ನೇಹಾ ಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ

| Published : Apr 21 2024, 02:25 AM IST

ಸಾರಾಂಶ

ನೇಹಾ ಹಿರೇಮಠ ಕೊಲೆ ಘಟನೆಯನ್ನು ಖಂಡಿಸಿ ಹಿರೇಕೆರೂರು ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹಿರೇಕೆರೂರು

ನೇಹಾ ಹಿರೇಮಠ ಕೊಲೆ ಘಟನೆಯನ್ನು ಖಂಡಿಸಿ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ, ರಾಜ್ಯದಲ್ಲಿ ರಾಜಾರೋಷವಾಗಿ ಇಂತಹ ಕೃತ್ಯ ನಡೆಯುತ್ತಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ಇದರಿಂದ ಶಾಲಾ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ಭಯದ ವಾತಾವಾರಣ ಉಂಟಾಗುತ್ತಿದೆ. ರಾಜ್ಯದಲ್ಲಿ ಈ ಸರ್ಕಾರ ಬಂದ ಮೇಲೆ ಮಹಿಳೆಯರಿಗೆ, ಸಾರ್ವಜನಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಈ ಘಟನೆಯಿಂದ ಮನೆಯಿಂದ ಹೊರಗೆ ಬರಲು ವಿದ್ಯಾರ್ಥಿನಿಯರಿಗೆ ಭಯ ಆಗುತ್ತಿದೆ. ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಪ್ರಕರಣವನ್ನು ರಾಜ್ಯಪಾಲರು ಸಿಬಿಐಗೆ ಹಸ್ತಾಂತರಿಸಬೇಕು. ಸೂಕ್ತ ತನಿಖೆ ನಡೆಸಿ ಕೊಲೆ ಮಾಡಿರುವ ಅಪರಾಧಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಸ್.ಎಸ್. ಪಾಟೀಲ, ರವಿಶಂಕರ ಬಾಳಿಕಾಯಿ, ಎನ್.ಎಂ. ಈಟೇರ್, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಜಗದೀಶ ದೊಡ್ಡಗೌಡ್ರ, ಗೀತಾ ದಂಡಗೀಹಳ್ಳಿ, ಬಿ.ಟಿ. ಚಿಂದಿ, ರಮೇಶ ತೋರಣಗಟ್ಟಿ, ಮಂಜುಳಾ ಬಾಳಿಕಾಯಿ, ಬಸಮ್ಮ ಅಬಲೂರು, ನೀಲಮ್ಮ ಹೊಸಮನಿ, ದುರಗೇಶ ತಿರಕಪ್ಪನವರ, ಬಸನಗೌಡ ದೊಡ್ಡಗೌಡ್ರ, ಪ್ರಸನ್ನ ಜಾಡಬಂಡಿ, ರಾಜು ಕವಲಿ ಸೇರಿದಂತೆ ಸಿಇಎಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.