಕೀರೇಶ ರಾಮಗೇರಿ, ಬಸವರಾಜ ಬಂತಿ ಮುಂತಾದವರು ಇದ್ದರು.