ಹೊರ ರಾಜ್ಯಗಳಾದ ಪಶ್ಚಿಮ ಬಂಗಾಳ, ಬಿಹಾರ, ಛತ್ತಿಸಘಡ, ಉತ್ತರಾಖಂಡ, ಉತ್ತರಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಸಾವಿರಾರು ಕಾರ್ಮಿಕರು ಇಲ್ಲಿನ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮರಿಯಮ್ಮನಹಳ್ಳಿ: ಪಟ್ಟಣದ ಮೂಲಕ ಹಾದು ಹೋಗುವ ರೈಲ್ವೆ ಲೈನ್‌ಗೆ ಮೇಲ್ಸೇತುವೆ ನಿರ್ಮಾಣ ಹಾಗೂ ಮರಿಯಮ್ಮನಹಳ್ಳಿ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವಂತೆ ಒತ್ತಾಯಿಸಿ ಪಟ್ಟಣದ ಗುರುಪಾದ ದೇವರಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಮರಿಯಮ್ಮನಹಳ್ಳಿಯು 33 ಹಳ್ಳಿಗಳನ್ನು ಒಳಗೊಂಡಿರುವ ದೊಡ್ಡ ಹೋಬಳಿ ಕೇಂದ್ರವಾಗಿದೆ. ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ನಾಲ್ಕೈದು ಬೃಹತ್ ಕೈಗಾರಿಕಾ ಕಾರ್ಖಾನೆಗಳನ್ನು ಹೊಂದಿದ್ದು, ಕೈಗಾರಿಕಾ ವಲಯವೆಂದು ಗುರುತಿಸಲ್ಪಟ್ಟಿದೆ. ಈ ಕಾರ್ಖಾನೆಗಳಲ್ಲಿ ರಾಜ್ಯದ ವಿವಿಧ ಭಾಗಗಳ ಹಾಗೂ ಹೊರ ರಾಜ್ಯಗಳಾದ ಪಶ್ಚಿಮ ಬಂಗಾಳ, ಬಿಹಾರ, ಛತ್ತಿಸಘಡ, ಉತ್ತರಾಖಂಡ, ಉತ್ತರಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಸಾವಿರಾರು ಕಾರ್ಮಿಕರು ಇಲ್ಲಿನ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೆಲ್ಲರು ಮುಖ್ಯವಾಗಿ ರೈಲು ಸಂಚಾರವನ್ನೇ ಅವಲಂಬಿಸಿದ್ದಾರೆ.

ಮರಿಯಮ್ಮನಹಳ್ಳಿ ಹೋಬಳಿ ಕೇಂದ್ರವು ವಾಣಿಜ್ಯ ಕೇಂದ್ರವಾಗಿದೆ. ಪಟ್ಟಣ ವ್ಯಾಪಾರದ ದೃಷ್ಟಿಯಿಂದ ಹುಬ್ಬಳ್ಳಿ, ಬೆಂಗಳೂರು, ಮಂಗಳೂರು, ಆಂಧ್ರಪ್ರದೇಶ ವಿವಿಧ ರಾಜ್ಯಗಳಿಗೆ ಇಲ್ಲಿನ ವರ್ತಕರು ರೈಲು ಸಂಚಾರವನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಮರಿಯಮ್ಮನಹಳ್ಳಿಯ ರೈಲು ನಿಲ್ದಾಣವು ಕೇವಲ ಹಾಲ್ಟಿಂಗ್ ಸ್ಟೇಷನ್ ಆಗಿದ್ದು, ಪ್ರಯಾಣಿಕರಿಗೆ ಯಾವುದೇ ಅನುಕೂಲಗಳಿಲ್ಲ, ಸುರಕ್ಷಿತೆಯಿಲ್ಲ. ಹಾಗಾಗಿ ಈ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ 24 ತಾಸು ರೆಗ್ಯುಲರ್ ನಿಲ್ದಾಣವಾಗಿ ಕಾರ್ಯ ನಿರ್ವಹಿಸುವಂತೆ ವ್ಯವಸ್ಥೆ ಕಲ್ಪಿಸಬೇಕು. ವಾಣಿಜ್ಯದ ಹಿತದೃಷ್ಟಿಯಿಂದ ಹರಿಹರ, ಹರಪನಹಳ್ಳಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿ, ಹೊಸಪೇಟೆ ಮಾರ್ಗವಾಗಿ ಹುಬ್ಬಳಿಗೆ ಪ್ರತಿದಿನ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬಳ್ಳಾರಿ, ಹೊಸಪೇಟೆ, ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ ಮಾರ್ಗವಾಗಿ ರಾಜಧಾನಿ ಬೆಂಗಳೂರಿಗೆ ಇಂಟರ್ ಸಿಟಿ ರೈಲು ಸಂಚಾರ ಆರಂಭಿಸಬೇಕು. ಇತ್ತೀಚೆಗೆ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಜನ ದಟ್ಟಣೆಯಿಂದಾಗಿ ಪಟ್ಟಣದ ಹೃದಯ ಭಾಗದಲ್ಲಿರುವ ಲೆವೆಲ್ ಕ್ರಾಸಿಂಗ್ ಗೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಮನವಿಯಲ್ಲಿ ಗಂಗಾವತಿ ಸತ್ಯನಾರಾಯಣ ಶೆಟ್ಟಿ, ಕುಂಚೂರು ಕಲೀಂ, ಸಿ.ಪ್ರಕಾಶ್, ಜಿ.ವಿ. ಸುಬ್ಬರಾವ್, ಎಂ.ಸೊಮೇಶ್ ಉಪ್ಪಾರ ಒತ್ತಾಯಿಸಿದ್ದಾರೆ.

ಮರಿಯಮ್ಮನಹಳ್ಳಿ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವಂತೆ ಒತ್ತಾಯಿಸಿ ಪಟ್ಟಣದ ಗುರುಪಾದ ದೇವರಮಠದ ಮಲ್ಲಿಕಾರ್ಜುನ ಶಿವಾಚಾರ್ಯರ ನೇತೃತ್ವದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.