ರೈತರ ಶಕ್ತಿ ಪ್ರದರ್ಶಿಸುವುದು ಈಗ ಅಗತ್ಯವಿದೆ: ವೀರೇಶ ಸೊಬರದಮಠ

| Published : Oct 03 2024, 01:18 AM IST

ರೈತರ ಶಕ್ತಿ ಪ್ರದರ್ಶಿಸುವುದು ಈಗ ಅಗತ್ಯವಿದೆ: ವೀರೇಶ ಸೊಬರದಮಠ
Share this Article
  • FB
  • TW
  • Linkdin
  • Email

ಸಾರಾಂಶ

ನರಗುಂದದಲ್ಲಿ ಇದೇ ಅ. 4ರಂದು ರೈತರ ಬೃಹತ್‌ ಸಮಾವೇಶ ಆಯೋಜನೆಯಾಗಿದೆ. ಈ ಸಮಾವೇಶದ ರೂವಾರಿ ರೈತ ಸೇನಾ ಕರ್ನಾಟಕ ಸಂಘಟನೆಯ ಅಧ್ಯಕ್ಷ ವೀರೇಶ ಸೊಬರದಮಠ ಅವರು ಕಳೆದ ಮೂರು ರಾಜ್ಯದ ವಿವಿಧ ಭಾಗವನ್ನು ಸುತ್ತಿ ರೈತ ಸಂಘಟನೆಗಳನ್ನು ಒಂದೇ ವೇದಿಗೆ ತರುವ ಯತ್ನ ನಡೆಸಿದ್ದಾರೆ.

ಎಸ್‌.ಜಿ. ತೆಗ್ಗಿನಮನಿ

ನರಗುಂದ: ನರಗುಂದದಲ್ಲಿ ಇದೇ ಅ. 4ರಂದು ರೈತರ ಬೃಹತ್‌ ಸಮಾವೇಶ ಆಯೋಜನೆಯಾಗಿದೆ. ಈ ಸಮಾವೇಶದ ರೂವಾರಿ ರೈತ ಸೇನಾ ಕರ್ನಾಟಕ ಸಂಘಟನೆಯ ಅಧ್ಯಕ್ಷ ವೀರೇಶ ಸೊಬರದಮಠ ಅವರು ಕಳೆದ ಮೂರು ರಾಜ್ಯದ ವಿವಿಧ ಭಾಗವನ್ನು ಸುತ್ತಿ ರೈತ ಸಂಘಟನೆಗಳನ್ನು ಒಂದೇ ವೇದಿಗೆ ತರುವ ಯತ್ನ ನಡೆಸಿದ್ದಾರೆ. ಈ ಮೂಲಕ ರೈತರ ಶಕ್ತಿಯ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ಕುರಿತು ಕನ್ನಡಪ್ರಭದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡದ್ದು ಹೀಗೆ..

ರೈತ ಸಮಾವೇಶದ ಉದ್ದೇಶವೇನು ?

ಇಂದು ರಾಜ್ಯದಲ್ಲಿ ನೂರಾರು ರೈತ ಸಂಘಟನೆಗಳು ಇವೆ. ಆದರೆ ಅವುಗಳು ಕೆಲವು ಕಾರಣಾಂತರಗಳಿಂದ ಒಡೆದು ಹೋಗಿದ್ದರಿಂದ ಆಡಳಿತಕ್ಕೆ ಬರುವ ಸರ್ಕಾರಗಳು ತಾವು ಮಾಡಿದ್ದೇ ಸರಿ ಎನ್ನುವಂತೆ ವರ್ತಿಸುತ್ತಿವೆ. ಒಡೆದು ಹೋಗಿರುವ ಎಲ್ಲ ರೈತ ಸಂಘಟನೆಗಳನ್ನು ಒಗ್ಗೂಡಿಸಿ ಅ.4 ರಂದು ಬಂಡಾಯದ ನೆಲದಲ್ಲಿ ರೈತ ಸಮಾವೇಶ ಮಾಡುವ ಮೂಲಕ ರೈತರ ಶಕ್ತಿ ಏನು ಎನ್ನುವುದನ್ನು ತೋರಿಸುತ್ತೇವೆ.

ಪ್ರಮುಖ ವಿಷಯ?

ಈ ಸಮಾವೇಶದಲ್ಲಿ ಮಹದಾಯಿ ಸೇರಿದಂತೆ ರಾಜ್ಯದ ರೈತರ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಕುಡಿಯುವ ನೀರಿಗೆ ಅವಶ್ಯರುವ ಮಹದಾಯಿ ಯೋಜನೆಗೆ ವನ್ಯಜೀವಿ ಹಾಗೂ ಪರಿಸರ ಇಲಾಖೆಗಳ ಪರವಾನಗಿ ಕೇಂದ್ರ ಸರ್ಕಾರವು ಕೊಡಿಸುವುದು, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಯಾಗಬೇಕು. ಡಾ. ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು ಎನ್ನುವುದು ಸೇರಿದಂತೆ ರೈತರ ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸಲಾಗುವುದು.

ರೈತರ ಆತ್ಮಹತ್ಯೆ ಹೆಚ್ಚುತ್ತಿವೆಯಲ್ಲ?

ಖಾಸಗಿ ಫೈನಾನ್ಸ್, ಬ್ಯಾಂಕುಗಳು ಸಾಲ ವಸೂಲಿಗೆ ನೋಟಿಸ್ ನೀಡಿ ಕಿರುಕುಳ ನೀಡಿಕೆ ಮತ್ತು ಅವರ ಜಮೀನು ಹರಾಜು ಮಾಡುತ್ತಿದ್ದರಿಂದ ಈ ಆತ್ಮಹತ್ಯೆಗಳು ಆಗುತ್ತಿವೆ. ಸರ್ಕಾರ ಈ ಬ್ಯಾಂಕುಗಳಿಗೆ ಎಚ್ಚರಿಸಬೇಕು. ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು, 60 ವರ್ಷ ತುಂಬಿದ ರೈತರಿಗೆ ಮಾಸಿಕ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಕಳಪೆ ಕಾಮಗಾರಿ ತನಿಖೆಯಾಗಬೇಕು. ರೈತ ಬಂಡಾಯದಲ್ಲಿ ವೀರಮರಣ ಹೊಂದಿದ ರೈತರ ಸ್ಮಾರಕಕ್ಕಾಗಿ ನರಗುಂದ ಪಟ್ಟಣದಲ್ಲಿ 2 ಎಕರೆ ಜಮೀನನ್ನು ಮಂಜೂರು ಮಾಡಬೇಕು. ರಾಜ್ಯದಲ್ಲಿರುವ ಎಲ್ಲ ಜಲಾಶಯಗಳ ಹಾಗೂ ಕೆರೆಗಳ ಹೂಳೆತ್ತುವ ಕಾರ್ಯ ಯೋಜನೆ ರೂಪಿಸಬೇಕು. ಕೃಷಿ ಪಂಪ್ ಸೆಟ್ ಹೊಂದಿದ ರೈತರ ಆಧಾರ್ ಲಿಂಕ್ ಮಾಡುತ್ತಿವುದನ್ನು ಕೈ ಬಿಡಬೇಕು. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರದ್ದು ಮಾಡಬೇಕು.

ತಮ್ಮ ಮೇಲೆ ಭ್ರಷ್ಟಾಚಾರದ ಆರೋಪವಿದೆಯಲ್ಲ?

ನಾನು ಮಹದಾಯಿ ಹೋರಾಟದಲ್ಲಿ ಸಕ್ರಿಯವಾಗಿದ್ದೇನೆ ಮತ್ತು ವಿವಿಧ ಇಲಾಖೆ ಭ್ರಷ್ಟಾಚಾರ ಬಯಲಿಗೆಳೆದು ಹೋರಾಟ ಮಾಡಿದ್ದೇನೆ. ಅದಕ್ಕಾಗಿ ನನ್ನ ಬೆಳವಣಿಗೆ ಸಹಿಸದ ಕೆಲವರು ಬ್ಲಾಕ್ಮೇಲ್ ಮಾಡುತ್ತ ಇಂಥ ಆರೋಪ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಎಲ್ಲ ರೈತ ಸಂಘಟನೆಗಳು ಒಂದೇ ವೇದಿಕೆಗೆ ಬರುವುದು ಯಾವಾಗ?

ರೈತ ಸಂಘಟನೆಗಳು ಬೆಳೆಯುವುದನ್ನು ಆಳುವ ಸರ್ಕಾರಗಳು ಸಹಿಸದೇ ರೈತ ನಾಯಕರಗಳ ಮಧ್ಯೆ ವೈಮನಸ್ಸು ಹುಟ್ಟಿಸಿ ಸಂಘಟನೆ ಒಡೆಯುತ್ತಿವೆ. ರೈತ ನಾಯಕರು ರಾಜಕಾರಣಿಗಳ ಕುತಂತ್ರಕ್ಕೆ ಬಲಿಯಾಗಬಾರದು.

ತಾವು ರಾಜಕಾರಣಕ್ಕೆ ಹೋಗುದಿಲ್ಲ ಎಂದು ಚುನಾವಣೆಗೆ ಸ್ಪರ್ಧಿಸಿದ್ದಿರಲ್ಲ?

ನಾನು ಮಹದಾಯಿ ಹೋರಾಟ ಪ್ರಾರಂಭ ಮಾಡುವ ಮೊದಲು ರಾಜಕಾರಣಕ್ಕೆ ಹೋಗುದಿಲ್ಲ ಎಂದಿದ್ದೆ. ಆದರೆ ಸುಮಾರು ವರ್ಷ ಮಹದಾಯಿ ಜಾರಿಗಾಗಿ ಹೋರಾಟ ಮಾಡಿದರೂ ಈ ಯೋಜನೆ ಜಾರಿಯಾಗಲಿಲ್ಲ, ನಮ್ಮ ರೈತ ಸಂಘಟನೆಗಳ ಸದಸ್ಯರು ನೀವು ಚುನಾವಣೆಗೆ ಸ್ಪರ್ಧಿಸಿ ಎಂದು ಒತ್ತಾಯ ಮಾಡಿದಾಗ ಸ್ಪರ್ಧಿಸಿದ್ದೆ.

ಅ. 4 ರ ರೈತ ಸಮಾವೇಶ ಸಿದ್ಧತೆ ಹೇಗೆ ನಡೆದಿದೆ?

ಕಳೆದ ಮೂರು ತಿಂಗಳಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಎಲ್ಲ ರೈತ ಸಂಘಟನೆಯ ನಾಯಕರನ್ನೂ ಭೇಟಿ ಮಾಡಿ ರೈತ ಸಮಾವೇಶಕ್ಕೆ ಆಹ್ವಾನ ನೀಡಿದ್ದೇನೆ, ಅದಕ್ಕೆ ಎಲ್ಲ ನಾಯಕರು ರೈತ ಬಂಡಾಯ ನೆಲದಿಂದಲೇ ರೈತ ಸಂಘಟನೆಗಳ ಒಗ್ಗಟ್ಟಿನ ಕಹಳೆ ಊದೋಣ, ನಾವೆಲ್ಲರೂ ಬರುತ್ತೇವೆ ಎಂದು ವಿಶ್ವಾಸದಿಂದ ಹೇಳಿದ್ದಾರೆ. ಹಾಗಾಗಿ ಈ ಸಮಾವೇಶ ಯಶಸ್ವಿಯಾಗುವ ವಿಶ್ವಾಸವಿದೆ.