ಕನಕಗಿರಿ ಪೋಲಿಸ್ ಠಾಣೆಯ ಪಿಐ ನಾರಾಯಣ್ ಜನಪರ ಕೆಲಸ ಮಾಡುತ್ತಿದ್ದರು. ಕೊಲೆ ಪ್ರಕರಣಗಳನ್ನು ೨೪ ಗಂಟೆಯಲ್ಲೆ ಬೇಧಿಸಿ ಕನಕಗಿರಿ ಇತಿಹಾಸದಲ್ಲಿಯೇ ಹೊಸ ಚಾಪು ಮೂಡಿಸಿದ್ದಾರೆ

ಕನಕಗಿರಿ: ಹಲವು ಪ್ರಕರಣಗಳನ್ನು ೨೪ ಗಂಟೆಯಲ್ಲೆ ಬೇಧಿಸಿ ಉತ್ತಮ ಕೆಲಸ ಮಾಡುತ್ತಿದ್ದ ಪಿಐ ವಿ. ನಾರಾಯಣ ಅವರ ಅಮಾನತು ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ದಲಿತ ಪರ ಸಂಘಟನೆಗಳ ಒಕ್ಕೂಟವು ಶುಕ್ರವಾರ ತಹಸೀಲ್ದಾರರ ಮೂಲಕ ಬಳ್ಳಾರಿ ವಲಯದ ಐಜಿಪಿಗೆ ಮನವಿ ಸಲ್ಲಿಸಿತು.

ಸಂಘಟನೆಯ ತಾಲೂಕು ಸಂಚಾಲಕ ಪಾಮಣ್ಣ ಅರಳಿಗನೂರು ಮಾತನಾಡಿ, ಕನಕಗಿರಿ ಪೋಲಿಸ್ ಠಾಣೆಯ ಪಿಐ ನಾರಾಯಣ್ ಜನಪರ ಕೆಲಸ ಮಾಡುತ್ತಿದ್ದರು. ಕೊಲೆ ಪ್ರಕರಣಗಳನ್ನು ೨೪ ಗಂಟೆಯಲ್ಲೆ ಬೇಧಿಸಿ ಕನಕಗಿರಿ ಇತಿಹಾಸದಲ್ಲಿಯೇ ಹೊಸ ಚಾಪು ಮೂಡಿಸಿದ್ದಾರೆ. ಹಲವು ತಿಂಗಳ ಹಿಂದಿನಿಂದ ಬೇಧಿಸಲಾಗದ ಜಟೀಲ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಒದಗಿಸಿದ್ದಾರೆ. ಆ. ೧೫ರಂದು ನಡೆದ ಬಸವರಾಜರೆಡ್ಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೇಧಿಸಿ ೫ ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಹೀಗೆ ಅನೇಕ ಪ್ರಕರಣ ಬೇಧಿಸಿದ ಪಿಐ ನಾರಾಯಣ ಅವರು ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿದ್ದರು. ಈ ಅಧಿಕಾರಿ ಗಂಗಾವತಿಯಲ್ಲಿ ಬಂದೋಬಸ್ತ್‌ ತೆರಳಿದ್ದು, ಅವರನ್ನು ಕರ್ತವ್ಯ ಲೋಪ ಹಾಗೂ ನಿರ್ಲಕ್ಷದಿಂದ ಅಮಾನತು ಮಾಡಿರುವುದು ಖಂಡನೀಯ. ಅದಕ್ಕಾಗಿ ಐಜಿಪಿ ಈ ಬಗ್ಗೆ ಕೂಲಕುಂಶವಾಗಿ ಪರಿಶೀಲನೆ ನಡೆಸಿ ಅಮಾನತು ಆದೇಶ ಹಿಂಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡ ನೀಲಕಂಠ ಬಡಿಗೇರ, ಬಿಜೆಪಿ ಮುಖಂಡ ಕಂಠೆಪ್ಪ ಮ್ಯಾಗಡೆ ಹಾಗೂ ಮಾತಂಗ ಮಹಾಸಭಾದ ತಾಲೂಕಾಧ್ಯಕ್ಷ ಲಿಂಗಪ್ಪ ಪೂಜಾರ ಮಾತನಾಡಿದರು.

ಈ ಸಂದರ್ಭದಲ್ಲಿ ಕರಿಯಪ್ಪ ಗುಡಿಮನಿ, ನಾಗೇಶ ಬಡಿಗೇರ, ಸುಭಾಷ ಕೆ, ಶಾಂತಪ್ಪ ಬಸರಿಗಿಡ, ರವಿ ಭಜಂತ್ರಿ, ಶಿವಕುಮಾರ ಈಚನಾಳ, ಸಣ್ಣ ದುರುಗಪ್ಪ ಗೋರಾಳಕೇರಿ, ತಿಮ್ಮಣ್ಣ ಚಲುವಾದಿ, ದುರುಗಪ್ಪ ದೊಡ್ಮನಿ, ಅಣ್ಣಪ್ಪ ಭಜಂತ್ರಿ, ಹನುಮಂತ ಬಸರಿಗಿಡ, ಸುರೇಶ ಕುರುಗೋಡ, ಪಾಮಣ್ಣ ಕಲಿಕೇರಿ, ಶೋಭಾ ರಾಂಪುರ ಸೇರಿ ಇತರರು ಇದ್ದರು.