ಸಾರಾಂಶ
ಶಿರಹಟ್ಟಿ: ತಾಲೂಕಿನಲ್ಲಿ ಕೈಗಾರಿಕೆಗಳ ಕೆಲಸ ಆರಂಭಿಸಲು ಮುಕ್ತ ಅವಕಾಶಗಳಿದ್ದರೂ ಸರಿಯಾದ ಮಾರ್ಗದರ್ಶನ ಹಾಗೂ ಕೈಗಾರಿಕೆ ಕೆಲಸಕ್ಕೆ ಅಗತ್ಯ ಭೂಮಿ (ಸ್ಥಳ) ಕೊರತೆ ಎದ್ದು ಕಾಣುತ್ತಿದ್ದು, ದುಡಿಯುವ ಕೈಗಳಿಗೆ ಸರ್ಕಾರ ಕೆಲಸ ನೀಡುವ ದೃಷ್ಟಿಯಿಂದ ತುರ್ತು ಸ್ವಂತ ಕೈಗಾರಿಕೋದ್ಯಮ ಆರಂಭಿಸಲು ಸೂಕ್ತ ಸ್ಥಳ ನೀಡಬೇಕು ಎಂದು ಆಗ್ರಹಿಸಿ ಶನಿವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ಸಾ ಮಿಲ್ ಮಾಲಿಕ ಹಾಗೂ ಕಟ್ಟಿಗೆ ವ್ಯಾಪಾರಸ್ಥರು ಮತ್ತು ಗುಡಿ ಕೈಗಾರಿಕೆ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಅಧ್ಯಕ್ಷ ಮಾಬೂಸಾಬ ಹಾಶಿಮಸಾಬ ಕನಕವಾಡ ಮಾತನಾಡಿ, ಸಣ್ಣ ಕೈಗಾರಿಕೆ ಅಡಿಯಲ್ಲಿ ಸೊಪ್ಪು, ಮೇಣದ ಬತ್ತಿ, ಊದಬತ್ತಿ ಮಾರುವವರಿಂದ ಹಿಡಿದು ಕೋಟ್ಯಂತರ ರುಪಾಯಿ ಬಂಡವಾಳ ಹಾಕಿ ಪ್ರಾರಂಭಿಸುವ ಕೈಗಾರಿಕೆಗಳಿಗೆ ಸದ್ಯ ಸ್ಥಳ ಇಲ್ಲದಾಗಿದೆ. ತಾಲೂಕಿನಲ್ಲಿ ಸಣ್ಣ ಕೈಗಾರಿಕೆಗಳ ಮೂಲಕ ಸಾವಿರಾರು ಸಂಖ್ಯೆಯ ಜನರು ಉದ್ಯೋಗವನ್ನು ಪಡೆದಿದ್ದು, ಶಿರಹಟ್ಟಿ ಪಟ್ಟಣದಲ್ಲಿ ಸುಮಾರು ವರ್ಷಗಳಿಂದಲೂ ಕೈಗಾರಿಕೋದ್ಯಮ ಕೆಲಸಗಳು ನಡೆಯುತ್ತಿವೆ. ಜನಸಂಖ್ಯೆಗೆ ಅನುಗುಣವಾಗಿ ಸ್ಥಳಾವಕಾಶ ನೀಡಬೇಕಾದ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಪಟ್ಟಣದ ನಾಲ್ಕು ದಿಕ್ಕಿನಲ್ಲೂ ರಿಯಲ್ ಎಸ್ಟೇಟ್ ದಂಧೆ ನಡೆದಿದೆ. ಅದಕ್ಕೆ ತಕ್ಕಂತೆ ಕೈಗಾರಿಕೆಗೂ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಸದ್ಯ ಸಾವಿರಾರು ಸಂಖ್ಯೆಯ ಜನ ಸ್ವಂತ ಕೈಗಾರಿಕೋದ್ಯಮ ಕೆಲಸದಲ್ಲಿ ತೊಡಗಿದ್ದು, ಇವರೊಂದಿಗೆ ನೂರಾರು ಸಂಖ್ಯೆ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿವೆ. ಸರ್ಕಾರವಾಗಲಿ ಸಂಬಂಧಪಟ್ಟ ಅಧಿಕಾರಿಗಳಾಗಲಿ ದುಡಿಯುವ ವರ್ಗವನ್ನು ಕಡೆಗಣಿಸಬಾರದು. ಈಗಾಗಲೇ ಲಕ್ಷಗಟ್ಟಲೇ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಂತ ಕೆಲಸ ಮಾಡುತ್ತಿದ್ದು, ದುಡಿಮೆಯಿಂದಲೇ ಪಡೆದ ಸಾಲ ತೀರಿಸುವ ಅನಿವಾರ್ಯತೆ ಇರುವುದರಿಂದ ಕೂಡಲೇ ಸ್ಥಳ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಅಂತಾ ಅಧಿಕೃತವಾಗಿ ನೋಂದಣಿಯಾಗಿದ್ದು, ಕೈಗಾರಿಕೆ ಇಲಾಖೆ ಅಧಿಕಾರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಇದರ ಪ್ರಯೋಜನ ಆಗುವಂತೆ ನೋಡಿಕೊಳ್ಳುವ ಜತೆಗೆ ದುಡಿಯುವ ವರ್ಗಕ್ಕೆ ಸೂಕ್ತ ಸ್ಥಳದ ಅವಕಾಶ ಕಲ್ಪಿಸಿ ಕೊಡಬೇಕು ಎಂದರು.ಶಿರಹಟ್ಟಿ ಪಟ್ಟಣದಲ್ಲಿ ಸಾಕಷ್ಟು ಜನ ದುಡಿಯುವ ವರ್ಗದವರು ಇರುವುದರಿಂದ ಕೈಗಾರಿಕೆ ಪ್ರಾರಂಭಿಸುವ ಇಚ್ಛಾಶಕ್ತಿ ಹೊಂದಿದ್ದಾರೆ. ಸೂಕ್ತ ಸ್ಥಳದ ಅವಕಾಶ ಸಿಗದೇ ಇರುವುದರಿಂದ ಕೈಕಟ್ಟಿ ಕುಳಿತುಕೊಂಡಿದ್ದು, ದುಡಿಮೆ ಇಲ್ಲದೇ ಬೇರೆಡೆಗೆ ಉದ್ಯೋಗ ಅರಸಿ ಗುಳೆ ಹೋಗುವ ಸ್ಥಿತಿ ಎದುರಿಸುವಂತಾಗಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ಹಿನ್ನಡೆಯಾಗಿ ಶಿಕ್ಷದಿಂದ ವಂಚಿತರಾಗುತ್ತಿದ್ದಾರೆ ಎಂದರು.ಇತ್ತೀಚಿನ ದಿನಗಳಲ್ಲಿ ವಲಸೆ ಹೆಚ್ಚುತ್ತಲೇ ಇದೆ. ಬಹಳಷ್ಟು ಹಳ್ಳಿಗಳಲ್ಲಿ ಹಿರಿಯರು ಮಾತ್ರವೇ ಇದ್ದಾರೆ. ಈಗಲಾದರೂ ತಾಲೂಕಿನ ಶಾಸಕರಾಗಲಿ, ಅಧಿಕಾರಿಗಳಾಗಲಿ ಇಲ್ಲವೇ ಸರ್ಕಾರವಾದರೂ ಅಭಿವೃದ್ದಿ ದೃಷ್ಟಿಕೋನದಿಂದ ಪರಿಸರಕ್ಕೆ ಪೂರಕವಾದ ಕೈಗಾರಿಕೆಗಳ ಕೆಲಸಕ್ಕೆ ಅವಕಾಶ ನೀಡಬೇಕು. ಬಡಾವಣೆಗಳನ್ನು ನಿರ್ಮಿಸುವುದಕ್ಕಿಂತ ಕೈಗಾರಿಕೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್ ಅನಿಲ ಬಡಿಗೇರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಡುವ ಭರವಸೆ ನೀಡಿದರು. ಮನವಿ ನೀಡುವಲ್ಲಿ ಮಾಬೂಸಾಬ ಹೆಸರೂರ, ಸವರಾಜ ದೇಸಾಯಿಪಟ್ಟಿ, ಅಮೀರ್ ಅಮ್ಜಾದ ಪಠಾಣ, ಮುತ್ತು ಬಡಿಗೇರ, ದೇವಪ್ಪ ಬಡಿಗೇರ, ವಾಸಿಮ್ ಕುಬುಸದ, ಅಲ್ತಾಫ್ ಮುಳಗುಂದ, ಸತೀಶ ಬಡಿಗೇರ, ತೌಸಿಫ್ ಕುಬುಸದ, ಬಾಷಾಸಾಬ ಬಡಿಗೇರ, ಅಬ್ದುಲ್‌ಸಾಬ್ ಬುವಾಜಿ, ಯುನುಸ್ ಕುಬುಸದ, ರಿಹಾನ್ ಹೆಸರೂರ, ಶೌಕತಲಿ ಕಾಗದಗಾರ ಇತರರು ಇದ್ದರು.