ರೋಣ: ವಿದ್ಯುತ್ ಕ್ಷೇತ್ರದ ಹೆಚ್ಚು ಆಕ್ರಮಣಕಾರಿ ಖಾಸಗೀಕರಣದ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರದ ಹೊಸ ಕರಡು ವಿದ್ಯುತ್ ಮಸೂದೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಸಿಐಟಿಯು ಹಾಗೂ ವಿವಿಧ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ಜರುಗಿತು.

ಪಟ್ಟಣದ ಸಿದ್ಧಾರೂಢ ಮಠದಿಂದ ಪಾದಯಾತ್ರೆ ಆರಂಭಗೊಂಡು ಸೂಡಿ ವೃತ್ತ, ಮುಲ್ಲನಬಾವಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ವೇಳೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಧ ಜಿಲ್ಲಾ ಮುಖಂಡ ಬಾಲು ರಾಠೋಡ‌ ಮಾತನಾಡಿ, ವಿದ್ಯುತ್ ಸಾಮಾಜಿಕ ಹಕ್ಕು. ಅದು ಸರಕಲ್ಲ. ಸರ್ಕಾರವು ವಿದ್ಯುತ್ ಮಸೂದೆ ಮೂಲಕ ಉತ್ಪಾದನೆ ಮತ್ತು ವಿತರಣೆಯಲ್ಲಿ ಎಲ್ಲ ರೀತಿಯ ಖಾಸಗೀಕರಣ ಮತ್ತು ಫ್ರ‍್ಯಾಂಚೈಸಿಂಗ್ ತರುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ರೈತ ಕೃಷಿ ಕೂಲಿಕಾರರ ಹಿತವನ್ನು ಕಾಯುವ ಮೂಲಕ ಜನವಿರೋಧಿ ಮಸೂದೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ನೌಕರರ ಸಂಘದ ಮುಖಂಡ ಬಸವರಾಜ ಮಂತೂರ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕಾರ್ಮಿಕರ ಹಿತಾಸಕ್ತಿ ರಕ್ಷಿಸಲು ಕೇಂದ್ರದ ಬಿಜೆಪಿ ಸರ್ಕಾರ ರೂಪಿಸಿರುವ 4 ಕಾರ್ಮಿಕ ಸಂಹಿತೆಗಳನ್ನು ತಿರಸ್ಕರಿಸುವ, ಮಾರ್ಪಡಿಸುವ, ಹೊಸದಾಗಿ ಪರ್ಯಾಯ ಕಾರ್ಮಿಕ ಕಾನೂನು ರೂಪಿಸುವ ಸಂವಿಧಾನಬದ್ಧ ಅಧಿಕಾರ ಬಳಸುವ ಹೊಣೆಗಾರಿಕೆ ಇದ್ಯಾವುದನ್ನು ಪ್ರದರ್ಶಿಸಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಬಂಡವಾಳಗಾರರ ಪರ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ಕಿಡಿಕಾರಿದರು. ರೈತ ಮುಖಂಡ ಎಂ.ಬಿ. ಚೌಡರೆಡ್ಡಿ ಮಾತನಾದರು. ತಹಸೀಲ್ದಾರ್ ನಾಗರಾಜ ಕೆ. ಅವರ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡ ಎಂ.ಬಿ. ಚೌಡರೆಡ್ಡಿ, ಸಂಗಣ್ಣ ದಂಡಿನ, ಸಾವಿತ್ರಿ ಸೋಮನಕಟ್ಟಿ, ಶರಣಪ್ಪ ಹುಲ್ಲೂರ, ಅಶೋಕ್ ಸಜ್ಜನ, ಸಿದ್ದು ಕಂಠಿ ರುದ್ರಯ್ಯ ಸಾಲಿಮಠ, ಗೂರಪ್ಪ ಕಣ್ಣೂರ, ಹನುಮಂತ ತಾಳಿ, ನಿಂಗಪ್ಪ ಅರಹುಣಸಿ, ಮುತ್ತಪ್ಪ ಅರುಹುಣಸಿ, ಗಂಗಮ್ಮ ದ್ಯಾವರಡ್ಡಿ, ನೀಲಾಂಬಿಕಾ ಬೀರನೂರ ವಿವಿಧ ಸಂಘಟನೆ ಮುಖಂಡರು ಭಾಗವಹಿಸಿದ್ದರು.