40ನೇ ವಿತರಣಾ ಕಾಲುವೆಗೆ ನೀರು ಪೂರೈಸಲು ಆಗ್ರಹ
KannadaprabhaNewsNetwork | Published : Nov 04 2023, 12:31 AM IST
40ನೇ ವಿತರಣಾ ಕಾಲುವೆಗೆ ನೀರು ಪೂರೈಸಲು ಆಗ್ರಹ
ಸಾರಾಂಶ
40ನೇ ವಿತರಣಾ ಕಾಲುವೆಗೆ ನೀರು ಪೂರೈಸಲು ಆಗ್ರಹ
ಕನ್ನಡಪ್ರಭ ವಾರ್ತೆ ಸಿಂಧನೂರು ತುಂಗಭದ್ರಾ ಎಡದಂಡೆ ನಾಲೆಯ 40ನೇ ವಿತರಣಾ ಕಾಲುವೆಗೆ ಸಮರ್ಪಕವಾಗಿ ನೀರು ಪೂರೈಸುವ ಮೂಲಕ ಜೋಳದ ಬೆಳೆ ರಕ್ಷಣೆ ಮಾಡಬೇಕೆಂದು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಘಟಕ ಶುಕ್ರವಾರ ಸ್ಥಳೀಯ ಮಿನಿವಿಧಾನಸೌಧ ಮುಂದೆ ಪ್ರತಿಭಟನಾ ಧರಣಿ ನಡೆಸಿತು. ಹೋರಾಟಗಾರ ಡಿ.ಎಚ್. ಕಂಬಳಿ ಮಾತನಾಡಿ, ತುರ್ವಿಹಾಳ ಉಪವಿಭಾಗದ ಆಡಳಿತ ವ್ಯಾಪ್ತಿಗೆ ಒಳಪಡುವ 40ನೇ ವಿತರಣಾ ಕಾಲುವೆಗೆ ಇಲ್ಲಿಯವರೆಗೆ ನೀರು ಬಂದಿಲ್ಲ. ರೈತರು ಬಿತ್ತಿದ ಜೋಳ ಸಂಪೂರ್ಣ ಹಾನಿಯಾಗುತ್ತಿದೆ. ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ಕೆಳಭಾಗದ ರೈತರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಶಾಸಕರು ಸಹ ಈ ವಿಚಾರದಲ್ಲಿ ಮೌನ ತಾಳಿದ್ದು ಖಂಡನೀಯವಾಗಿದೆ. ಶಾಸಕ ಹಂಪನಗೌಡ ಬಾದರ್ಲಿ ಅವರು ಬೇರೆ ವಿತರಣಾ ಕಾಲುವೆ ವ್ಯಾಪ್ತಿಯ ಮೇಲ್ಭಾಗದ ರೈತರನ್ನು ಮನವೊಲಿಸಿ ಆಯಾ ಕೆಳಭಾಗದ ರೈತರಿಗೆ ನೀರು ಕೊಡಿಸಿದ್ದಾರೆ. ಆದರೆ 40ನೇ ಉಪಕಾಲುವೆ ವ್ಯಾಪ್ತಿಯ ಮೇಲ್ಭಾಗದ ರೈತರ ಮನವೊಲಿಸಲು ಶ್ರಮಿಸಿಲ್ಲ ಎಂದು ಆಪಾದಿಸಿದರು. ಈಗಾಗಲೇ ರೈತರು ಜೋಳ ಬಿತ್ತಿ ಎಕರೆಗೆ ರು.25 ಸಾವಿರ ಖರ್ಚು ಮಾಡಿದ್ದಾರೆ. ನೀರಿನಲ್ಲದೆ ಬೆಳೆ ಹಾನಿ ಆಗಿರುವುದರಿಂದ ರಾಜ್ಯ ಸರ್ಕಾರ ಎಕರೆಗೆ ರು.50 ಸಾವಿರ ಪರಿಹಾರ ನೀಡಬೇಕು. 40ನೇ ವಿತರಣಾ ಕಾಲುವೆಗೆ ನೀರು ನೀಡಬೇಕೆಂದು ಆಗ್ರಹಿಸಿ ನ.6ರಂದು ಮಹಾತ್ಮ ಗಾಂಧಿವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದು ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಘಟಕದ ಸಂಚಾಲಕ ವೆಂಕನಗೌಡ ಗದ್ರಟಗಿ ತಿಳಿಸಿದರು. ರೈತ ಮುಖಂಡ ಹುಸೇನ್ ಬಾಷಾ ಕುಷ್ಟಗಿ, ರೈತ ಮುಖಂಡ ರಾಮಯ್ಯ ಜವಳಗೇರಾ ಮಾತನಾಡಿದರು. ರೈತ ಮುಖಂಡರಾದ ಬಾಬರ್ ಪಟೇಲ್, ಚಂದ್ರಶೇಖರ ಗೊರಬಾಳ, ನಾಗರಾಜ ಪೂಜಾರ್, ಚಂದ್ರಶೇಖರ ಕ್ಯಾತ್ನಟ್ಟಿ, ಮಳ್ಳೆಪ್ಪ ಮುಳ್ಳೂರು, ಇಷಾಕ್ ಅಹ್ಮದ್, ನದೀಮ್ ನಾಯ್ಕ್, ಸಣ್ಣ ಈರಪ್ಪ ಪೂಜಾರ್, ಹೊಳೆಯಪ್ಪ, ಹೊನ್ನೂರ ಅಲಿ, ನಿಂಗಪ್ಪ ಗಾಳಿ, ಮಲ್ಲಪ್ಪ ಕಲ್ಲೂರ, ಬಾಷುಮೀಯ, ಪರಶುರಾಮ ಭಂಡಾರಿ ಸೇರಿದಂತೆ ರೈತರು ಭಾಗವಹಿಸಿದ್ದರು.