ಚಿಕ್ಕಮಗಳೂರುಜಿಲ್ಲೆಯ ಎಲ್ಲಾ ಮೀನುಗಾರಿಕೆ ಸಹಕಾರ ಸಂಘಗಳ ಅಹವಾಲುಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಮೀನುಗಾರರ ವಿಭಾಗದ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರಿಯ ಮೀನುಗಾರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ ಹೇಳಿದರು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಮೀನುಗಾರ ಸಹಕಾರ ಸಂಘಗಳು ಹಾಗೂ ಮೀನುಗಾರರೊಂದಿಗೆ ಸಭೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲೆಯ ಎಲ್ಲಾ ಮೀನುಗಾರಿಕೆ ಸಹಕಾರ ಸಂಘಗಳ ಅಹವಾಲುಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಮೀನುಗಾರರ ವಿಭಾಗದ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರಿಯ ಮೀನುಗಾರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಮೀನುಗಾರ ಸಹಕಾರ ಸಂಘಗಳು ಹಾಗೂ ಮೀನುಗಾರರೊಂದಿಗೆ ಸಭೆ ನಡೆಸಿ, ಸಮಸ್ಯೆ ಆಲಿಸಿ ಮಾತನಾಡಿದ ಅವರು, ಇದೇ ವೇಳೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮೀನುಗಾರರ ಸಹಕಾರ ಸಂಘಗಳ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಸೂಚನೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಇಲಾಖೆ ಅಧಿಕಾರಿಗಳು ಮೀನುಗಾರರ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.

ಕೆರೆಗಳ ಇ-ಟೆಂಡರ್ ಮಾಡುವುದನ್ನು ರದ್ದು ಪಡಿಸಬೇಕು ಎನ್ನುವುದು ಮೀನುಗಾರರ ಪ್ರಮುಖ ಬೇಡಿಕೆ. ಸುಸಜ್ಜಿತ ಹೈಟೆಕ್ ಮೀನು ಮಾರುಕಟ್ಟೆಯನ್ನು ಚಿಕ್ಕಮಗಳೂರು ನಗರ ಸೇರಿದಂತೆ 3 ತಾಲೂಕುಗಳಲ್ಲಿ ಸ್ಥಾಪಿಸಬೇಕು. ಕೆಲವು ಕೆರೆಗಳನ್ನು ಅಭಿವೃದ್ಧಿ ಪಡಿಸಿ ಹೂಳೆತ್ತುವ ಕೆಲಸ ಆಗಬೇಕು. ಕೆಲವು ಕೆರೆಗಳಲ್ಲಿ ಬಳ್ಳಾರಿ ಜಾಲಿ ಮುಳ್ಳುಗಿಡಗಳು ಬೆಳೆದಿವೆ. ಅದರಿಂದ ಮೀನುಗಳು ಬೆಳವಣಿಗೆ ಆಗದ ಕಾರಣ ಅಂತಹ ಗಿಡಗಳನ್ನು ತರೆವಿಗೆ ಮನವಿ ಸಲ್ಲಿಸಿದ್ದಾರೆ ಎಂದರು.

ಎಲ್ಲಾ ಕೆರೆಗಳಲ್ಲಿ ನೀರು ನಾಯಿಗಳ ಹಾವಳಿ ಹೆಚ್ಚಾಗಿ ಪ್ರತಿ ನಿತ್ಯ ಪ್ರತಿ ಕೆರೆಯಲ್ಲಿ 10 ರಿಂದ 20 ಕೆಜಿ ಮೀನುಗಳನ್ನು ತಿನ್ನುತ್ತಿವೆ. ಜತೆಗೆ ಮೀನುಗಾರರ ಮೇಲೆ ದಾಳಿಗೂ ಮುಂದಾಗುತ್ತಿವೆ. ನಿಯಂತ್ರಿಸಲು ಮುಂದಾದಲ್ಲಿ ಅರಣ್ಯ ಇಲಾಖೆ ಆಕ್ಷೇಪಿಸುತ್ತಿರುವ ಕಾರಣ ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದರು.

ಮೀನು ಮರಿಗಳನ್ನು ಸರಿಯಾದ ಸಮಯಕ್ಕೆ ಇಲಾಖೆ ಅಧಿಕಾರಿಗಳು ನೀಡುತ್ತಿಲ್ಲ. ಸಿಬ್ಬಂದಿಗೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ದೂರು ಹೇಳಿಕೊಂಡಿದ್ದಾರೆ. ಜಿಲ್ಲೆಯ ಏಕೈಕ ಮೀನುಗಾರ ಮಹಿಳಾ ಸಂಘಕ್ಕೆ ಶೇ.3 ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗುತ್ತಿಲ್ಲ ಎಂದು ದೂರು ಹೇಳಿಕೊಂಡಿದ್ದಾರೆ ಎಂದು ತಿಳಿಸಿದರು.

ಮೀನುಗಾರಿಕೆ ಸೌಲತ್ತುಗಳ ಗುಣಮಟ್ಟ ಕಾಪಾಡಲು ಒಂದು ಸಮಿತಿ ರಚಿಸಬೇಕು. ಅದಕ್ಕೆ ಮೀನುಗಾರಿಕೆ ಸಹಕಾರಿ ಸಂಘ ಗಳ ಪದಾಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಿಕೊಂಡು ಗುಣಮಟ್ಟದ ಮೀನುಗಾರಿಕೆ ಪರಿಕರ ವಿತರಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್, ಅಹಿಂದ ಜಿಲ್ಲಾಧ್ಯಕ್ಷ ತ್ರಿಭುವನ್ ಎತ್ತಿನಮನೆ, ಯುವ ಕಾಂಗ್ರೆಸ್ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಆರ್.ಲಾಕೇಶ್, ಕಿಸಾನ್ ಸೆಲ್ ಬ್ಲಾಕ್ ಅಧ್ಯಕ್ಷ ಸಿ.ಸಿ.ಮಧು, ಸಖರಾಯಪಟ್ಟಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಎತ್ತಿನ ಮನೆ, ಮೇದರಹಳ್ಳಿ ಮೀನುಗಾರರ ಸಂಘದ ಅಧ್ಯಕ್ಷ ರಾಜ ಅಹ್ಮದ್, ಶ್ರೀಗಂಗಾ ಅಧ್ಯಕ್ಷ ಧರ್ಮೇಶ್, ಸತ್ಯ ಸೇವಾಲಾಲ್ ಕಾರ್ಯದರ್ಶಿ ಕುಮಾರ ನಾಯ್ಕ್ ವಿಷ್ಣುಸಮುದ್ರ ಮೀನುಗಳ ಕಾರ್ಯದರ್ಶಿ ನಾರಾಯಣ್ ಇದ್ದರು.