ಡೆಂಘೀ ರೀಲ್ಸ್‌ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ

| Published : Sep 18 2024, 01:51 AM IST

ಸಾರಾಂಶ

ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಬಿಬಿಎಂಪಿಯು ಖಾಸಗಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಡೆಂಘೀ ವಾರಿಯರ್‌ ಸ್ಪರ್ಧೆಯ ವಿಜೇತರಿಗೆ ಮಂಗಳವಾರ ನಗರದ ಪುರಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಬಿಬಿಎಂಪಿಯು ಖಾಸಗಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಡೆಂಘೀ ವಾರಿಯರ್‌ ಸ್ಪರ್ಧೆಯ ವಿಜೇತರಿಗೆ ಮಂಗಳವಾರ ನಗರದ ಪುರಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡೆಂಘೀ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆಯ ಆರೋಗ್ಯ ವಿಭಾಗದಿಂದ ಜುಲೈನಲ್ಲಿ ಫೋರಂ ಸೌತ್ ಮಾಲ್, ಮಂತ್ರಿ ಮಾಲ್, ಮಾಲ್ ಆಫ್ ಏಷ್ಯಾ ಸಹಯೋಗದೊಂದಿಗೆ ಸ್ಪರ್ಧೆ ನಡೆಸಲಾಗಿತ್ತು. 250ಕ್ಕೂ ಹೆಚ್ಚು ವಾರಿಯರ್ಸ್‌ ಭಾಗವಹಿಸಿ ಡೆಂಘೀ ಮೂಲ ಗುರುತಿಸುವುದು, ವರದಿ ಮತ್ತು ತಡೆಗಟ್ಟುವ ಕುರಿತು ವಿಡಿಯೋಗಳನ್ನು ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು.

ಹೆಚ್ಚು ಲೈಕ್ಸ್ ಹಾಗೂ ವೀಕ್ಷಣೆ ಆಗಿರುವ ವಿಡಿಯೋಗಳ ಅನುಸಾರ ಪ್ರಶಸ್ತಿ ವಿತರಿಸಲಾಯಿತು. ಪ್ರಶಸ್ತಿಗೆ ಆಯ್ಕೆಯಾಗಿರುವ 10 ಮಂದಿಯ ಪೈಕಿ ಮೊದಲ 5 ವಿಜೇತರಿಗೆ ತಲಾ ₹25 ಸಾವಿರ ಮೌಲ್ಯದ ಗಿಫ್ಟ್‌ ಓಚರ್, ನಂತರದ 5 ಮಂದಿಗೆ ತಲಾ ₹10 ಸಾವಿರ ಮೌಲ್ಯದ ಗಿಫ್ಟ್‌ ಓಚರ್‌ನೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜತೆಗೆ ಶಾಲಾ ಮಟ್ಟದಲ್ಲಿ ಹೆಚ್ಚು ಮಕ್ಕಳಿಗೆ ಪ್ರೇರಣೆ ನೀಡಿದ ತರಗತಿ ಶಿಕ್ಷಕಿಗೆ ₹35 ಸಾವಿರ ಮೌಲ್ಯದ ಗಿಫ್ಟ್‌ ಓಚರ್ ಹಾಗೂ ಅತಿ ಹೆಚ್ಚು ಸ್ಪರ್ಧೆಯಲ್ಲಿ ಭಾಗವಹಿಸಿದ ಶಿಕ್ಷಣ ಸಂಸ್ಥೆಗೆ ₹1 ಲಕ್ಷ ಮೌಲ್ಯದ ಗಿಫ್ಟ್‌ ಓಚರ್ ನೀಡಲಾಯಿತು. ಈ ಗಿಫ್ಟ್‌ ಓಚರ್‌ಗಳನ್ನು ಸಹಭಾಗಿತ್ವ ವಹಿಸಿಕೊಂಡ ಸಂಸ್ಥೆಗಳಿಂದ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ನಗರದಲ್ಲಿ ಜುಲೈ ತಿಂಗಳಲ್ಲಿ ಹೆಚ್ಚು ಡೆಂಘೀ ಪ್ರಕರಣಗಳು ಕಂಡು ಬರುತ್ತಿದ್ದವು. ಸಾರ್ವಜನಿಕರ ಸಹಕಾರದಿಂದ ಹಾಗೂ ಪರಿಣಾಮಕಾರಿಯಾಗಿ ಸಾಮಾಜಿಕ ಜಾಲ ತಾಣ ಬಳಕೆ ಮಾಡಿಕೊಂಡಿದ್ದರಿಂದ ಡೆಂಘೀ ನಿಯಂತ್ರಣ ಸಾಧ್ಯವಾಯಿತು ಎಂದು ಹೇಳಿದರು.

ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ, ವಲಯ ಆರೋಗ್ಯಾಧಿಕಾರಿಗಳು ಇದ್ದರು.