ಸಮುದಾಯದ ಸಹಭಾಗಿತ್ವದಿಂದ ಡೆಂಗ್ಯು ನಿಯಂತ್ರಣ ಸಾಧ್ಯ: ಆರೋಗ್ಯಾಧಿಕಾರಿ ನಾರಾಯಣಸ್ವಾಮಿ

| Published : May 17 2024, 12:30 AM IST

ಸಮುದಾಯದ ಸಹಭಾಗಿತ್ವದಿಂದ ಡೆಂಗ್ಯು ನಿಯಂತ್ರಣ ಸಾಧ್ಯ: ಆರೋಗ್ಯಾಧಿಕಾರಿ ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರವಿಕುಮಾರ್ ಮಾತನಾಡಿ, ಪ್ರತಿ ವರ್ಷವೂ ಒಂದು ಘೋಷಣೆಯೊಂದಿಗೆ ಈ ಡೆಂಗ್ಯೂ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ವರ್ಷದ ಘೋಷವಾಕ್ಯ ‘ಸಮುದಾಯದ ಸಹಭಾಗಿತ್ವದೊಂದಿಗೆ ಡೆಂಗ್ಯೂ ನಿಯಂತ್ರಣ’ ಎಂಬುದಾಗಿದ್ದು, ಈ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಇಲಾಖೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ಗ್ರಾಪಂಗಳಿಂದ ಪ್ರತಿ ಗ್ರಾಮದಲ್ಲಿ ವಾರಕ್ಕೊಮ್ಮೆ ‘ಡ್ರೈ ಡೇ’ ಆಚರಿಸುವ ಮೂಲಕ ಸಮುದಾಯದ ಸಹಭಾಗಿತ್ವದೊಂದಿಗೆ ಡೆಂಗ್ಯು ನಿಯಂತ್ರಿಸಲು ಆರೋಗ್ಯ ಇಲಾಖೆಯೊಂದಿಗೆ ಪಂಚಾಯತ್ ರಾಜ್ ಇಲಾಖೆಯ ಪಿಡಿಒಗಳು ಸಹಕಾರ ನೀಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಕರೆ ನೀಡಿದರು.

ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ‘ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ’ ಅಂಗವಾಗಿ ಜಾಗೃತಿ ಕರಪತ್ರ ಬಿಡುಗಡೆಗೊಳಿಸಿ, ತಾಲೂಕಿನ ಗ್ರಾಪಂ ಪಿಡಿಒಗಳನ್ನುದ್ದೇಶಿಸಿ ಅವರು ಮಾತನಾಡಿದರು.

ಗ್ರಾಪಂಗಳಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಸರಬರಾಜು ನಿಲ್ಲಿಸಿ, ವಾಟರ್‌ಮೆನ್‌ಗಳ ಸಹಕಾರದೊಂದಿಗೆ ಮನೆಗಳಲ್ಲಿ ನೀರಿನ ಸಂಗ್ರಹ, ಸಾಧನಗಳ ಸ್ವಚ್ಛತೆ ಖಾತ್ರಿಪಡಿಸಿಕೊಂಡ ನಂತರ ನೀರು ಹರಿಸುವುದರಿಂದ ಸೊಳ್ಳೆಗಳ ಸಂತತಿಯನ್ನು ತಡೆಯಲು ಸಾಧ್ಯವಾಗಲಿದ್ದು, ಡೆಂಗ್ಯೂ ರೋಗವನ್ನು ನಿಯಂತ್ರಿಸಬಹುದಾಗಿದೆ ಎಂದರು.

ಮನುಷ್ಯರಿಗೆ ಆರೋಗ್ಯ ಎಂಬುದು ಮುಖ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೋಗಗಳು ಪತ್ತೆಯಾಗುತ್ತಿವೆ. ಇದರಲ್ಲಿ ಡೆಂಗ್ಯೂ ಜ್ವರವು ಸಹ ಒಂದಾಗಿದ್ದು, ಇದರ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ಪ್ರತಿಯೊಬ್ಬರೂ ಸಹ ತಮ್ಮ ಜವಾಬ್ದಾರಿಯನ್ನು ಅರಿತು ರೋಗದಿಂದ ದೂರವಿರಿ. ಮನೆಯಲ್ಲಿ ಇರುವ ನೀರಿನ ತೊಟ್ಟಿಗಳು, ಡ್ರಂಗಳು ಮತ್ತು ಸಿಂಟೆಕ್ಸ್‌ಗಳನ್ನು ಕನಿಷ್ಠ ವಾರಕ್ಕೆ ಒಂದು ಬಾರಿ ಸ್ವಚ್ಛಗೊಳಿಸಬೇಕು. ಮನೆಯ ಸುತ್ತಮುತ್ತ ಎಸೆದಿರುವ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಿ. ಈಡಿಸ್ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು, ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಸೊಳ್ಳೆ ಪರದೆಯನ್ನು ಬಳಸಬೇಕು ಎಂದರು.

ಡೆಂಗ್ಯು ನಿಯಂತ್ರಣಕ್ಕೆ ಸೊಳ್ಳೆ ನಾಶ ಮುಖ್ಯ:

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರವಿಕುಮಾರ್ ಮಾತನಾಡಿ, ಪ್ರತಿ ವರ್ಷವೂ ಒಂದು ಘೋಷಣೆಯೊಂದಿಗೆ ಈ ಡೆಂಗ್ಯೂ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ವರ್ಷದ ಘೋಷವಾಕ್ಯ ‘ಸಮುದಾಯದ ಸಹಭಾಗಿತ್ವದೊಂದಿಗೆ ಡೆಂಗ್ಯೂ ನಿಯಂತ್ರಣ’ ಎಂಬುದಾಗಿದ್ದು, ಈ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಇಲಾಖೆ ಮುಂದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಪಂ ಕಾರ್ಯ ನಿರ್ವಹಣಾಧಿಕಾರಿ ಜೋಸೆಫ್ ಮಾತನಾಡಿದರು.

ತಾಲೂಕಿನ ಎಲ್ಲಾ ಗ್ರಾಪಂಗಳ ಪಿಡಿಒಗಳು ಹಾಜರಿದ್ದ ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸತ್ಯನಾರಾಯಣಗೌಡ, ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾದೇವಿ, ಬ್ಲಾಕ್ ಪ್ರೋಗ್ರಾಂ ಅಧಿಕಾರಿ ಮಂಜುನಾಥ್, ಆರೋಗ್ಯ ನಿರೀಕ್ಷಣಾಧಿಕಾರಿ ರಜನಿ ಇದ್ದರು.