ರಾಣಿಬೆನ್ನೂರು: ವಿದ್ಯಾರ್ಥಿ ವಿರೋಧಿ ನೀತಿ ಹಿಂಪಡೆಯಲು ಒತ್ತಾಯ

| Published : Jan 09 2024, 02:00 AM IST / Updated: Jan 09 2024, 05:28 PM IST

ರಾಣಿಬೆನ್ನೂರು: ವಿದ್ಯಾರ್ಥಿ ವಿರೋಧಿ ನೀತಿ ಹಿಂಪಡೆಯಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಕೂಡಲೇ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತ ಭವಿಷ್ಯಕ್ಕೆ ತೊಡಕಾಗಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ವಾಪಸು ಪಡೆಯಲು ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಕೇಂದ್ರ ಸರ್ಕಾರ ಕೂಡಲೇ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತ ಭವಿಷ್ಯಕ್ಕೆ ತೊಡಕಾಗಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ವಾಪಸು ಪಡೆಯಲು ಮುಂದಾಗಬೇಕು ಎಂದು ಎಸ್‌ಎಫ್‌ಐ ಮಾಜಿ ಅಧ್ಯಕ್ಷ, ನ್ಯಾಯವಾದಿ ಮೃತ್ಯುಂಜಯ ಗುದಿಗೇರ ಒತ್ತಾಯಿಸಿದರು.

ನಗರದ ಬಸ್‌ನಿಲ್ದಾಣ ಮುಂಭಾಗದ ಸ್ವಾತಂತ್ರ‍್ಯ ಹೋರಾಟಗಾರ ಮೆಣಸಿನಹಾಳ ತಿಮ್ಮನಗೌಡರ ಪ್ರತಿಮೆ ಮುಂದೆ ಸೋಮವಾರ ಶಿಕ್ಷಣ ಉಳಿಸಿ, ಎನ್‌ಇಪಿ ತಿರಸ್ಕರಿಸಿ, ಭಾರತ ಉಳಿಸಿ, ಬಿಜೆಪಿ ತಿರಸ್ಕರಿಸಿ ಎಂಬ ಘೋಷಣೆ ಅಡಿಯಲ್ಲಿ ಎಸ್‌ಎಫ್‌ಐ ಸೇರಿದಂತೆ ರಾಷ್ಟ್ರಮಟ್ಟದಲ್ಲಿ 16 ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟವು ಜ.12ರಂದು ಹಮ್ಮಿಕೊಂಡಿರುವ ಪಾರ್ಲಿಮೆಂಟ್ ಚಲೋ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.

2 ಲಕ್ಷ ಉದ್ಯೋಗ ನೀಡುತ್ತೇವೆ ಎಂದು ಸುಳ್ಳು ಭರವಸೆ ನೀಡಿದ ಕೇಂದ್ರ ಸರ್ಕಾರ ಉದ್ಯೋಗದ ಸೃಷ್ಟಿ ಬದಲಾಗಿ ಉದ್ಯೋಗಗಳನ್ನು ನಾಶ ಮಾಡುತ್ತಿರುವುದು ಸರಿಯಲ್ಲ. ಸರ್ಕಾರಿ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳ ಹಾಸ್ಟೆಲ್‌ಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಸರ್ಕಾರ ವಿದ್ಯಾರ್ಥಿಗಳ ತಕ್ಕಂತೆ ವಸತಿ ನಿಲಯಗಳನ್ನು ಹೆಚ್ಚಿಸಬೇಕು ಹಾಗೂ ಉತ್ತಮ ಗುಣಮಟ್ಟದ ಆಹಾರ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್. ಮಾತನಾಡಿ, ಶಿಕ್ಷಣದ ಖಾಸಗೀಕರಣ, ವಾಣಿಜ್ಯೀಕರಣ ಮತ್ತು ಕೇಂದ್ರೀಕರಣವನ್ನು ನಿಲ್ಲಿಸಬೇಕು, ಸ್ನಾತಕೋತ್ತರ ಹಂತದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಬೇಕು. ವಿದ್ಯಾರ್ಥಿ ವಿರೋಧಿಯಾಗಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020, ಎನ್‌ಇಟಿ ಮತ್ತು ಇತ್ತೀಚೆಗೆ ಜಾರಿಗೆ ತಂದ ಗುಜರಾತ್ ಸಾಮಾನ್ಯ ವಿಶ್ವವಿದ್ಯಾಲಯ ಕಾಯಿದೆಯನ್ನು ರದ್ದುಗೊಳಿಸಬೇಕು. 

ಹಾಸ್ಟೆಲ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಅವುಗಳ ವಿದ್ಯಾರ್ಥಿ ಸಾಮರ್ಥ್ಯವನ್ನು ಹೆಚ್ಚಿಸಬೇಕು. ನಿಯಮಿತವಾಗಿ ವಿದ್ಯಾರ್ಥಿವೇತನಗಳು ಮತ್ತು ಫೆಲೋಶಿಪ್‌ಗಳನ್ನು ನೀಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಇತರ ಸರ್ಕಾರಿ ವಲಯಗಳಲ್ಲಿ ಖಾಲಿ ಇರುವ ಶಿಕ್ಷಕರ ಮತ್ತು ಉಪನ್ಯಾಸಕರ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. 

ಪ್ರತಿ ನಿರುದ್ಯೋಗಿಗಳಿಗೆ ಕನಿಷ್ಠ ₹5 ಸಾವಿರ ಮಾಸಿಕ ನಿರುದ್ಯೋಗ ಭತ್ಯೆ ನೀಡಬೇಕು ಎಂಬ ಬೇಡಿಕೆಗಳು ಸೇರಿದಂತೆ ಅನೇಕ ಬೇಡಿಕೆಗಳನ್ನಿಟ್ಟುಕೊಂಡು ಪಾರ್ಲಿಮೆಂಟ್ ಚಲೋ ನಡೆಸಲಾಗುತ್ತಿದೆ. ತಾಲೂಕು, ಜಿಲ್ಲೆಯಿಂದಲೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದರು.

ಎಸ್‌ಎಫ್‌ಐ ಮಾಜಿ ಮುಖಂಡ, ನ್ಯಾಯವಾದಿ ಗಣೇಶ ದೇವರಮನಿ, ಪ್ರಗತಿಪರ ಚಿಂತಕ, ಕಲಾವಿದ ಬಸವರಾಜ ಸಾವಕ್ಕನವರ, ತಾಲೂಕು ಉಪಾಧ್ಯಕ್ಷ ನೇಹಲ್‌ಖಾನ್ ಗಂಗಾವತಿ, ಮುಖಂಡರಾದ ಲಕ್ಷ್ಮಣ ಕೆಂಗಪ್ಪಳವರ, ಜಯಮ್ಮ ಮುದ್ದಿ, ಹರ್ಷಾ ಕರಿಯಜ್ಜಿ, ಅಭಿಷೇಕ ಕುಸಗೂರ, ಹನುಮಂತ ಪೂಜಾರ, ರಾಹುಲ್ ಲಮಾಣಿ, ನಿಂಗರಾಜ ಉದಗಟ್ಟಿ, ಹನುಮಂತ ಪೂಜಾರ ಉಪಸ್ಥಿತರಿದ್ದರು.