ಕನ್ನಡ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಲು ಆಗ್ರಹ

| Published : Apr 17 2024, 01:18 AM IST

ಸಾರಾಂಶ

15 ದಿನಗಳ ಒಳಗೆ ಕನ್ನಡದ ನಾಮಫಲಕ ಕಡ್ಡಾಯವಾಗಿ ಹಾಕದಿದ್ದರೆ ನಾಮಫಲಕಕ್ಕೆ ಮಸಿ ಬಳಿಯುವ ಕಾರ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಾಡಲಿದೆ ಎಂದು ಎಚ್ಚರಿಕೆ ನೀಡಲಾಯಿತು.

ಗೋಕರ್ಣ: ಇಲ್ಲಿನ ಹೋಟೆಲ್‌, ರೆಸಾರ್ಟ್, ವಸತಿಗೃಹಗಳು, ಅಂಗಡಿ ಮುಂಗಟ್ಟುಗಳಿಗೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಗೋಕರ್ಣ ಗ್ರಾಮ ಪಂಚಾಯಿತಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ನಂತರ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ನಾಯ್ಕ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ರೆಸಾರ್ಟ್‍ಗಳು, ರೆಸ್ಟೋರೆಂಟ್‍ಗಳು, ವ್ಯಾಪಾರ ಮಳಿಗೆಗಳಿಗೆ ನಿಯಮಾನುಸಾರ ಕನ್ನಡದಲ್ಲಿ ನಾಮಫಲಕ ಹಾಕಬೇಕು. ಇಲ್ಲಿನ ಸ್ಥಳೀಯರು ಕನ್ನಡದಲ್ಲಿ ನಾಮಫಲಕ ಅಳವಡಿಸಿದ್ದರೆ ಹೊರ ರಾಜ್ಯದಿಂದ ಬಂದು ವ್ಯಾಪಾರ ನಡೆಸುವವರು ಇಂಗ್ಲಿಷ್‌ನಲ್ಲಿ ನಾಮಫಲಕ ಅಳವಡಿಸಿದ್ದಾರೆ. ಅವರಿಗೆ ಕನ್ನಡ ನಾಡಿನ ವ್ಯಾಪಾರದ ಹಣ ಬೇಕು, ಕನ್ನಡದ ನಾಮಫಲಕ ಬೇಡ. 15 ದಿನಗಳ ಒಳಗೆ ಕನ್ನಡದ ನಾಮಫಲಕ ಕಡ್ಡಾಯವಾಗಿ ಹಾಕದಿದ್ದರೆ ನಾಮಫಲಕಕ್ಕೆ ಮಸಿ ಬಳಿಯುವ ಕಾರ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.

ಕರವೇ ತಾಲೂಕು ಅಧ್ಯಕ್ಷ ತಿಮ್ಮಪ್ಪ ನಾಯಕ ಮಾತನಾಡಿ, ಈಗಾಗಲೇ ಜಿಲ್ಲಾಧಿಕಾರಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಗ್ರಾಪಂ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.

ಕರವೇ ಯುವ ಘಟಕದ ಅಧ್ಯಕ್ಷ ಕುಮಾರ್ ದೀವಟಿಗಿ, ಸದಸ್ಯರಾದ ಅಶೋಕ್ ಗೌಡ, ಉಮೇಶ್ ಶೇಟ್, ವಿಜಯ ಮುಕ್ರಿ, ನಾಗು ಹೊಸನಗರ, ಮಂಜುನಾಥ ಬಂಗ್ಲೆಗುಡ್ಡ, ನಾಮದೇವ ಗಣಚಾರಿ, ವೀಣಾ ನಾಯ್ಕ, ಲಕ್ಷ್ಮೀ ಆಚಾರಿ, ಮಾಸ್ತಿ ಬಂಗ್ಲೆಗುಡ್ಡ, ನಾಗೇಶ ಶೇಟ್ ಮುಂತಾದವರು ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಮನವಿ ಸ್ವೀಕರಿಸಿ ನಾಮಫಲಕ ಅಳವಡಿಸಲು ಸೂಚಿಸುವ ಭರವಸೆ ನೀಡಿದರು.