ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ತಾಲೂಕಾ ಘಟಕದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ
ಕನ್ನಡಪ್ರಭ ವಾರ್ತೆ ಹೊನ್ನಾವರಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ತಾಲೂಕಾ ಘಟಕದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೆ ತರುವುದು, ಖಾಲಿ ಹುದ್ದೆ ಭರ್ತಿ ಮಾಡುವುದು, ಕಾಲ್ಪನಿಕ ವೇತನ ಜಾರಿಗೆ ತರುವುದು, ಕೆಪಿಎಸ್ ಮತ್ತು ಪಿಎಂಶ್ರೀ ಶಾಲೆಗಳನ್ನು ಅನುದಾನಿತ ಶಾಲೆಯಿಂದ ಮೂರು ಕಿಮೀ ವ್ಯಾಪ್ತಿಯ ಹೊರಗೆ ಆರಂಭಿಸುವುದು, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ವಿಸ್ತರಿಸುವುದು, ಸರ್ಕಾರಿ ಶಾಲೆಯ ಶಿಕ್ಷಕರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಾಲಾ ಶಿಕ್ಷಕರಿಗೂ ವಿಸ್ತರಿಸುವುದು. ದ್ವಿಭಾಷಾ ಪದ್ಧತಿಯನ್ನು ಅನುದಾನಿತ ಶಾಲೆಗಳಿಗೂ ವಿಸ್ತರಿಸುವುದು ಮುಂತಾದ ಬೇಡಿಕೆಗಳನ್ನು ಪಟ್ಟಿ ಮಾಡಿ ಮನವಿಯಲ್ಲಿ ಸೇರಿಸಿ ಶೀಘ್ರ ಇತ್ಯರ್ಥಕ್ಕೆ ಸರ್ಕಾರವನ್ನು ಒತ್ತಾಯಿಸಲಾಯಿತು.ಸಮಾಜದ ಮೂಲಭೂತ ಹಕ್ಕುಗಳಲ್ಲಿ ಒಂದಾದ ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಎಂಬ ಭೇದಭಾವ ಮಾಡದೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ನೌಕರರ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಯೋಜನೆ ರೂಪಿಸಬೇಕೆಂದು ಆಗ್ರಹಿಸಲಾಯಿತು.
ಉತ್ತರ ಕನ್ನಡ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ಎಂ. ಹೆಗಡೆ, ತಾಲೂಕು ಅಧ್ಯಕ್ಷ ಸಂತೋಷಕುಮಾರ ನಾಯ್ಕ, ಕಾರ್ಯದರ್ಶಿ ಸಿ.ಆರ್. ಹೆಗಡೆ, ಉಪಾಧ್ಯಕ್ಷ ಜಿ. ಆರ್. ಶೆಟ್ಟಿ, ದೈಹಿಕ ಶಿಕ್ಷಣ ಸಂಘದ ಜಿಲ್ಲಾಧ್ಯಕ್ಷ ಮಹೇಶ ಶೆಟ್ಟಿ, ಜಯಂತ ನಾಯ್ಕ, ಎಸ್.ಜಿ. ಶೆರೇಗಾರ್, ಎಸ್.ಎಲ್.ನಾಯ್ಕ, ದಿನೇಶ್ ವೈದ್ಯ, ಜಿ.ಎನ್. ಗಣಪತಿ, ಸೀಮಾ ಭಟ್ಟ ಮುಂತಾದ ಪದಾಧಿಕಾರಿಗಳು, ಎಲ್ಲಾ ನೌಕರರು ಭಾಗವಹಿಸಿದ್ದರು.