ಕುಡಿಯುವ ನೀರಿಗೆ ಒತ್ತಾಯಿಸಿ ಖಾಲಿ ಕೊಡ ಹಿಡಿದು ಪ್ರತಿಭಟನೆ

| Published : Jan 29 2025, 01:35 AM IST

ಸಾರಾಂಶ

ಚಿನ್ನಾಯಕನಹಳ್ಳಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಜನಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ನಡೆಯುತ್ತಿದ್ದು, ಕುಡಿಯುವ ನೀರನ್ನ ಸರಿಯಾಗಿ ಪೂರೈಕೆ ಮಾಡುತ್ತಿಲ್ಲ. ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಕಳೆದ ನಾಲ್ಕು ತಿಂಗಳಿಂದಲೂ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಸ್ಪಂದಿಸುತ್ತಿಲ್ಲ.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ತಾಲೂಕಿನ ಚಿನ್ನಾಯಕನಹಳ್ಳಿ ಗ್ರಾಮಸ್ಥರು ಖಾಲಿಕೊಡ ಹಿಡಿದು ಪ್ರತಿಭಟನೆ ನಡೆಸಿದರು.

ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿ ಎದುರು ಕರುನಾಡು ಕಾರ್ಮಿಕ ವೇದಿಕೆ ಜಿಲ್ಲಾಧ್ಯಕ್ಷ ಶಿವರಾಂ ನೇತೃತ್ವದಲ್ಲಿ ಚಿನ್ನಾಯಕನಹಳ್ಳಿ ಗ್ರಾಮಸ್ಥರು ಖಾಲಿ ಕೊಡ ಹಿಡಿದು, ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಘೋಷಣೆ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಜನಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ನಡೆಯುತ್ತಿದ್ದು, ಕುಡಿಯುವ ನೀರನ್ನ ಸರಿಯಾಗಿ ಪೂರೈಕೆ ಮಾಡುತ್ತಿಲ್ಲ. ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಕಳೆದ ನಾಲ್ಕು ತಿಂಗಳಿಂದಲೂ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಸ್ಪಂದಿಸುತ್ತಿಲ್ಲ. ಜೊತೆಗೆ ನೀರಗಂಟಿ ಗೋಪಾಲ್ ಅವರು ಸರಿಯಾದ ಸಮಯಕ್ಕೆ ನೀರು ಪೂರೈಕೆ ಮಾಡುತ್ತಿಲ್ಲ. ಪ್ರಶ್ನಿಸಿದರೆ ಉದ್ದಟತನ ತೋರುತ್ತಿದ್ದು ಇದರಿಂದ ಬೇಸತ್ತು ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಈ ಸಂಬಂಧ ಪ್ರತಿಕ್ರಿಯಿಸಿ, ವಾಟರ್ ಮ್ಯಾನ್ ಗೋಪಾಲ್ ಅವರು ಸರಿಯಾದ ಸಮಯಕ್ಕೆ ನೀರು ಬಿಡದೆ ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗುವುದು. ಸದ್ಯಕ್ಕೆ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸಲು ಇಂದೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ

ಹಲಗೂರು:

ಚನ್ನಪಟ್ಟಣ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಆಲಂಗೂರ್ ಧ್ವಜಾರೋಹಣ ನೆರವೇರಿಸಿದರು.

ನಂತರ ಗಣ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ದೇಶದ ಎಲ್ಲ ರಾಜ್ಯಗಳು, ಧರ್ಮಿಯರಿಗೂ ಅನ್ವಯವಾಗುವ ಒಂದು ಪವಿತ್ರ ಗ್ರಂಥವನ್ನು ನಮಗೆ ನಾವೇ ಸಮರ್ಪಣೆ ಮಾಡಿಕೊಂಡ ದಿನ ಈ ಗಣರಾಜ್ಯೋತ್ಸವ. ನಮ್ಮ ದೇಶದ ಸಂವಿಧಾನವನ್ನು ಸರ್ವರಿಗೂ ಒಪ್ಪಿತವಾಗುವ ಕಾನೂನಿನ ಮಾರ್ಗದರ್ಶನವಾಯಿತು ಎಂದರು.

ಬ್ರಿಟಿಷರಿಂದ ಸ್ವತಂತ್ರಗೊಂಡ ನಮ್ಮ ದೇಶಕ್ಕೆ ಕಾನೂನಿನ ಆಳ್ವಿಕೆಯ ಮಾರ್ಗಸೂತ್ರ ಆಧಾರಸ್ತಂಭವೆಂದರೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಅವರ ತಂಡ ರಚಿಸಿಕೊಟ್ಟ ಈ ಮಹಾನ್ ಗ್ರಂಥ ಸಂವಿಧಾನ ಗಣರಾಜ್ಯೋತ್ಸವವನ್ನು ನಮ್ಮ ಸಂವಿಧಾನದ ರಾಷ್ಟ್ರ ಹಬ್ಬ ಎಂದರೆ ತಪ್ಪಾಗಲಾರದು ಎಂದರು.

ಈ ವೇಳೆ ಪ್ರೊ.ಸುಧಾಬಿದರಿ, ನ್ಯಾಕ್ ಸಂಚಾಲಕರಾದ ಡಾ.ಸೀಮಾ ಕೌಸರ್, ಜಯಲಕ್ಷ್ಮಿ, ಪ್ರೊ.ಗುರುಪ್ರಸಾದ್, ಪ್ರೊ.ರವಿ , ದೈಹಿಕ ಶಿಕ್ಷಣ ನಿರ್ದೇಶಿಕರಾದ ಚಂದ್ರು, ಕುಮಾರಸ್ವಾಮಿ, ಇತಿಹಾಸ ಉಪನ್ಯಾಸಕರಾದ ರವಿ, ಶ್ರೀಧರ್, ಗೌರಮ್ಮ, ಸೇರಿದಂತೆ ಇತರರು ಇದ್ದರು.