ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ

| Published : Mar 30 2024, 12:49 AM IST

ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರದಲ್ಲಿ ಮತ್ತೇನಾದರೂ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ಸಂಪೂರ್ಣವಾಗಿ ಹಾಳಾಗಲಿದೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕೇಂದ್ರದಲ್ಲಿ ಮತ್ತೇನಾದರೂ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ಸಂಪೂರ್ಣವಾಗಿ ಹಾಳಾಗಲಿದೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.

ಪಟ್ಟಣದ ಬಸವ ಭವನದಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ೪೦೦ ಸೀಟು ಬೇಕು ಎಂದು ಬಿಜೆಪಿ ಹೇಳುತ್ತಿರುವುದು ಸಂವಿಧಾನ ಬದಲಿಸಲು ಹಾಗೂ ಪ್ರಜಾಪ್ರಭುತ್ವ ನಾಶಮಾಡುವ ಹುನ್ನಾರ ಎಂದು ಆಪಾದಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿಗಳನ್ನು ಪ್ರಧಾನಿ ಮೋದಿ ನಮ್ಮ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಮೋದಿ ಗ್ಯಾರಂಟಿ ಬೋಗಸ್ ಎಂದು ಟೀಕಿಸಿದರು. ಕಾಂಗ್ರೆಸ್ ಜನರ ಕೈಗೆ ಸೇರೋ ಗ್ಯಾರಂಟಿಯಾಗಿದ್ದು ಪಕ್ಷದ ಕಾರ್ಯಕರ್ತರು ಮತದಾರರನ್ನು ಭೇಟಿಯಾಗಿ ಮತ ಕೇಳಬೇಕು ಎಂದರು.

ಕಳೆದ ಬಿಜೆಪಿ ಸರ್ಕಾರ ೪೦ ಪರ್ಸೆಂಟ್ ಹೆಸರಲ್ಲಿ ಹಣ ಲೂಟಿ ಮಾಡಿದರೆ ಮೋದಿ ಸರ್ಕಾರ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಇಡಿ, ಐಟಿ, ಸಿಬಿಐ ನಿಯಂತ್ರಣದಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿದೆ ಎಂದರು. ಬಿಜೆಪಿ ಚುನಾವಣಾ ಬಾಂಡ್ ನಲ್ಲಿ 6 ಸಾವಿರ ಕೋಟಿ ಹಣ ಪಡೆದಿದೆ. ಅದು ದೊಡ್ಡ ಕಂಪನಿಗಳ ಮೇಲೆ ದಾಳಿ ನಡೆಸಿ ಹೆದರಿಸಿ ಹಣ ಪಡೆದಿದ್ದು ಭ್ರಷ್ಟಾಚಾರದ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ ಎಂದರು.

ಚಾಮರಾಜನಗರ ಮೀಸಲು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಮಗ ಎಂದು ಟಿಕೆಟ್ ನೀಡಿಲ್ಲ. ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ನಂಜನಗೂಡು ಟಿಕೆಟ್ ಸಿಗಲಿಲ್ಲ ಈಗ ಟಿಕೆಟ್ ಪಕ್ಷ ನೀಡಿದೆ ಎಂದರು.

ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಮತ ಕೇಳಲಿದೆ:

ಸಾಮಾಜಿಕ ನೆಲೆಗಟ್ಟಿನಲ್ಲಿ ಆಡಳಿತ ಹಾಗೂ ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಪಕ್ಷ ಮತ ಕೇಳಲಿದೆ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ಕಾಂಗ್ರೆಸ್ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿ, ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್ ಗೆ ಮತ ನೀಡಬೇಕು ಎಂದು ಕಾರ್ಯಕರ್ತರು ಮತ ಕೇಳಿ ಎಂದರು. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ದಿ.ಎಚ್.ಎಸ್.ಮಹದೇವಪ್ರಸಾದ್ ಹಾಗೂ ಡಾ.ಗೀತಾ ಮಹದೇವಪ್ರಸಾದ್ ಅವರಂತೆ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಗಣೇಶ್ ಪ್ರಸಾದ್ ಅವರಿಗೆ ಲಕ್ಷ ಮತ ನೀಡಿದ್ದೀರಾ! ಸುನೀಲ್ ಬೋಸ್ ಗೂ ಹೆಚ್ಚಿನ ಮತ ನೀಡಬೇಕು ಎಂದರು.

ಭರ್ಜರಿ ಗೆಲುವು ಸಾಧಿಸಲು ಕಾರ್ಯಕರ್ತರು ಶ್ರಮಿಸಿ:ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದೇವೆ. ಈ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಲೋಕಸಭೆ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಮನವಿ ಮಾಡಿದರು. ನಾನು ಸೇರಿದಂತೆ ಎಂಟು ಮಂದಿ ಟಿಕೆಟ್ ಆಕಾಂಕ್ಷಿಗಳು ಇದ್ದರು. ಪಕ್ಷ ನನಗೆ ಟಿಕೆಟ್ ನೀಡಿದೆ. ಈ ಚುನಾವಣೆಯಲ್ಲಿ ನನಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದರು. ಪಕ್ಷದ ಕಾರ್ಯಕರ್ತರು ಪ್ರತಿ ಬೂತ್ ನಲ್ಲಿ ಹೆಚ್ಚು ಮತ ಬರುವಂತೆ ಮುಖಂಡರು, ಕಾರ್ಯಕರ್ತರಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ದರೆ ಬದಿಗೊತ್ತಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.

ನಾನು ಸುಳ್ಳು ಹೇಳುವ ರಾಜಕಾರಣಿಯಲ್ಲ:

ಸ್ಥಳೀಯ ವಿಪಕ್ಷದ ಟೀಕೆಗಳಲ್ಲಿ ಸತ್ಯಾಂಶವಿಲ್ಲ, ವಿನಾಕಾರಣ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಈ ಬಗ್ಗೆ ಕ್ಷೇತ್ರದ ಜನರು ಸೊಪ್ಪು ಹಾಕುವುದಿಲ್ಲ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ಕಾಂಗ್ರೆಸ್ ಕಾರ್ಯಕರ್ತರ ಸಭೆಯ ನೇತೃತ್ವ ವಹಿಸಿ ಮಾತನಾಡಿ, ನಾನು ಸುಳ್ಳು ಹೇಳಿ ರಾಜಕಾರಣ ಮಾಡುವ ದರ್ದು ನನಗಿಲ್ಲ. ನನಗೆ ಅಧಿಕಾರ ಇಲ್ಲದ ಸಮಯದಲ್ಲಿ ಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ ಎಂದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಗೆಲ್ಲಲೇಬೇಕು. ಅದು ಹೆಚ್ಚಿನ ಮತಗಳಿಂದ ಎಂದು ಕಾರ್ಯಕರ್ತರನ್ನು ಹುರುದುಂಬಿಸಿದರು. ಏ.೩ ರಂದು ಸುನೀಲ್ ಬೋಸ್ ನಾಮಪತ್ರ ಸಲ್ಲಿಸಲಿದ್ದು ಹೆಚ್ಚಿನ ಕಾರ್ಯಕರ್ತರು ಆಗಮಿಸಬೇಕೆಂದರು. ವಿಪ ಸದಸ್ಯ ಡಾ.ಡಿ.ತಿಮ್ಮಯ್ಯ, ಕಾಡಾ ಮಾಜಿ ಅಧ್ಯಕ್ಷ ನಂಜಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಕೆಪಿಸಿಸಿ ಮಾಜಿ ಸದಸ್ಯ ನಾಜೀಮುದ್ದೀನ್ ಮಾತನಾಡಿದರು.

ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಎಚ್.ಸಿ.ಬಸವರಾಜು, ಮಾಜಿ ಸಂಸದ ಎ.ಸಿದ್ದರಾಜು, ಎಂ.ಶಿವಣ್ಣ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಮುನಿರಾಜು, ಲತಾ ಸಿದ್ದಶೆಟ್ಟಿ, ಎಪಿಎಂಸಿ ಅಧ್ಯಕ್ಷ ಮೊಳ್ಳಯ್ಯನಹುಂಡಿ ಬಸವರಾಜು, ಜಿಪಂ ಮಾಜಿ ಸದಸ್ಯ ಕೆ.ಬಿ.ಸ್ವಾಮಿ, ಕೆರಹಳ್ಳಿ ನವೀನ್‌, ಮುಖಂಡರಾದ ವೈ.ಎನ್.ಶಂಕರೇಗೌಡ, ಹೊಂಗನೂರು ಚಂದ್ರು, ಬಿ.ಕೆ.ರವಿಕುಮಾರ್, ಕಬ್ಬಳ್ಳಿ ಮಹೇಶ್, ಎಸ್.ಶಿವನಾಗಪ್ಪ, ಹಿರೀಕಾಟಿ ಕುಮಾರ್‌, ಮುಕ್ಕಡಹಳ್ಳಿ ರವಿಕುಮಾರ್, ರವಿಕುಮಾರ್, ಮೂಡ್ನಾಕೂಡು ಕುಮಾರ್, ಮಂಚಹಳ್ಳಿ ಲೋಕೇಶ್, ಕೆಂಪರಾಜು, ನಾಗರಾಜು, ಬಂಗಾರನಾಯಕ ಇದ್ದರು.ಕಾಂಗ್ರೆಸ್‌ ಗೆಲ್ಲಲೇ ಬೇಕು: ಎಚ್‌ಸಿಎಮ್‌

ಲೋಕಸಭೆ ಚುನಾವಣೆ ಬಹಳ ಮಹತ್ವದ್ದಾಗಿದ್ದು, ಕಾಂಗ್ರೆಸ್‌ ಗೆಲ್ಲಲೇ ಬೇಕು, ಕೋಮುವಾದ ಅಳಿಯಲೇ ಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ಬಸವ ಭವನದಲ್ಲಿ ಇಲ್ಲಿನ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸೋಲಲೇಬೇಕು. ಬಿಜೆಪಿ ರೈತರ ಪಾರ್ಟಿಯಲ್ಲ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿಗೆ ಜನರು, ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲ, ಸುಳ್ಳು ಹೇಳಿ ಅಧಿಕಾರ ನಡಿಸೋ ಬಿಜೆಪಿ ಬೇಕಾ? ಪ್ರಧಾನಿ ಮೋದಿಗೆ ದೇಶದ ಅಭಿವೃದ್ಧಿ, ಜನರ ಹಿತ ಬೇಕಿಲ್ಲ! ರೈತರ ಆದಾಯ ದ್ವಿಗುಣ ಅಂದ್ರು? ವರ್ಷಕ್ಕೆ ೨ ಕೋಟಿ ಉದ್ಯೋಗ ಅಂದ್ರು, ಎಲ್ಲರ ಖಾತೆಗೆ ೧೫ ಲಕ್ಷ ಅಂದ್ರು, ಇದು ನಾವು ಹೇಳಿದಲ್ಲ, ಬಿಜೆಪಿಯೇ ಹೇಳಿದ್ದು ಎಂದು ಬಿಜೆಪಿ ವಿರುದ್ಧ ವ್ಯಂಗವಾಡಿದರು.

ಬಿಜೆಪಿ ಬಡವರ ಪಕ್ಷವಲ್ಲ, ಬಂಡವಾಳ ಶಾಹಿಗಳು, ಕೈಗಾರಿಕ್ಯೋದ್ಯಮಿಗಳ ಪಕ್ಷವಾಗಿದೆ. ಮಹದೇವಪ್ರಸಾದ್‌ ಒಳ್ಳೆ ಆಡಳಿತಗಾರ ಜೊತೆಗೆ ಶಿಸ್ತಿನ ಶಿಪಾಯಿ. ಬಹುಗ್ರಾಮ ಯೋಜನೆ ಜಾರಿಗೆ ತರದಿದ್ದರೆ ಕುಡಿವ ನೀರಿನ ಹಾಹಾಕಾರ ಮುಗಿಲು ಮುಟ್ಟುತ್ತಿತ್ತು ಅಲ್ಲದೆ ಕೆರೆಗಳಿಗೆ ನೀರು ತುಂಬಿಸುವಲ್ಲಿ ಮಹದೇವಪ್ರಸಾದ್‌ ಪಾತ್ರ ಅಪಾರ ಎಂದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಲು ಶಾಸಕ ಗಣೇಶ್‌ ಪ್ರಸಾದ್‌ ನಾಯಕತ್ವದಲ್ಲಿ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್‌ ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಿಜೆಪಿ ಸುಡುವ ಮನೆ:

ಬಿಜೆಪಿ ಮನೆಯ ದೋಸೆ ತೂತಾಗಿದೆ ಹಾಗೂ ಸುಡುವ ಮನೆಯಾಗಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ವ್ಯಂಗವಾಡಿದರು. ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ರಾಜ್ಯದಲ್ಲಿ ಬೆಳಗಾಂ, ಮೈಸೂರು, ದಾವಣಗೆರೆ ಸೇರಿದಂತೆ ಹಲವೆಡೆ ಬಿಜೆಪಿ ಮನೆಗೆ ಬೆಂಕಿ ಬಿದ್ದಿದೆ ಎಂದು ಟೀಕಿಸಿದರು. ಸರ್ವಾಧಿಕಾರಿ ಪ್ರಧಾನಿ ಮೋದಿ ಸರ್ವಾಧಿಕಾರಿಯಾಗಿದ್ದಾರೆ. ಸರ್ವಾಧಿಕಾರಿ ಆಡಳಿತ ಮತ್ತೆ ಬಂದರೆ ಹಿಟ್ಲರ್‌ ನಂತೆ ಆಡಳಿತ ನಡೆಸುತ್ತಾರೆ. ಪ್ರಜಾ ಪ್ರಭುತ್ವ ನಾಶವಾಗಿ ಸಂವಿಧಾನಕ್ಕೂ ಅಪಾಯ ಎಂದು ಎಚ್ಚರಿಸಿದರು. ವಾಕ್‌ ಸ್ವಾತಂತ್ರ್ಯದ ಹಕ್ಕು ಕಸಿದರೆ ಮಾದ್ಯಮ ಕೂಡ ಉಳಿಯಲ್ಲ, ಮಾದ್ಯಮ ಉಳಿಯದಿದ್ದರೆ ಪ್ರಜಾಪ್ರಭುತ್ವ ಉಳಿಯಲ್ಲ. ಪ್ರಜಾಪ್ರಭುತ್ವ, ಸಂವಿಧಾನ ಉಳಿಯಲು ಕೋಮವಾದ ಅಳಿಯಲೇಬೇಕು ಎಂದರು.