ಸಾರಾಂಶ
ದಾವಣಗೆರೆ : ಡೆಂಘೀ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡಿದ್ದು, ಡೆಂಘೀ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಸಮಗ್ರ ಮಾಹಿತಿಯನ್ನು ನ್ಯಾಯಾಲಯಕ್ಕೆ ರಾಜ್ಯ ಸರ್ಕಾರವು ಸಲ್ಲಿಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಡೆಂಘೀ ನಿಯಂತ್ರಣದಲ್ಲಿದ್ದು, ಶೇ.1ರಷ್ಟು ಪ್ರಕರಣಗಳು ಮಾತ್ರ ಗಂಭೀರವಾಗಿದೆ. ರಾಜ್ಯದಲ್ಲಿ ಡೆಂಘೀ ನಿಯಂತ್ರಣಕ್ಕೆ ಕಾರ್ಯಪಡೆ ಸಹ ರಚಿಸಲಾಗಿದೆ ಎಂದರು.
ಸದ್ಯಕ್ಕೆ ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಇಲ್ಲ. ಡೆಂಘೀ ನಿಯಂತ್ರಣದ ನಿಟ್ಟಿನಲ್ಲಿ ಸೊಳ್ಳೆಗಳ ನಿರ್ಮೂಲನೆಗೆ ಲಾರ್ವಾ ಪರೀಕ್ಷೆ ನಡೆಸಲಾಗುತ್ತಿದೆ. ಡೆಂಘೀ ನಿಯಂತ್ರಣ, ಜಾಗೃತಿ ಮೂಡಿಸಲು ಪ್ರತಿ ಶುಕ್ರವಾರ ಆರೋಗ್ಯ ಇಲಾಖೆ ಮಾತ್ರವಲ್ಲ, ಎಲ್ಲಾ ಇಲಾಖೆಗಳು ಸಮನ್ವಯತೆಯೊಂದಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಡೆಂಘೀಯಿಂದಾಗಿ ಈವರೆಗೆ 7 ಜನ ಸಾವನ್ನಪ್ಪಿದ್ದಾರೆ. ಶೇ.1ರಷ್ಟು ಗಂಭೀರ ಪ್ರಕರಣ ಇವೆ. ಡೆಂಘೀ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆಯೆಂದು ವಿಪಕ್ಷ ಬಿಜೆಪಿಯವರು ಆರೋಪಿಸುತ್ತಾರೆ. ಬಿಜೆಪಿಯವರು ಡೆಂಘೀ ತರುವ ಸೊಳ್ಳೆಗಳಿಗಿಂದಲೂ ಹೆಚ್ಚು ಆರೋಪ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಡೆಂಘೀಯಂತಹ ಪ್ರಕರಣಗಳ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಬಿಜೆಪಿಯವರೂ ಸಹ ಡೆಂಘೀ ನಿಯಂತ್ರಣದ ವಿಚಾರದಲ್ಲಿ ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಕಿವಿಮಾತು ಹೇಳಿದರು.
ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಅಧಿಕಾರಿಗಳು, ಜನ ಪ್ರತಿನಿಧಿಗಳು ಇದ್ರು. ಇದಕ್ಕೂ ಮುನ್ನ ದಾವಣಗೆರೆ ಜಿಲ್ಲಾ ಆಸ್ಪತ್ರೆಯನ್ನು ಸಚಿವ ದಿನೇಶ ಗುಂಡೂರಾವ್ ವೀಕ್ಷಿಸಿದರು.ಮುಡಾ ಹಗರಣದ ವಿರುದ್ಧ ಬಿಜೆಪಿಯವರು ರ್‍ಯಾಲಿ ಮಾಡಲಿ, ಹೋರಾಟ ನಡೆಸಲಿ. ಮುಡಾ ಹಾಗೂ ವಾಲ್ಮೀಕಿ ನಿಗಮದ ವಿಚಾರಗಳ ಬಗ್ಗೆ ಸದನದಲ್ಲೇ ನಾವು ಅಗತ್ಯ ದಾಖಲೆಗಳ ಸಮೇತ ಮಾತನಾಡುತ್ತೇವೆ.
ದಿನೇಶ ಗುಂಡೂರಾವ್, ಆರೋಗ್ಯ ಸಚಿವ.
ದಾವಣಗೆರೆ ಜಿಲ್ಲಾಸ್ಪತ್ರೆ ವೀಕ್ಷಣೆ ಮಾಡಿದ ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ರಿಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಆಸ್ಪತ್ರೆ ಬಗ್ಗೆ ವಿವರಿಸಿದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಕೆ.ಎಸ್.ಬಸವಂತಪ್ಪ ಇತರರು ಇದ್ದರು.