ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಸಮಿತಿ ವತಿಯಿಂದ ವಕ್ಫ್ ಬಚಾವೋ ಆಂದೋಲನ ಅಂಗವಾಗಿ ವಕ್ಫ್ ತಿದ್ದುಪಡಿ ಮಸೂದೆ -2024 ವಿರೋಧಿಸಿ ನಗರದ ಅಕ್ತರ್ ರಜಾ ಸರ್ಕಲ್‌ನಿಂದ ಮದೀನಾ ಆಟೋ ಸ್ಟ್ಯಾಂಡ್‌ವರೆಗೆ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಸಮಿತಿ ಸದಸ್ಯ ಸೈಯದ್ ಅಶ್ಫಾಖ್ ಮಾತನಾಡಿ, ವಕ್ಫ್ ಸಮಸ್ಯೆ ಕೇವಲ ಎಸ್‌ಡಿಪಿಐ, ಎಐಎಂಐಎಂ ಮತ್ತು ಆಮ್ ಆದ್ಮಿ ಪಾರ್ಟಿಯ ಸಮಸ್ಯೆ ಅಲ್ಲ. ಚುನಾವಣೆ ಸಮಯ ಬಂದಾಗ ಜಾತ್ಯತೀತ ಆಧಾರದ ಮೇಲೆ ಮತ ಕೇಳುವ ಕಾಂಗ್ರೆಸ್ ಇವತ್ತು ಎಲ್ಲಿದೆ? ಚುನಾವಣೆ ಸಮಯದಲ್ಲಿ ಮುಸ್ಲಿಂ ಸಮುದಾಯವನ್ನು ವೋಟ್ ಬ್ಯಾಂಕ್ ಆಗಿ ಉಪಯೋಗಿಸುತ್ತಾರೆ. ಮುಸ್ಲಿಮರ ಸಮಸ್ಯೆ ವಿಚಾರ ಬಂದಾಗ ಚಕಾರ ಎತ್ತುವುದಿಲ್ಲ. ವಕ್ಫ್ ಭೂಮಿಯು ಉಳ್ಳವರು ಸಮುದಾಯ ಅಭಿವೃದ್ಧಿಗೆ ಮಾಡಿರುವ ಜಮೀನಾಗಿದೆ. ಇದರ ಮಾಲೀಕ (ಅಲ್ಲಾಹ) ದೇವರು. ಇದನ್ನು ಕಬಳಿಸುವ ಬಿಜೆಪಿಯ ಹುನ್ನಾರ ತಡೆಯಲು ಎಲ್ಲ ರೀತಿಯ ತ್ಯಾಗಕ್ಕೂ ತಯಾರಾಗಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಯಾಜ್ ಅಹಮದ್ ಮಾತನಾಡಿ, ಬಿಜೆಪಿ ಸರ್ಕಾರದ ಸಾಧನೆಗಳು ದ್ವೇಷ ರಾಜಕೀಯ ಭಾಗವಾಗಿ, ಹಿಂದೂ ಬಾಂಧವರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವುದಾಗಿದೆ. ಇದನ್ನು ತಿರಸ್ಕರಿಸಿದ ಜನ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡದೆ ಉತ್ತರ ಕೊಟ್ಟಿದ್ದಾರೆ. ಈ ಹಿಂದಿನಂತೆ ತ್ರಿವಳಿ ತಲಾಕ್, ಭಾರತೀಯ ಪೌರತ್ವ ತಿದ್ದುಪಡಿ ಕಾಯ್ದೆ, ಅಸ್ಸಾಂನಲ್ಲಿ ನಿಖಾ ನಾಮ ರದ್ದು ಮತ್ತು ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಎನ್‌ಆರ್‌ಸಿ ಸರ್ಟಿಫಿಕೇಟ್ ಕಡ್ಡಾಯ, ಈಗ ವಕ್ಫ್ ಆಸ್ತಿ ಕಬಳಿಸುವ ನಡೆ ಮುಸ್ಲಿಂ ದ್ವೇಷದ ಮುಂದುವರಿದ ಭಾಗವಾಗಿದೆ ಎಂದು ಟೀಕಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಯಹಿಯ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಹಸಿನ್, ಉಪಾಧ್ಯಕ್ಷ ರಜ್ವಿ ರಿಯಾಝ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್, ಎಐಎಂಐಎಂ ಪಕ್ಷದ ಅಧ್ಯಕ್ಷ ಮಹಮ್ಮದ್ ಶೋಯಿಬ್, ಆಮ್ ಆದ್ಮಿ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿಲ್ ಖಾನ್, ಸುರೇಶ್, ನೆರಳು ಬೀಡಿ ಕಾರ್ಮಿಕರ ಸಂಘದ ಕರಿಬಸಪ್ಪ, ಜಬೀನ, ತಂಜಿಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಸದಸ್ಯ ಹಾಕಿ ಆರಿಫ್ ಹಾಗೂ ಪಕ್ಷದ ಕಾರ್ಯಕರ್ತರು, ಇತರರು ಪಾಲ್ಗೊಂಡಿದ್ದರು.
- - - -13ಕೆಡಿವಿಜಿ40ಃ:ವಕ್ಫ್ ತಿದ್ದುಪಡಿ ಮಸೂದೆ-2024 ವಿರೋಧಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.