ಕಾಂಗ್ರೆಸ್‌ ಶಾಸಕ ನಿಧನದಿಂದ ರಾಜ್ಯಸಭೆ ಲೆಕ್ಕಾಚಾರ ಬದಲು?

| Published : Feb 26 2024, 01:30 AM IST / Updated: Feb 26 2024, 11:05 AM IST

ವೆಂಕಟಪ್ಪ ನಾಯಕ

ಸಾರಾಂಶ

ರಾಜಾ ವೆಂಕಟಪ್ಪ ನಾಯಕ ನಿಧನದಿಂದ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಸಂಖ್ಯಾಬಲ ಕುಸಿತವಾಗಲಿದೆ. ಆದರೂ ಭಾರೀ ಬಹುಮತವಿರುವುದರಿಂದ ಸದ್ಯಕ್ಕೆ ಯಾವುದೇ ಆತಂಕವಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾಂಗ್ರೆಸ್‌ನ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯ್ಕ್ ಅವರು ರಾಜ್ಯಸಭೆ ಚುನಾವಣೆ ಎರಡು ದಿನ ಇರುವಾಗ ಹಠಾತ್‌ ನಿಧನರಾಗಿರುವುದರಿಂದ ಕಾಂಗ್ರೆಸ್‌ನ ಸಂಖ್ಯಾಬಲ ಕುಸಿದಿದೆ. 

ಹೀಗಿದ್ದರೂ ರಾಜ್ಯಸಭೆ ಸದಸ್ಯರೊಬ್ಬರು ಗೆಲ್ಲಲು ಪಡೆಯಬೇಕಾಗಿರುವ (45) ಮತಗಳ ಸಂಖ್ಯೆಯಲ್ಲಿ ಬದಲಾವಣೆಯಾಗಲ್ಲ. ಹೀಗಾಗಿ ಸದ್ಯಕ್ಕೆ ಕಾಂಗ್ರೆಸ್‌ಗೆ ಆತಂಕವಿಲ್ಲ ಎಂಬ ಮಾತುಗಳು ಕಾಂಗ್ರೆಸ್‌ ವಲಯದಿಂದ ಕೇಳಿಬರುತ್ತಿವೆ.

224 ಶಾಸಕರ ಪೈಕಿ ಈಗ ಒಬ್ಬರು ಸಾವನ್ನಪ್ಪಿದ್ದಾರೆ. ಕಾಂಗ್ರೆಸ್‌ನ ಸಂಖ್ಯಾಬಲ 135ರಿಂದ 134ಕ್ಕೆ (ಸ್ಪೀಕರ್‌ ಸೇರಿ) ಕುಸಿದಿದೆ. ಬಿಜೆಪಿ 66, ಜೆಡಿಎಸ್‌ 19, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಗಾಲಿ ಜನಾರ್ದನರೆಡ್ಡಿ) 1, ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್‌ ಪುಟ್ಟಣ್ಣಯ್ಯ 1, ಪಕ್ಷೇತರ ಸದಸ್ಯರಾದ ಲತಾ ಮಲ್ಲಿಕಾರ್ಜುನ್‌ ಹಾಗೂ ಪುಟ್ಟಸ್ವಾಮಿಗೌಡ ಸೇರಿ 223 ಮತಗಳಿವೆ.

ಕಾಂಗ್ರೆಸ್‌ 134 ಮತಗಳನ್ನು ಭದ್ರಪಡಿಸಿಕೊಂಡು, ಪುಟ್ಟಸ್ವಾಮಿಗೌಡ ಹಾಗೂ ದರ್ಶನ್‌ ಪುಟ್ಟಣ್ಣಯ್ಯ ಅವರ ಮತಗಳನ್ನು ಖಚಿತಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅದರ ಸಂಖ್ಯಾಬಲ 136ಕ್ಕೆ ಏರಿಕೆಯಾಗಿದೆ. ಹೆಚ್ಚುವರಿ ಮತಗಳಿಗಾಗಿ ಲತಾ ಮಲ್ಲಿಕಾರ್ಜುನ್‌ ಹಾಗೂ ಜನಾರ್ದನರೆಡ್ಡಿ ಅವರಿಗೂ ಗಾಳ ಬೀಸಿದೆ.

ಮೈತ್ರಿಗೆ 5ರಿಂದ 6 ಮತಗಳ ಕೊರತೆ: ಬಿಜೆಪಿ ಹಾಗೂ ಜೆಡಿಎಸ್‌ ತಲಾ ಒಬ್ಬರು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಇಬ್ಬರೂ ಅಭ್ಯರ್ಥಿಗಳಿಗೆ ಕನಿಷ್ಠ 45 ಪ್ರಥಮ ಪ್ರಾಶಸ್ತ್ಯದ ಮತ ಅಗತ್ಯವಿದೆ. 

ಬಿಜೆಪಿ, ಜೆಡಿಎಸ್‌ ಬಳಿ ಒಟ್ಟು 85 ಮತಗಳಿವೆ. ಬಿಜೆಪಿಯ ನಾರಾಣಸಾ ಭಾಂಡಗೆ ಅವರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಹೆಚ್ಚುವರಿ ಮತ ಸೇರಿ ಒಟ್ಟು 46 ಮತಗಳನ್ನು ನಿಗದಿಪಡಿಸುವ ಸಾಧ್ಯತೆಯಿದೆ. ಹಾಗಾದಾಗ ಜೆಡಿಎಸ್‌ ಕುಪೇಂದ್ರ ರೆಡ್ಡಿಗೆ ಆರು ಮತಗಳ ಕೊರತೆ ಉಂಟಾಗಲಿದೆ.

ಈ ಪೈಕಿ ಎಸ್‌.ಟಿ.ಸೋಮಶೇಖರ್‌ ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿರುವುದರಿಂದ ಬಿಜೆಪಿಗೆ ಆತಂಕ ಇನ್ನೂ ಹೆಚ್ಚಾಗಿದೆ.