ಕರ್ನಾಟಕ ರಾಜ್ಯದ 20668 ಚದರ ಕಿಮೀ ಘಟ್ಟಗಳ 1449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಣೆ ಮಾಡಲು ಕಳೆದ ಜು.27ರಂದು ಕರಡು ಅಧಿಸೂಚನೆಯನ್ನು ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯ ಪ್ರಕಟಿಸಿರುವುದು ಮಲೆನಾಡಿನ ರೈತರಿಗೆ ಮರಣ ಶಾಸನ ಬರೆದಂತಾಗಿದೆ ಎಂದು ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕರ್ನಾಟಕ ರಾಜ್ಯದ 20668 ಚದರ ಕಿಮೀ ಘಟ್ಟಗಳ 1449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಣೆ ಮಾಡಲು ಕಳೆದ ಜು.27ರಂದು ಕರಡು ಅಧಿಸೂಚನೆಯನ್ನು ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯ ಪ್ರಕಟಿಸಿರುವುದು ಮಲೆನಾಡಿನ ರೈತರಿಗೆ ಮರಣ ಶಾಸನ ಬರೆದಂತಾಗಿದೆ ಎಂದು ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಕಿಡಿಕಾರಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸೂಚನೆ ಜಾರಿಗೊಂಡಲ್ಲಿ ಘೋಷಿತ ಗ್ರಾಮಗಳ ಜನರಿಗೆ ಸಾಕಷ್ಟು ತೊಂದರೆಯಾಗಲಿದೆ. ಈ ಅಧಿಸೂಚನೆ ಕೇವಲ ಅಧಿಕಾರಿ ಮಟ್ಟದ ಚರ್ಚೆ, ತೀರ್ಮಾನಗಳಾಗಿವೆ. ಉದ್ದೇಶಿತ ಸೂಕ್ಷ್ಮ ವಲಯದ ಗ್ರಾಮಗಳ ಗ್ರಾಮ ಸಭೆಯನ್ನು ಕರೆದು ಸ್ಥಳೀಯ ಜನರ ವಿಶ್ವಾಸದೊಂದಿಗೆ ಸಾಧಕ-ಬಾಧಕಗಳ ಚರ್ಚೆ ಮಾಡದೆ 1449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯದಲ್ಲಿ ಸೇರಿಸಲಾಗಿದೆ. ಅದರಂತೆ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ, ಶಿಕಾರಿಪುರ ಭಾಗದ 473 ಇದರ ಅಡಿಯಲ್ಲಿ ಬರಲಿವೆ ಎಂದು ಆರೋಪಿಸಿದರು.

ಘೋಷಿತ ಗ್ರಾಮಗಳ ವಸತಿ ಪ್ರದೇಶ, ಕೃಷಿಭೂಮಿ, ಗೋಮಾಳ, ಪಟ್ಟಾಭೂಮಿ, ರಸ್ತೆ, ನೀರಿನ ಸೌಕರ್ಯ, ಗ್ರಾಮದಲ್ಲಿರುವ ಮೂಲ ಸೌಕರ್ಯ ಇತ್ಯಾದಿ ಪ್ರದೇಶಗಳನ್ನು ಇಎಸ್‌ಎಯಿಂದ ಹೊರಗಿಡದಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಮಲೆನಾಡಿನ ರೈತರಿಗೆ ಮರಣ ಶಾಸನವಗಿರುವ ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದ ಅವರು, ಈ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳ ರೈತರು, ಗ್ರಾಮಸ್ಥರು, ಸಹಕಾರಿ ಸಂಘ ಸಂಸ್ಥೆಗಳು ವರದಿಯ ಜಾರಿ ವಿರೋಧಿಸಿ ಆಕ್ಷೇಪಣೆಯನ್ನು ಸಲ್ಲಿಸುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದೇವೆ ಎಂದರು.

ಕಸ್ತೂರಿ ರಂಗನ್ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಆದಾಗಿನಿಂದಲೂ ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಮಲೆನಾಡಿನ ಭಾಗದ ರೈತರ ಬಾಳಿನ ಮೇಲೆ ತೂಗುಗತ್ತಿಯಾಗಿ ಪರಿಣಮಿಸಿದೆ. 2013ರಿಂದಲೂ ಕೇಂದ್ರ ಸರ್ಕಾರ ಅನೇಕ ಬಾರಿ ಈ ವರದಿ ಜಾರಿಗೆ ಸಂಬಂಧಿಸಿದಂತೆ ಅನೇಕ ಬಾರಿ ತಿದ್ದುಪಡಿ ಮಾಡುತ್ತಲೇ ಬಂದಿದೆ. ಆದರೆ ಅವು ಈ ಭಾಗದ ರೈತರ ನೆರವಿಗೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಚಟುವಟಿಕೆಗಳ ಮೇಲೆ ನಿರ್ಬಂಧ, ರಾಸಾಯನಿಕ ಗೊಬ್ಬರಗಳ ಉಪಯೋಗಗಳ ನಿರ್ಬಂಧ, ಕಡ್ಡಾಯ ಸಾವಯವ ಕೃಷಿ ಪದ್ಧತಿ ಹೇರಿಕೆ, ಯಂತ್ರೋಪಕರಣಗಳ ನಿಷೇಧ ಇತ್ಯಾದಿ ನಿರ್ಬಂಧಗಳನ್ನು ರೈತರು ಒಪ್ಪಲು ಸಾಧ್ಯವೇ ಇಲ್ಲ. ಅರಣ್ಯ ಮತ್ತು ಸೂಕ್ಷ್ಮವಲಯದಿಂದ ಕಾಡುಪ್ರಾಣಿಗಳು ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳಿಗೆ ದಾಳಿ ಇಡದಂತೆ ತಡೆ -ನಿರ್ಬಂಧ ಗೋಡೆ ನಿರ್ಮಾಣ ಮಾಡಬೇಕು. ಆ ಮೂಲಕ ಈ ಭಾಗದ ಗ್ರಾಮೀಣ ಜನತೆಯ ಕೃಷಿ ಚಟುವಟಿಕೆ ಅಭಿವೃದ್ಧಿ, ಮೂಲಕ ಸೌಕರ್ಯಗಳ ಅಭಿವೃದ್ಧಿಗೆ ಯಾವ ಬಾಧಕಗಳೂ ಆಗದಂತೆ ಸ್ಥಳೀಯರ ಒಳಗೊಳ್ಳುವಿಕೆ ಮುಖಾಂತರವೇ ಪಶ್ಚಿಮಘಟ್ಟಗಳ ರಕ್ಷಣೆ ಸಾಧ್ಯ ಎಂಬುದನ್ನು ಸರ್ಕಾರಗಳು ಮನವರಿಕೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ 5 ತಾಲೂಕುಗಳಲ್ಲಿ ಈ ಪಾದಯಾತ್ರೆ ನಡೆಯುತ್ತದೆ. ಈ ಯಾತ್ರೆಯಲ್ಲಿ ಡಿಸಿಸಿ ಬ್ಯಾಂಕ್ ಹಾಲು ಒಕ್ಕೂಟ ಸೇರಿದಂತೆ ಪಶ್ಚಿಮಘಟ್ಟದ ರೈತ ಸಹಕಾರಿ ಸಂಸ್ಥೆಗಳು ಪಾಲ್ಗೊಳ್ಳುತ್ತವೆ. ಹೊಸನಗರದಲ್ಲಿ ಆ.29ರಂದು ಪಾದಯಾತ್ರೆ ಆರಂಭವಾಗುತ್ತದೆ. ಸೆ.29ರೊಳಗೆ ಪಾದಯಾತ್ರೆಗಳು ಮುಗಿದ ನಂತರ ಆಕ್ಟೋಬರ್ ಕೊನೆಯ ವಾರದಲ್ಲಿ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸಿ ಬಹುದೊಡ್ಡ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗುವುದು ಎಂದರು.

ಈ ವರದಿಯನ್ನು ಯಾವ ಕಾರಣಕ್ಕಾಗಿ ವಿರೋಧಿಸಲಾಗುತ್ತಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ರೈತ ಸಹಕಾರಿ ವೇದಿಕೆ ಮೂಲಕ ವರದಿ ನೀಡಲಾಗುತ್ತಿದ್ದು, ಕೃಷಿ ತಜ್ಞ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಜಿಲ್ಲೆಯ 473 ಗ್ರಾಮಗಳಲ್ಲಿನ ಬಾಧಕಗಳ ಕುರಿತು ಅಧ್ಯಯನ ಕೈಗೊಳ್ಳಲಾಗುವುದು ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ಬಿ.ಆರ್. ಜಯಂತ್, ವಿದ್ಯಾಧರ್, ದುಗ್ಗಪ್ಪಗೌಡ, ಜಿ.ಎನ್. ಸುಧೀರ್, ವಿನಯಕುಮಾರ್, ಎಸ್.ಕೆ. ಮರಿಯಪ್ಪ, ರಮೇಶ್ ಶಂಕರಘಟ್ಟ, ವಿರೂಪಾಕ್ಷಪ್ಪ ಮೊದಲಾದವರಿದ್ದರು.

--

ಮಲೆನಾಡಿನ ರೈತ ವಿರೋಧಿ, ಪರಿಸರ ಮಾರಕ ಕಸ್ತೂರಿರಂಗನ್ ವರದಿಯ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿದ 7ನೇ ಕರಡು ಅಧಿಸೂಚನೆ ವಿರೋಧಿಸಿ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆಯು ವಿವಿಧ ಪರಿಸರ, ಸಹಕಾರಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆ.29ರಂದು ಹೊಸನಗರದಲ್ಲಿ ರೈತರ ಒಂದು ದಿನದ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಬಳಿಕ ಜಿಲ್ಲೆಯ ಸಾಗರ, ತೀರ್ಥಹಳ್ಳಿ ಮೊದಲಾದ ತಾಲೂಕುಗಳಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಅಕ್ಟೋಬರ್‌ನಲ್ಲಿ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಈ ವರದಿ ವಿರೋಧಿಸಿ ಜಿಲ್ಲಾಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು.

-ಆರ್.ಎಂ.ಮಂಜುನಾಥಗೌಡ, ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆಯ ಅಧ್ಯಕ್ಷ.