ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೋಮು ಗಲಭೆಯಲ್ಲಿ ಭಾಗಿಯಾಗಿದ್ದ ಮುಸ್ಲಿಂ ಮತಾಂಧರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ವಾಪಸ್ ಪಡೆಯುವ ಮೂಲಕ ರಾಜ್ಯ ಸರ್ಕಾರ ಪೊಲೀಸರ ನೈತಿಕತೆಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹುಬ್ಬಳ್ಳಿಯಲ್ಲಿ ೨೦೨೨ರ ಏಪ್ರಿಲ್ ೧೬ರಂದು ನಡೆದ ಕೋಮು ಗಲಭೆಯಲ್ಲಿ ೧೫೫ ಕ್ಕೂ ಹೆಚ್ಚು ಮಂದಿ ಮುಸ್ಲಿಂ ಮತಾಂಧರ ಗುಂಪೊಂದು ಹುಬ್ಬಳ್ಳಿಯ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿತ್ತು ಎಂದು ಆರೋಪಿಸಿದ್ದಾರೆ. ಕಲ್ಲು, ಬಡಿಗೆ, ಬೆಂಕಿಯಿಂದ ಮುಸ್ಲಿಂ ಮತಾಂಧರು ಮಾಡಿದ ದಾಳಿಯಲ್ಲಿ ಇಬ್ಬರು ಪೊಲೀಸರಿಗೆ ಗಂಭೀರ ಗಾಯಗಳಾಗಿತ್ತು. ೧೦ ಪೊಲೀಸ್ ವಾಹನಗಳು ಜಖಂಗೊಂಡಿದ್ದವು. ಈ ಬಗ್ಗೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದರು.
ಇಂತಹ ಘಟನೆಗೆ ಕಾರಣರಾಗಿದ್ದ ಆರೋಪಿಗಳ ಮೇಲೆ ಹೂಡಲಾಗಿದ್ದ ಪ್ರಕರಣವನ್ನು ವಾಪಸ್ಸು ಪಡೆಯುವ ನಿರ್ಧಾರ ಮಾಡಿರುವ ರಾಜ್ಯ ಸಚಿವ ಸಂಪುಟದ ನಿರ್ಧಾರ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.ಮುಸ್ಲಿಂ ಮತಾಂಧರು, ಮತೀಯ ಮೂಲಭೂತವಾದಿ ಸಂಘಟನೆಗಳ ವಿಷಯದಲ್ಲಿ ಕಾಂಗ್ರೆಸ್ ತೋರುತ್ತಿರುವ ಮೃಧು ಧೋರಣೆಯಿಂದಾಗಿ ಸಮಾಜದಲ್ಲಿ ಇಂತಹ ಘಟನೆಗಳು ಮತ್ತೆ ಮತ್ತೆ ನಡೆಯುತ್ತಲೇ ಇವೆ ಎಂದು ಕಿಡಿಕಾರಿದ್ದಾರೆ.
ಕೆಎಫ್‌ಡಿ, ಪಿಎಫ್‌ಐನಂತಹ ಮತಾಂಧರ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯವನ್ನು ಕಾಂಗ್ರೆಸ್ ಸರ್ಕಾರ ಕುಗ್ಗಿಸಿದೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಪ್ರಕರಣ, ಹೋರಾಟದ ಪ್ರಕರಣ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.ಕಾವೇರಿ, ಮಹದಾಯಿ, ಕೃಷ್ಣ ಸೇರಿದಂತೆ ನಾಡಿನ ನೆಲ, ಜಲ, ಭಾಷೆ ವಿಚಾರವಾಗಿ ಹೋರಾಟ ಮಾಡಿರುವ ಕನ್ನಡದ ಕಲಿಗಳ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ವಾಪಸ್ಸು ಪಡೆಯಬೇಕು. ಅದು ಬಿಟ್ಟು ಮತಾಂಧ ಶಕ್ತಿಗಳ ವಿರುದ್ಧ ಹೂಡಿರುವ ಪ್ರಕರಣಗಳನ್ನು ವಾಪಸ್ಸು ಪಡೆದು ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಒಂದು ವರ್ಗದ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.