ಪ್ರಜಾಪ್ರಭುತ್ವ ಸದೃಢಕ್ಕೆ ಉಪದ್ರವಿ ಬರಹಗಾರರ ಅಗತ್ಯ

| Published : Nov 29 2024, 01:01 AM IST

ಸಾರಾಂಶ

ದಾವಣಗೆರೆ: ಬರಹಗಾರರಲ್ಲಿ ಉಪದ್ರವಿ, ನಿರುಪದ್ರವಿ ಎಂಬ ಎರಡು ರೀತಿಯವರಿದ್ದು, ಪ್ರಜಾಪ್ರಭುತ್ವ ಸದೃಢವಾಗಲು ಅನುಕೂಲಸಿಂಧು ನಿರುಪದ್ರವಿ ಬರಹಗಾರರಿಗಿಂತಲೂ ಉಪದ್ರವಿ ಬರಹಗಾರರ ಸಂಖ್ಯೆ ಹೆಚ್ಚಾಗಬೇಕು ಎಂದು ಹಿರಿಯ ಸಾಹಿತಿ, ಚಿಂತಕ ಕುಂ.ವೀರಭದ್ರಪ್ಪ ಹೇಳಿದರು.

ದಾವಣಗೆರೆ: ಬರಹಗಾರರಲ್ಲಿ ಉಪದ್ರವಿ, ನಿರುಪದ್ರವಿ ಎಂಬ ಎರಡು ರೀತಿಯವರಿದ್ದು, ಪ್ರಜಾಪ್ರಭುತ್ವ ಸದೃಢವಾಗಲು ಅನುಕೂಲಸಿಂಧು ನಿರುಪದ್ರವಿ ಬರಹಗಾರರಿಗಿಂತಲೂ ಉಪದ್ರವಿ ಬರಹಗಾರರ ಸಂಖ್ಯೆ ಹೆಚ್ಚಾಗಬೇಕು ಎಂದು ಹಿರಿಯ ಸಾಹಿತಿ, ಚಿಂತಕ ಕುಂ.ವೀರಭದ್ರಪ್ಪ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದಿಂದ ಶ್ರೀಮತಿ ಗೌರಮ್ಮ ಪಿ.ಮೋತಿ ರಾಮರಾವ್‌ ಚಾರಿಟಬಲ್ ಟ್ರಸ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಲಿಂಗ ರಂಗ ಹಾಗೂ ಗ್ರಾಮೀಣ ಸಿರಿ, ನಗರ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗಿರಲು ಉಪದ್ರವಿ ಬರಹಗಾರರ ಸಂಖ್ಯೆ ಹೆಚ್ಚಾಗಬೇಕಾದ ಅವಶ್ಯಕತೆ ಇದೆ ಎಂದರು.

ಅನುಕೂಲ ಸಿಂಧು ನಿರುಪದ್ರವಿ ಬರಹಗಾರರಿಂದ ಪ್ರಜಾಪ್ರಭುತ್ವವು ಉಳಿಯುವುದಿಲ್ಲ. ಆಳುವ ಸರ್ಕಾರಗಳಿಗೆ ಸದಾ ಉಪದ್ರವ ಕೊಡುವ, ಆಡಳಿತದ ತಪ್ಪುಗಳನ್ನು ಎತ್ತಿ ತೋರಿಸುವ ಸಾಹಿತಿಗಳು ಇಂದು ದೇಶಕ್ಕೆ ಬೇಕಾಗಿದ್ದಾರೆ. ಉಪದ್ರವಿ ಬರಹಗಾರರು ಮಾತ್ರವೇ ತಮ್ಮ ನಿಷ್ಟುರ ಬರವಣಿಗೆಯ ಮೂಲಕ ಇಲ್ಲದ ಉಸಾಬರಿ ಮೈಮೇಲೆ ಎಳೆದುಕೊಳ್ಳುತ್ತಾರೆ. ಅಂತಹ ಉಪದ್ರವಿ ಬರಹಗಾರರಿಂದ ಮಾತ್ರ ಪ್ರಜಾಪ್ರಭುತ್ವವು ಗಟ್ಟಿಗೊಳ್ಳಲು, ಉಳಿಯಲು, ಆಳವಾಗಿ ಬೇರೂರಲು ಸಾಧ್ಯ ಎಂದು ತಿಳಿಸಿದರು.

ಅಭಿನಂದನೀಯ ನುಡಿಗಳನ್ನಾಡಿದ ಹಿರಿಯ ರಂಗಕರ್ಮಿ, ಪತ್ರಕರ್ತ ಬಾ.ಮ.ಬಸವರಾಜಯ್ಯ ಮಾತನಾಡಿ, ನಾಟಕ ಅಕಾಡೆಮಿ ಸದಸ್ಯರಾಗಿ ಸಾಕಷ್ಟು ಕೆಲಸ ಮಾಡಿರುವ ಮಲ್ಲಿಕಾರ್ಜುನ ಕಡಕೋಳ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯಲ್ಲಿ ಸಮನ್ವಯತೆ ತರಲು ಶ್ರಮಿಸಿದವರು. ಅಧ್ಯಯನ ಮತ್ತು ಬರವಣಿಗೆಯಲ್ಲಿ ಕಡಕೋಳರದ್ದು ಎತ್ತಿದ ಕೈ. ವೃತ್ತಿ ರಂಗಭೂಮಿ ರಂಗಾಯಣ ಸ್ಥಾಪನೆಯಲ್ಲಿ ಕಡಕೋಳರ ಶ್ರಮವಿದೆ. ಈಗ ಅದೇ ರಂಗಾಯಣದ ನಿರ್ದೇಶಕರಾಗಿ ಹಲವಾರು ಕೆಲಸ ಶುರು ಮಾಡಿದ್ದಾರೆ. ಇಂತಹವರಿಗೆ ಮಹಲಿಂಗ ರಂಗ ಪ್ರಶಸ್ತಿ ನೀಡಿದ್ದು, ನಿಜಕ್ಕೂ ಅಭಿಮಾನದ ಸಂಗತಿ ಎಂದು ಶ್ಲಾಘಿಸಿದರು. ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಗೌರಮ್ಮ ಮೋತಿ ಪಿ.ರಾಮರಾವ್ ಚಾರಿಟಬಲ್ ಟ್ರಸ್ಟ್‌ನ ಮೋತಿ ಆರ್.ಸುಬ್ರಹ್ಮಣ್ಯರಾವ್, ಸಾಹಿತಿಗಳಾದ ಎನ್.ಟಿ.ಎರ್ರಿಸ್ವಾಮಿ, ಪ್ರೊ.ಸಿ.ವಿ.ಪಾಟೀಲ್, ಪರಿಷತ್ ನ ಬಿ.ದಿಳ್ಯಪ್ಪ, ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಜಿಗಳಿ ಪ್ರಕಾಶ, ಬೇತೂರು ಷಡಕ್ಷರಪ್ಪ ಮಾಳಗಿ, ರುದ್ರಾಕ್ಷಿ ಬಾಯಿ, ಜಗದೀಶ ಕೂಲಂಬಿ, ಬಸಾಪುರ ಶಶಿಧರ ಇತರರು ಇದ್ದರು. ನಾಡಿನ ಹೃದಯ ಭಾಗವಾದ ದಾವಣಗೆರೆ ಶಿಕ್ಷಣ, ವಾಣಿಜ್ಯದ ಜೊತೆ ಸಾಂಸ್ಕೃತಿಕ ನಗರಿಯೂ ಹೌದು. ಹತ್ತು ವರ್ಷಗಳ ಹಿಂದೆಯೇ ಇಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಗಬೇಕಾಗಿತ್ತು. ಆದರೆ, ಆಳುವ ಸರ್ಕಾರಗಳು, ರಾಜಕೀಯ ಇಚ್ಛಾಶಕ್ತಿಯ ಕೊರತೆ ಸೇರಿದಂತೆ ನಾನಾ ಕಾರಣದಿಂದಾಗಿ ಅದು ನಡೆದಿಲ್ಲ. ಇನ್ನಾದರೂ ಜಿಲ್ಲೆಯ ರಾಜಕಾರಣಿಗಳ ಮೂಲಕ ಸರ್ಕಾರದ ಮೇಲೆ ಒತ್ತಡ ತಂದು, ಮಧ್ಯ ಕರ್ನಾಟಕವಾದ ಈ ಊರಿನಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಬೇಕು. ಇದಕ್ಕಾಗಿ ಇಲ್ಲಿನ ಜನತೆ ಚಳವಳಿ ಮಾಡಬೇಕು.

- ಕುಂ.ವೀರಭದ್ರಪ್ಪ, ಹಿರಿಯ ಸಾಹಿತಿ, ಚಿಂತಕ