ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕ್ಯಾತುಂಗೆರೆ ಗ್ರಾಮದ ಸರ್ವೇ ನಂ 115/3 ಮತ್ತು 115/4ರ ಜಮೀನು ಹದ್ದುಬಸ್ತು ನಿಗದಿಗೆ ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರು ನಿರ್ದೇಶನ ನೀಡಿರುವುದನ್ನು ಹಿಂಪಡೆಯಬೇಕು ಎಂದು ರಾಜ್ಯ ಮಾಂಡವ್ಯ ಗೃಹ ನಿರ್ಮಾಣ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಸಿದ್ದರಾಜು ಒತ್ತಾಯಿಸಿದರು.ನಮ್ಮ ಸಂಘದಿಂದ ಕ್ಯಾತುಂಗೆರೆ ಗ್ರಾಮದ ಸರ್ವೇ ನಂ 27/1, 27/2, 27/3, 27/6, 27/7, 116/1, 116/2, 116/3, 116/4ಕ್ಕೆ ಹೊಂದಿಕೊಂಡಂತಿದ್ದು. ಏಕ ಪಕ್ಷೀಯವಾಗಿ 115/3 ಮತ್ತು 115/4ರ ಜಮೀನು ಹದ್ದುಬಸ್ತು ಮಾಡಿದಲ್ಲಿ ಸಂಘದ ಜಮೀನಿನಲ್ಲಿ ತೊಡಕುಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಘದಿಂದ ನಿರ್ಮಾಣವಾಗಿರುವ ಬಡಾವಣೆಯಲ್ಲಿ 101 ನಿವೇಶನಗಳನ್ನು ನಿರ್ಮಿಸಿ, 93 ನಿವೇಶನಗಳನ್ನು ಹಂಚಲಾಗಿದೆ. ಇನ್ನು 8 ನಿವೇಶನಗಳು ಮಾತ್ರ ಬಾಕಿಯಿದ್ದು, ಈಗ ಹದ್ದುಬಸ್ತು ಮಾಡಿದರೆ ನಿವೇಶನ ಪಡೆದವರನ್ನು ಅತಂತ್ರ ಸ್ಥಿತಿಗೆ ದೂಡಿದಂತಾಗುತ್ತದೆ. ಈಗಾಗಲೇ ಸಂಘಕ್ಕೆ ಸಂಬಂಧಿಸಿದಂತೆ ಭೂಮಿಯನ್ನು ಇಲಾಖೆಯಿಂದ ಸರ್ವೆ ಮಾಡಿ ಹದ್ದುಬಸ್ತು ಮಾಡಲಾಗಿದೆ. ಯಾವುದೇ ವ್ಯತ್ಯಾಸವಿಲ್ಲ ಎಂಬ ವರದಿಯನ್ನು ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರ ಗಮನಕ್ಕೆ ತರಲಾಗಿದೆ ಎಂದರು.ಈ ಪ್ರಕರಣದ ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯದ ಅಂತಿಮ ಆದೇಶ ಪ್ರಕಟಿಸುವವರೆಗೂ ಯಾವುದೇ ಕಾರಣಕ್ಕೂ ಸರ್ವೆ ಮಾಡಬಾರದು ಎಂದು ಆಗ್ರಹಿಸಿದ ಅವರು, ಹಾಗಿದ್ದರೂ ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರು ಹದ್ದುಬಸ್ತು ಮಾಡುವುದೇ ಆದಲ್ಲಿ ಎರಡೂ ಕಡೆಯಿಂದ ಜಂಟಿ ಸರ್ವೇ ಮಾಡಲು ಮುಂದಾಗುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘ ಅಧ್ಯಕ್ಷ ಎಂ.ಕೆ.ಜಗದೀಶ, ಷಡಕ್ಷರಿ ಇದ್ದರು.ಕೆಆರ್‌ಎಸ್ ಯೋಜನ ಮಟ್ಟದ ನೀರು ಬಳಕೆದಾರ ಸಂಘಕ್ಕೆ ಎಚ್.ಕೃಷ್ಣ ಅಧ್ಯಕ್ಷರಾಗಿ ಆಯ್ಕೆ
ಮಂಡ್ಯ:ಕೆಆರ್‌ಎಸ್ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳ ನೂತನ ಅಧ್ಯಕ್ಷರಾಗಿ ಹಳುವಾಡಿ ಕೃಷ್ಣ, ಉಪಾಧ್ಯಕ್ಷರಾಗಿ ಟಿ.ಎಂ.ಹೊಸೂರು ಎಚ್.ಡಿ.ಮಹದೇವು ಅವಿರೋಧವಾಗಿ ಆಯ್ಕೆಯಾದರು.
ನಗರದ ಸಣ್ಣ ನೀರಾವರಿ ಇಲಾಖೆ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಎಚ್.ಕೃಷ್ಣ ಹಾಗೂ ಎಚ್.ಡಿ.ಮಹಾದೇವು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಸಹಕಾರ ಇಲಾಖೆ ಸಹಾಯಕ ರಿಜಿಸ್ಟರ್ ಅನಿತಾ ಘೋಷಣೆ ಮಾಡಿದರು.ಈ ವೇಳೆ ಮಾಜಿ ಅಧ್ಯಕ್ಷರಾದ ಕೆ.ಎಲ್.ದೊಡ್ಡಲಿಂಗೇಗೌಡ, ಬಿ.ಎಂ.ರಘು, ಮಾಜಿ ಉಪಾಧ್ಯಕ್ಷರಾದ ಮಂಗಲ ಎಂ.ಯೋಗೀಶ್, ಎನ್.ಡಿ.ಗೌಡ, ನಿರ್ದೇಶಕರಾದ ಬಿ.ಎಂ.ನಂಜೇಗೌಡ, ಎಚ್.ಪಿ.ಮಹೇಶ್, ಡಿ.ಶಿವರಾಜು, ಪಿ.ಪಂಚಲಿಂಗೇಗೌಡ, ಎಸ್.ವಿ.ರಮೇಶ್, ಕೆ.ಸಿ.ಚನ್ನಪ್ಪ, ನಾಗರಾಜು, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರು, ಭೂ ಅಭಿವೃದ್ಧಿ ಅಧಿಕಾರಿ, ಮೈಸೂರು ಕಾಡಾ ಇಂಜಿನಿಯರ್, ಉಪಸ್ಥಿತರಿದರು.