ಅಕ್ರಮ ಕಟ್ಟಡ ನೆಲಸಮ: ಕೋಟ್ಯಂತರ ರು. ಆಸ್ತಿ ಪುರಸಭೆ ‍ವಶ

| Published : May 31 2024, 02:15 AM IST

ಸಾರಾಂಶ

ಕಡೂರು, ಸುಮಾರು 45 ವರ್ಷಗಳಿಂದ ಪುರಸಭೆ ಜಾಗದಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ಕಟ್ಟಡಗಳನ್ನು ಪುರಸಭೆ ಮುಖ್ಯಾಧಿಕಾರಿ ನೈತೃತ್ವದಲ್ಲಿ ಸಿಬ್ಬಂದಿ ವರ್ಗದೊಂದಿಗೆ ಗುರುವಾರ ಬೆಳ್ಳಂಬೆಳಗ್ಗೆಯೇ ಜೆಸಿಬಿಗಳ ಮೂಲಕ ನೂರಾರು ಪೊಲೀಸರ ಬಂದೋಬಸ್ತಿನಲ್ಲಿ ತೆರವುಗೊಳಿಸಿ ಪುರಸಭೆ ವಶಕ್ಕೆ ಪಡೆಯಲಾಯಿತು.

ಮುಖ್ಯಾಧಿಕಾರಿ ಎನ್.ಭಾಗ್ಯಮ್ಮ ಮಾಹಿತಿ । ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಜೆಸಿಬಿಗಳು

ಕನ್ನಡಪ್ರಭ ವಾರ್ತೆ, ಕಡೂರು

ಸುಮಾರು 45 ವರ್ಷಗಳಿಂದ ಪುರಸಭೆ ಜಾಗದಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ಕಟ್ಟಡಗಳನ್ನು ಪುರಸಭೆ ಮುಖ್ಯಾಧಿಕಾರಿ ನೈತೃತ್ವದಲ್ಲಿ ಸಿಬ್ಬಂದಿ ವರ್ಗದೊಂದಿಗೆ ಗುರುವಾರ ಬೆಳ್ಳಂಬೆಳಗ್ಗೆಯೇ ಜೆಸಿಬಿಗಳ ಮೂಲಕ ನೂರಾರು ಪೊಲೀಸರ ಬಂದೋಬಸ್ತಿನಲ್ಲಿ ತೆರವುಗೊಳಿಸಿ ಪುರಸಭೆ ವಶಕ್ಕೆ ಪಡೆಯಲಾಯಿತು.

ಪುರಸಭೆ ನಡೆಸಿದ ಕಾರ್ಯಾಚರಣೆಯಲ್ಲಿ ಜೆಸಿಬಿ ಮೂಲಕ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಲಾಗಿದೆ ಎಂದು ಮುಖ್ಯಾಧಿಕಾರಿ ಎನ್.ಭಾಗ್ಯಮ್ಮ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪುರಸಭೆಗೆ ಸೇರಿದ 112*115 ಅಡಿ ಅಳತೆಯ ಆಸ್ತಿ ಸಂಖ್ಯೆ: 6160/646/2ರಲ್ಲಿದ್ದ ಜಾಗದಲ್ಲಿ ಈವರೆಗೆ ಕೆಲ ಖಾಸಗಿ ವ್ಯಕ್ತಿಗಳು ಕಂದಾಯ ಪಾವತಿಸಿ ಇ-ಸ್ವತ್ತು ಪಡೆದು ಸ್ವಾಧೀನಕ್ಕೆ ಪಡೆದಿದ್ದು. ಕಾನೂನು ಪ್ರಕಾರ ಇದು ಅಕ್ರಮ ಎಂದು ಪುರಸಭೆ ಧೃಢಪಡಿಸಿಕೊಂಡ ಬಳಿಕ ಇಂದು ಮುಂಜಾನೆಯಿಂದಲೇ ಪೊಲೀಸರ ಸರ್ಪಗಾವಲಿನಲ್ಲಿ ಆ ಜಾಗದಲ್ಲಿದ್ದ ವಾಣಿಜ್ಯ ಮಳಿಗೆಗಳ ತೆರವು ಕಾರ್ಯಾಚರಣೆ ನಡೆಸಿತು. ಪುರಸಭೆ ಆಸ್ತಿ ಸಂಖ್ಯೆ : 6160/646/2ರಲ್ಲಿ 112*115 ಅಳತೆಯ ಒಟ್ಟು 12,880 ಚದರ ಅಡಿ ನಿವೇಶನ ಪೂರ್ವ ಕಾಲ ದಿಂದಲೂ ಪುರಸಭೆ ಸ್ವತ್ತಾಗಿದೆ. ಇದರಲ್ಲಿ ಖಾಸಗಿ ವ್ಯಕ್ತಿಗಳು ಶೆಡ್ ಮತ್ತು ಕಟ್ಟಡ ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಅಲ್ಲದೆ ಮನೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದ್ದು ಈ ಬಗ್ಗೆ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಿದ್ದರ ಹಿನ್ನಲೆಯಲ್ಲಿ ಲೋಕಾಯುಕ್ತ ಮತ್ತು ಜಿಲ್ಲಾಧಿಕಾರಿ (ಜಿಲ್ಲಾ ನಗರಾಭಿವೃದ್ಧಿ ಕೋಶ) ಯೋಜನಾ ನಿರ್ದೇಶಕರಾದ ಚಂದ್ರಮ್ಮ ಆದೇಶದ ಮೇರೆಗೆ ತೆರವು ಮಾಡಲಾಗಿದೆ ಎಂದು ವಿವರಿಸಿದರು.ಇಲ್ಲಿ ಸ್ವಾಧೀನದಲ್ಲಿದ್ದೆವು ಎಂದು ಹೇಳಿಕೊಳ್ಳುವ ವ್ಯಕ್ತಿಗಳು ಇ-ಸ್ವತ್ತಿಗೆ ಸಂಬಂಧಪಟ್ಟ ದಾಖಲಾತಿ ತೋರಿಸುತ್ತಿಲ್ಲ ಬದಲಿಗೆ ಬೇರೊಂದು ಆಸ್ತಿ ಸಂಖ್ಯೆಯ ಇ-ಸ್ವತ್ತನ್ನು ತೋರಿಸುತ್ತಿದ್ದಾರೆ. ಅವರು ತೋರಿಸುವ ಆಸ್ತಿ ಸಂಖ್ಯೆಗೂ ಪುರಸಭೆಯ ದಾಖಲೆ ಗಳಿಗೂ ತಾಳೆಯಾಗುತ್ತಿಲ್ಲ. ಈ ಸಂಭಂದ ಅವರಿಗೆ ಹಲವು ಬಾರಿ ನೊಟೀಸ್ ನೀಡಿದ್ದರೂ ಅದನ್ನು ಗಣನೆಗೆ ತೆಗೆದು ಕೊಂಡಿಲ್ಲ ಎಂದರು.

ಲೋಕಾಯುಕ್ತ ಇಲಾಖೆ ಅವರಿಗೆ ನೊಟೀಸ್ ನೀಡಿದೆ. ಯಾವುದೇ ಒತ್ತಡವಿಲ್ಲದೆ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಈ ಕಾರ್ಯಚರಣೆ ನಡೆಸಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.

ಕಂದಾಯ ವಿಭಾಗದ ಅಧಿಕಾರಿಗಳಾದ ಕುಮಾರ್, ಮಮತ, ಜಗದೀಶ್, ಎಂಜಿನಿಯರ್ ಗಳಾದ ಶ್ರೇಯಸ್, ಜಗದೀಶ್, ಶ್ರೀನಿವಾಸ್ ಪುರಸಭೆ ಸಿಬ್ಬಂದಿ ಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯಾಚರಣೆ ಸಂಧರ್ಭದಲ್ಲಿ ಸ್ಥಳೀಯರು, ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಮತ್ತು ವಾಗ್ವಾದ ನಡೆಯಿತು. ಕಾರ್ಯಾಚರಣೆಯನ್ನು ನೂರಾರು ಜನರ ರಸ್ತೆಯ ಬದಿಗಳಲ್ಲಿ ಮತ್ತು ಕಟ್ಟಡಗಳ ಮೇಲೆ ನಿಂತು ಆರಂಭದಿಂದ ತೆರವಿನವರೆಗೂ ಕುತೂಹಲದಿಂದ ನೋಡುತ್ತಿದ್ದರು.

ಕಾರ್ಯಾಚರಣೆ ಹಿನ್ನಲೆಯಲ್ಲಿ ಪುರಸಭೆಯಿಂದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿದ್ದು. ಬೆಳಗ್ಗೆ ಸುಮಾರು 5.30 ರಿಂದಲೇ ನೂರಾರು ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟು ಜನರನ್ನು ಮತ್ತು ವಾಹನ ಗಳನ್ನು ನಿಯಂತ್ರಿಸುವಲ್ಲಿ ಸಾಹಸ ಮಾಡಿದರು. ಪಿಎಸೈ ಎಂ.ಆರ್. ಧನಂಜಯ್ ನೇತೃತ್ವದಲ್ಲಿ ಪಿಎಸೈಗಳಾದ ಪವನ್ ಕುಮಾರ್, ಕಿರಣ್ ಕುಮಾರ್ ಹಾಗೂ ಸಿಬ್ಬಂದಿ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾದರು. -- ಬಾಕ್ಸ್ ಸುದ್ದಿಗೆ---

ನಮ್ಮ ಸ್ವಾಧೀನದಲ್ಲಿದ್ದ ಕಟ್ಟಡಗಳ ಎಲ್ಲ ದಾಖಲೆಗಳನ್ನು ತೋರಿಸಿದರೂ ಪುರಸಭೆ ಅಧಿಕಾರಿಗಳು ಏಕಾಏಕಿ ದೌರ್ಜನ್ಯದಿಂದ ತೆರವು ಕಾರ್ಯಾಚರಣೆ ಮಾಡಿದ್ದಾರೆ. ಕಳೆದ ರಾತ್ರಿ ನೊಟೀಸ್ ನೀಡದೆ ಮೌಖಿಕವಾಗಿ ಮಾತ್ರ ತೆರವಿನ ಬಗ್ಗೆ ತಿಳಿಸಿದರು ಎಂದು ಸ್ಥಳೀಯರಾದ ಕೆ.ಪಿ.(ಮಂಡಿ) ರಂಗನಾಥ್, ಗೋಪಾಲ್,ಕಾಂತರಾಜ್ ಮತ್ತಿತರರು ಆರೋಪಿಸಿದರು.

ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಕೂಡ ಅದಕ್ಕೆ ಬೆಲೆ ಕೊಟ್ಟಿಲ್ಲ. ಲಕ್ಷಾಂತರ ರು. ಮೌಲ್ಯದ ನಮ್ಮಗಳ ಆಸ್ತಿಯೂ ಹಾನಿಗೆ ಒಳಗಾಗಿವೆ. ಇದಕ್ಕೆ ಪರಿಹಾರ ನೀಡುವವರು ಯಾರು ಎಂದು ಪ್ರಶ್ನಿಸಿ ಪುರಸಭೆ ಅಧಿಕಾರಿಗಳ ದೌರ್ಜನ್ಯದ ವಿರುದ್ದ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸುವ ಜೊತೆಗೆ ಕಾನೂನು ಹೋರಾಟ ಮಾಡುತ್ತೇವೆ ಎಂದರು.

ಹೋಟೆಲ್ ಮಳಿಗೆ ಮಾಲೀಕರು ತಮ್ಮ ಬಳಿಯಲ್ಲಿದ್ದ ನ್ಯಾಯಲಯದ ಆದೇಶದ ಫ್ಲೆಕ್ಸ್ ಮಾಡಿಕೊಂಡು ಅಧಿಕಾರಿಗಳ ಮುಂದೆ ಹಿಡಿದರೂ ಕೂಡ ಬಗ್ಗದ ಸಿಬ್ಬಂದಿ ಮಾಲೀಕರನ್ನು ಹೊರ ತಂದು ಜೆಸಿಬಿ ನುಗ್ಗಿಸಿ ಹೋಟೆಲನ್ನು ನೆಲಸಮ ಮಾಡಿದರು.ಪುರಸಭೆ ಮಾಜಿ ಅಧ್ಯಕ್ಷ ರೋಬ್ಬರ ವಶದಲ್ಲಿದ್ದ ಗೋಡನ್ ನನ್ನು ಜೆಸಿಬಿಗಳು ಉರುಳಿಸಿ ನೆಲಸಮ ಮಾಡಿದವು. . ಗ್ಯಾರೇಜ್, ಬೆಡ್ದಿಂಗ್ ಹೌಸ್, ಸೆಲೂನ್ ಶಾಪ್ ಸೇರಿದಂತೆ ಮತ್ತಿತರ ಮಳಿಗೆಗಳು ನೆಲಸಮಗೊಂಡವು.30ಕೆಕೆಡಿಯು1. ಕಡೂರು ಪುರಸಭೆ ಆಸ್ತಿಯಲ್ಲಿ ಕಟ್ಟಲಾಗಿದ್ದ ಕಟ್ಟಡಗಳು.

30ಕೆಕೆಡಿಯು1ಎ.ಅಕ್ರಮವಾಗಿ ಕಟ್ಟಲಾಗಿದ್ದ ಕಟ್ಟಡಗಳನ್ನು ನೆಲಸಮಗೊಳಿಸಿದ ನಂತರದ ಚಿತ್ರಣ.

30ಕೆಕೆಡಿಯು1.ಬಿ.ಸ್ವಾಧೀನದಲ್ಲಿದ್ದ ಮಾಲೀಕರು ಪುರಸಭೆ ಅಧಿಕಾರಿ ಹಾಗೂ ಪೊಲೀಸ್ ನಡುವೆ ಮಾತಿನ ಚಕಮಕಿ ನಡೆಯಿತು.30ಕೆಕೆಡಿಯು1 ಸಿ. ಕಟ್ಟಡಗಳ ಮಾಲೀಕರು