ಭಟ್ಕಳದಲ್ಲಿ ರಸ್ತೆ ನಿರ್ಮಿಸದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

| Published : Oct 05 2024, 01:43 AM IST

ಸಾರಾಂಶ

ಆಸರಕೇರಿ ಪಟ್ಟಣದ ಸೋನಾರಕೇರಿ, ಆಸರಕೇರಿಯ ಮುಖ್ಯ ರಸ್ತೆಯ ಮರುಡಾಂಬರೀಕರಣಕ್ಕೆ ಅನುದಾನ ಮಂಜೂರಾಗಿ 2 ವರ್ಷ ಕಳೆದರೂ ಗುತ್ತಿಗೆ ಪಡೆದ ಗುತ್ತಿಗೆದಾರ ಇನ್ನೂ ತನಕ ಕಾಮಗಾರಿ ಆರಂಭಿಸಿಲ್ಲ.

ಭಟ್ಕಳ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಕಾಮಗಾರಿ ಟೆಂಡರ್ ಪಡೆದು ವರ್ಷ ಕಳೆದರೂ ಸಮರ್ಪಕವಾಗಿ ಕಾಮಗಾರಿ ಆರಂಭಿಸದ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಆಸರಕೇರಿ, ಸೋನಾರಕೇರಿ ನಿವಾಸಿಗಳು ಶುಕ್ರವಾರ ಪುರಸಭೆ ಎದುರು ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ನಿವೃತ್ತ ಯೋಧ ಹಾಗೂ ಪುರಸಭೆಯ ಮಾಜಿ ಸದಸ್ಯ ಶ್ರೀಕಾಂತ ನಾಯ್ಕ, ಆಸರಕೇರಿ ಪಟ್ಟಣದ ಸೋನಾರಕೇರಿ, ಆಸರಕೇರಿಯ ಮುಖ್ಯ ರಸ್ತೆಯ ಮರುಡಾಂಬರೀಕರಣಕ್ಕೆ ಅನುದಾನ ಮಂಜೂರಾಗಿ 2 ವರ್ಷ ಕಳೆದರೂ ಗುತ್ತಿಗೆ ಪಡೆದ ಗುತ್ತಿಗೆದಾರ ಇನ್ನೂ ತನಕ ಕಾಮಗಾರಿ ಆರಂಭಿಸಿಲ್ಲ.

ಈ ರಸ್ತೆಯಲ್ಲಿ ಅತಿ ಹೆಚ್ಚು ಜನರು ಓಡಾಡುತ್ತಾರೆ. ತೀರಾ ಹದಗೆಟ್ಟ ರಸ್ತೆಯಿಂದಾಗಿ ಸಾರ್ವಜನಿಕರಿಗೆ ಓಡಾಡಲು ತೊಂದರೆ ಆಗುತ್ತಿದೆ. ಈ ಎರಡು ಗ್ರಾಮಗಳ ಜಾತ್ರೆ ಉತ್ಸವ ಹಾಗೂ ಭಜನಾ ಕಾರ್ಯಕ್ರಮಗಳು ದಿನಂಪ್ರತಿ ನಡೆಯುತ್ತಿದೆ. ಆದರೆ ರಸ್ತೆಯ ದುಸ್ಥಿತಿಯಿಂದ ಜನರು ಸದಾ ಸಮಸ್ಯೆ ಅನುಭವಿಸುತ್ತಿದ್ದಾರೆ. ಇದೇ ಯೋಜನೆಯಡಿ ಗುತ್ತಿಗೆದಾರ ಈ ಹಿಂದೆ ಈ ಭಾಗದಲ್ಲಿ ಮಾಡಿದ ಕಾಂಕ್ರಿಟ್‌ ರಸ್ತೆಯ ಕಾಮಗಾರಿಯೂ ಕಳಪೆ ಮಟ್ಟದಾಗಿದ್ದು, ಇದರ ಬಗ್ಗೆ ಮಾಹಿತಿ ಇದ್ದರೂ ಗುತ್ತಿಗೆದಾರನ ಮೇಲೆ ಕ್ರಮ ಜರುಗಿಸಿಲ್ಲ ಎಂದರು.

ಇನ್ನೋರ್ವ ಪುರಸಭೆ ಮಾಜಿ ಸದಸ್ಯ ವೆಂಕಟೇಶ ನಾಯ್ಕ ಆಸರಕೇರಿ ಮಾತನಾಡಿ, ಪುರಸಭೆಯ ಒಳರಚರಂಡಿ ಮ್ಯಾನ್‌ಹೋಲ್‌ ಕಳಪೆ ಕಾಮಗಾರಿಯಿಂದಾಗಿ ತ್ಯಾಜ್ಯ ನೀರು ಬಾವಿಗಳಿಗೆ ನೀರು ಕಲುಷಿತಗೊಂಡಿದ್ದು, ಸ್ಥಳೀಯರು ಶುದ್ಧ ನೀರಿಗಾಗಿ ಅಲೆದಾಡುವ ಸ್ಥಿತಿ ಉದ್ಭವವಾಗಿದೆ.

ಶಂಸುದ್ದೀನ ಸರ್ಕಲ್‌ ಮೂಲಕ ಹರಿದು ಬರುವ ಒಳಚರಂಡಿ ನೀರು ಮೇಲ್ಗಡೆ ಮಾರ್ಗವಾಗಿ ಹರಿಯಲು ಅವಕಾಶ ಇದ್ದರೂ ಆಸರಕೇರಿ ರಸ್ತೆಯ ಮೂಲಕ ಕೆಳಭಾಗದಲ್ಲಿ ಹರಿದು ಬರುವಂತೆ ಮಾಡಿ ಮ್ಯಾನ್‌ಹೋಲ್‌ನಲ್ಲಿ ನೀರಿನ ಒತ್ತಡ ಜಾಸ್ತಿಯಾಗಿ ಸೋರಿಕೆಯಾಗುವಂತೆ ಮಾಡಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಾರ್ವಜನಿಕರು ನಿತ್ಯ ತ್ಯಾಜ್ಯ ನೀರು ಕುಡಿಯುವಂತಾಗಿದ್ದು, ಪುರಸಭೆ ಈ ಕೂಡಲೇ ಇದರ ಬಗ್ಗೆ ಸೂಕ್ತ ಕ್ರಮ ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು, ನಗರೋತ್ಥಾನ ಹಾಗೂ ಒಳಚರಂಡಿ ಎರಡು ಕಾಮಗಾರಿಗಳ ಬಗ್ಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದರು. ಪುರಸಭೆ ಸದಸ್ಯ ರಾಘವೇಂದ್ರ ಶೇಟ್, ಸ್ಥಳೀಯರಾದ, ಸಂದೀಪ ಶೇಟ್, ಪಾಂಡುರಂಗ ನಾಯ್ಕ, ಪ್ರಕಾಶ ನಾಯ್ಕ, ರಾಮಚಂದ್ರ ನಾಯ್ಕ, ವಸಂತ ನಾಯ್ಕ, ಕೇಶವ ನಾಯ್ಕ, ವೆಂಕಟೇಶ ನಾಯ್ಕ, ರಾಜೇಶ ಮಹಾಲೆ, ಜಗದೀಶ ಮಹಾಲೆ ಮುಂತಾದವರಿದ್ದರು.