ರಾಮನಗರ: ರೇಷ್ಮೆನಾಡಿನಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿರುವ ಮುಂಗಾರು ಮಳೆಯು ಡೆಂಘೀ ಉಲ್ಬಣಕ್ಕೆ ಪ್ರಚೋದನೆ ನೀಡಿದ್ದು, ಜಿಲ್ಲಾದ್ಯಂತ ಈವರೆಗೆ ಇಬ್ಬರು ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ.

ರಾಮನಗರ: ರೇಷ್ಮೆನಾಡಿನಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿರುವ ಮುಂಗಾರು ಮಳೆಯು ಡೆಂಘೀ ಉಲ್ಬಣಕ್ಕೆ ಪ್ರಚೋದನೆ ನೀಡಿದ್ದು, ಜಿಲ್ಲಾದ್ಯಂತ ಈವರೆಗೆ ಇಬ್ಬರು ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ.

ಈ ಹೊತ್ತಿಗೆ ರೇಷ್ಮೆನಾಡಿನಾದ್ಯಂತ ಜೋರು ಮಳೆ ಹಿಡಿಯಬೇಕಾಗಿತ್ತು. ಆದರೆ, ಸೋನೆ ಮಳೆಯೊಂದಿಗೆ ಬಿಸಿಲು ಬೀಳುತ್ತಿರುವುದು ಡೆಂಘೀ ಹರಡುವ ಸೊಳ್ಳೆ ಸಂತಾನೋತ್ಪತ್ತಿಗೆ ತೊಟ್ಟಿಲು ತೂಗಿದಂತಾಗಿದೆ.

ಡೆಂಘೀ ಉಲ್ಬಣಗೊಳ್ಳಲು ಕಾರಣವಾಗಿರುವ ಈ ವಾತಾವರಣ ಜನರ ಆರೋಗ್ಯದ ಬಗ್ಗೆ ಭಯ ಪಡುವಂತಾಗಿದೆ.

5 ವರ್ಷಗಳ ಬಳಿಕ ಸಾವು:

ಜಿಲ್ಲೆಯಲ್ಲಿ 5 ವರ್ಷಗಳ ಬಳಿಕ ಇಬ್ಬರು ಡೆಂಘೀಗೆ ಬಲಿಯಾಗಿದ್ದಾರೆ. ಮಾಗಡಿ ತಾಲೂಕಿನ ವಿ.ಜಿ.ದೊಡ್ಡಿಯಲ್ಲಿ 12 ವರ್ಷದ ಬಾಲಕ ಹಾಗೂ ಕುದೂರಿನಲ್ಲಿ 19 ವರ್ಷದ ಯುವತಿ ಡೆಂಘೀಗೆ ಪ್ರಾಣತೆತ್ತಿದ್ದರೆ, 131 ಪ್ರಕರಣಗಳು ದಾಖಲಾಗಿವೆ.

ಅತಿ ಹೆಚ್ಚು ರಾಮನಗರ ತಾಲೂಕಿನಲ್ಲಿ 42 ಮತ್ತು ಅತಿ ಕಡಿಮೆ ಹಾರೋಹಳ್ಳಿ ತಾಲೂಕಿನಲ್ಲಿ 10 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಚನ್ನಪಟ್ಟಣ ತಾಲೂಕಿನಲ್ಲಿ 20, ಕನಕಪುರ ತಾಲೂಕಿನಲ್ಲಿ 25 ಹಾಗೂ ಮಾಗಡಿ ತಾಲೂಕಿನಲ್ಲಿ 34 ಡೆಂಘೀ ಪ್ರಕರಣ ದಾಖಲಾಗಿದೆ.

ಕಳೆದೊಂದು ತಿಂಗಳಲ್ಲಿ ಹೆಚ್ಚು ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಜ್ವರ ಕಾಣಿಸಿಕೊಂಡರೆ ಸಾಕು ಡೆಂಘೀ ಖಾತ್ರಿ ಅನ್ನುವ ರೀತಿಯ ಸ್ಥಿತಿ ಇದೆ. ಜ್ವರ ಕಾಣಿಸಿಕೊಂಡರೆ ಮನೆಯಲ್ಲಿ ಔಷಧಿ ತೆಗೆದುಕೊಳ್ಳುವುದನ್ನು ಬಿಟ್ಟು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಿರಿ ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

ತಾಪಮಾನ, ಹ್ಯುಮಿಡಿಟಿ ಮತ್ತು ನೀರು ಸಿಕ್ಕರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. 15-35 ಡಿಗ್ರಿವರೆಗೆ ತಾಪಮಾನವಿದ್ದಲ್ಲಿ ಅದು ಸೊಳ್ಳೆಗಳಿಗೆ ಹೆಚ್ಚು ಪೂರಕ. ಜತೆಗೆ, ಬೇಸಿಗೆಯಲ್ಲಿ ನೀರಿನ ಕೊರತೆಯಿಂದಾಗಿ ಸಿಮೆಂಟ್‌ ತೊಟ್ಟಿ, ಡ್ರಮ್‌ಗಳಲ್ಲಿ ನೀರು ಸಂಗ್ರಹಿಸಲಾಗುತ್ತದೆ. ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸದೇ ಇದ್ದುದ್ದರಿಂದಲೂ ಸೊಳ್ಳೆ ಉತ್ಪತ್ತಿಗೆ ಕಾರಣವಾಗಿವೆ.

ಬೇಸಿಗೆ ಅವಧಿಯಲ್ಲಿ ಮಳೆ ಇಲ್ಲದೆ ಚರಂಡಿ , ಮೋರಿ - ಕಾಲುವೆಗಳಲ್ಲಿ ನೀರು ನಿಂತು ಸೊಳ್ಳೆಗಳ ಲಾರ್ವ ಪ್ರಮಾಣ ಹೆಚ್ಚಾಗಿ ಸೊಳ್ಳೆಗಳ ಕಾಟವು ಜಿಲ್ಲೆಯಲ್ಲಿ ಮಿತಿ ಮೀರಿದೆ. ಇದರ ಪರಿಣಾಮ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ವೈದ್ಯರು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ಕೋಟ್ ..............

ರಾಮನಗರ ಜಿಲ್ಲಾ ಕೇಂದ್ರದಲ್ಲಿ ಡೆಂಘೀ ವಾರ್ ರೂಮ್ ತೆರೆಯಲಾಗಿದ್ದು, 4 ಬ್ಲಡ್ ಬ್ಯಾಂಕ್ ಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 15 ಡೆಂಘೀ ವಾರ್ಡ್ , 10 ಐಸಿಯು ವಾರ್ಡ್ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 5 ಡೆಂಘೀ ವಾರ್ಡ್, 5 ಐಸಿಯು ವಾರ್ಡುಗಳ ವ್ಯವಸ್ಥೆ ಮಾಡಲಾಗಿದೆ. ಈವರೆಗೆ 131ರ ಪೈಕಿ 105 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, 26 ಮಂದಿಗೆ ಚಿಕಿತ್ಸೆ ಮುಂದುವರೆದಿದೆ.

- ಡಾ.ಶಶಿಧರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ರಾಮನಗರ

ಬಾಕ್ಸ್‌................

ಇದುವರೆಗೆ ಏನಾಗಿದೆ ?

-ಸೊಳ್ಳೆ ಉತ್ಪತ್ತಿ ತಾಣ ಪತ್ತೆ ಹಚ್ಚಿ ಲಾರ್ವಾಗಳ ಕೇಂದ್ರಗಳನ್ನು ನಾಶ ಪಡಿಸುವುದು, ಪ್ರತಿ ಶುಕ್ರವಾರ ಸೊಳ್ಳೆ ನಿರ್ಮೂಲನಾ ದಿನ ಎಂದು ಮಾಡಲಾಗುತ್ತಿದೆ.

-ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಸೇರಿ ಇತರರು ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.

- ಕುಡಿಯದೇ ಇರುವ ನೀರಿಗೆ ಲಾರ್ವಾ ನಾಶಕ ಔಷಧಯನ್ನು ಹಾಕಲಾಗುತ್ತಿದೆ. ಹೆಚ್ಚು ಕೇಸ್‌ ಇರುವ ಕಡೆ, ಲಾರ್ವಾ ಇರುವ ಕಡೆಗಳಲ್ಲಿ ಫಾಗಿಂಗ್‌ ಮಾಡಿಸಲಾಗುತ್ತಿದೆ.

-ಜಲಮೂಲ, ಮನೆಯಲ್ಲಿನ ತೊಟ್ಟಿಗಳಲ್ಲಿಗಪ್ಪಿ ಮೀನುಗಳನ್ನು ಬಿಡಲಾಗುತ್ತಿದೆ. ಯಾವುದೇ ಸರಕಾರಿ ಆಸ್ಪತ್ರೆಗೆ ಸಂಪರ್ಕಿಸಿದರೂ ಈ ಪ್ರಭೇದದ ಮೀನು ನೀಡಲಾಗುವುದು.

ಏನಾಗಬೇಕು?

-ಜಿಲ್ಲೆಯಲ್ಲಿ ಸೊಳ್ಳೆ ಸಾಂದ್ರತೆ ಇಳಿಕೆ ಮಾಡಲು ಕ್ಷಿಪ್ರ ಗತಿಯಲ್ಲಿಫಾಗಿಂಗ್‌ ಕಾರ್ಯ ಕೈಗೆತ್ತಿಕೊಳ್ಳಬೇಕು.

-ಚರಂಡಿಗಳೇ ಡೆಂಘೀ ಸೊಳ್ಳೆ ಉತ್ಪಾದನಾ ಕೇಂದ್ರಗಳಾಗಿ ಮಾರ್ಪಟ್ಟಿವೆ. ಅದರೆಡೆಗೆ ಸ್ಥಳೀಯ ಸಂಸ್ಥೆಗಳು ಗಮನಿಸಬೇಕು.

-ನೀರು ಸಂಗ್ರಹವಾಗುವ ತಾಣಗಳನ್ನು ತಕ್ಷಣ ಸ್ವಚ್ಛಗೊಳಿಸಬೇಕು.

ಬಾಕ್ಸ್ ...............

ಡೆಂಘೀ ವಾರ್‌ ರೂಂಗೆ 15 - 20 ಕರೆಗಳು

ಕೋವಿಡ್ ಸಂದರ್ಭಧಲ್ಲಿ ವಾರ್ ರೂಮ್ ತೆರೆದ ಮಾದರಿಯಲ್ಲಿಯೇ ಜಿಲ್ಲಾ ಕೇಂದ್ರದಲ್ಲಿ ಡೆಂಘೀ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವಾರ್ ರೂಂ ಅನ್ನು ರಚಿಸಲಾಗಿದೆ. ಇದರ ದೂರವಾಣಿ ಸಂಖ್ಯೆ: 9449843266 ಆಗಿದೆ. ಈ ದೂರವಾಣಿಗೆ ಕರೆ ಮಾಡಿ ಸಾರ್ವಜನಿಕರು ಮಾಹಿತಿ ಪಡೆಯಬಹುದಾಗಿದೆ. ಪ್ರತಿನಿತ್ಯ ವಾರ್ ರೂಂಗೆ 15 ರಿಂದ 20 ದೂರವಾಣಿ ಕರೆಗಳು ಬರುತ್ತಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಸ್ಪಂದಿಸುತ್ತಿದ್ದಾರೆ.

ಬಾಕ್ಸ್‌.................

ಡೆಂಘೀ ನಿಯಂತ್ರಣಕ್ಕೆ ಮಾರ್ಗಸೂಚಿ ಏನು?

1. ಒಂದೇ ಸ್ಥಳದಲ್ಲಿ ಎರಡು ಅಥವಾ ಮೂರು ಡೆಂಘೀ ಕೇಸ್ ಕಂಡುಬಂದರೆ ಹಾಟ್ ಸ್ಪಾಟ್ ಅಂತ ಪರಿಗಣನೆ

2. ಹಾಟ್‌ಸ್ಪಾಟ್‌ಗಳಲ್ಲಿ ಲಾರ್ವಾ ನಾಶ ಚಟುವಟಿಕೆಯನ್ನು ತೀವ್ರಗೊಳಿಸುವುದು, ಒಳಾಂಗಣ/ಹೊರಾಂಗಣದಲ್ಲಿ ಲಾರ್ವಾನಾಶಕಗಳ ಬಳಕೆ ಹಾಗೂ ಒಳಾಂಗಣದಲ್ಲಿ ಡೆಂಘೀ ನಾಶಕವನ್ನು ಸಿಂಪಡಿಸಿ ಮನೆಯ ಸದಸ್ಯರನ್ನ 30 ನಿಮಿಷಗಳ ಕಾಲ ಮನೆಯಿಂದ ಹೊರಗಡೆ ಇರುವಂತೆ ಸೂಚಿಸುವುದು

3. ಡೆಂಘೀ ಪಾಸಿಟಿವ್ ಆದ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್‌ಗಳನ್ನು ತುರ್ತಾಗಿ ಸಕ್ರೀಯಗೊಳಿಸಬೇಕು.

4. ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿ ಬಿಪಿಎಲ್‌ ಕುಟುಂಬಗಳಿಗೆ ಸೊಳ್ಳೆ ನಿರೋಧಕ, ಬೇವಿನ ಎಣ್ಣೆ ವಿತರಣೆ ಖಚಿತಪಡಿಸಿಕೊಳ್ಳುವುದು ಹಾಗೂ ಕೈ, ಕಾಲು – ಕುತ್ತಿಗೆಯ ಭಾಗದಲ್ಲಿ ಹಚ್ಚಿಕೊಳ್ಳುವಂತೆ ತಿಳಿಸುವುದು.

5. ಡೆಂಘೀ ಪಾಸಿಟಿವ್ ಆದ ವ್ಯಕ್ತಿಯನ್ನ ಜ್ವರ ಕಾಣಿಸಿಕೊಂಡ ದಿನದಿಂದ 14 ದಿನಗಳ ಕಾಲ ಅನುಪಾಲನೆ ಮಾಡುವುದು

6. ಬೇವಿನ ಎಣ್ಣೆ ಇಲ್ಲದೇ ಹೋದರೆ ಸಿಟ್ರೋನೆಲ್ ಆಯಿಲ್, ಲೆಮನ್ ಗ್ರೇಸ್ ಆಯಿಲ್ ಅಥವಾ ಡೀಟ್ ಆಧಾರಿತ ಕ್ರೀಂ ಆಯಿಲ್‌ಗಳನ್ನ ವಿತರಣೆ ಮಾಡಬೇಕು

7. ಡೆಂಘೀ ಪ್ರಕರಣಗಳ ನಿರ್ವಹಣೆಗಾಗಿ ತಾಲ್ಲೂಕು ಮತ್ತು ಜಿಲ್ಲಾ ಆಸ್ಫತ್ರೆಗಳಲ್ಲಿ 5 ರಿಂದ 10 ಹಾಸಿಗೆಗಳನ್ನು ಮೀಸಲಿಡಬೇಕು.

8. ಡೆಂಘೀ ಜ್ವರ ಪ್ರಕರಣಗಳ ಪರೀಕ್ಷೆ, ಚಿಕಿತ್ಸೆ ಹಾಗೂ ನಿರ್ವಹಣಾ ಸೌಲಭ್ಯವನ್ನು ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲಾ ಆರೋಗ್ಯ ಸಂಸ್ಥೆಗಳು ಎಲ್ಲರಿಗೂ ಸಂಪೂರ್ಣ ಉಚಿತವಾಗಿ ನೀಡಬೇಕು.

9. ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಟೆಸ್ಟಿಂಗ್‌ ಕಿಟ್‌, ಅಗತ್ಯ ಪ್ರಮಾಣದ ಔಷಧಿ ಹಾಗೂ IV Fluids ಔಷಧ ದಾಸ್ತಾನು ಲಭ್ಯತೆಯನ್ನು ಖಚಿತಪಡಿಸಬೇಕು. ಜಿಲ್ಲಾವಾರು ಸರ್ಕಾರಿ ಹಾಗೂ ಖಾಸಗಿ ರಕ್ತನಿಧಿಗಳಿಂದ ಪ್ಲೇಟ್‌ಲೆಟ್‌, ಪ್ಲಾಸ್ಮಾ ಹಾಗೂ ಇತರ ಕಾಂಪೊನೆಂಟ್‌ಗಳ ಬಗ್ಗೆ ಪ್ರತಿದಿನ ಮಾಹಿತಿ ನೀಡಬೇಕು.

10. ಕಡ್ಡಾಯವಾಗಿ ಡೆಂಘೀ ಜ್ವರ ನಿರ್ವಹಣೆ ಸಂಬಂಧ ಶಿಷ್ಟಾಚಾರ ಪಾಲನೆ ಮಾಡಬೇಕು.