ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಈವರೆಗೆ ೨೯೭ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಡೆಂಘೀ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಂತರಾಜು ಮನವಿ ಮಾಡಿದರು.ಮಂಡ್ಯ ತಾಲೂಕಿನಲ್ಲಿ ೧೫೬ ಪ್ರಕರಣ ಕಂಡುಬಂದಿದ್ದು, ಈ ಪೈಕಿ ೩೭ ನಗರ ಮತ್ತು ೧೧೯ ಗ್ರಾಮಾಂತರ ಪ್ರದೇಶದಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಮದ್ದೂರು ತಾಲೂಕಿನಲ್ಲಿ ೪೦, ಮಳವಳ್ಳಿಯಲ್ಲಿ ೧೮, ಪಾಂಡವಪುರದಲ್ಲಿ ೧೬, ಶ್ರೀರಂಗಪಟ್ಟಣ ೩೪, ಕೆ.ಆರ್.ಪೇಟೆ ೧೭ ಹಾಗೂ ನಾಗಮಂಗಲ ತಾಲೂಕಿನಲ್ಲಿ ೧೬ ಪ್ರಕರಣಗಳು ಪತ್ತೆಯಾಗಿವೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ನೀರು ನಿಲ್ಲದಂತೆ ಎಚ್ಚರವಹಿಸಿ:ಮಾರಣಾಂತಿಕವಾಗಿರುವ ಡೆಂಘೀ ತಡೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಮನೆಯ ಸುತ್ತ ಪರಿಸರ ಸ್ವಚ್ಛವಾಗಿಟ್ಟುಕೊಂಡು ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಒಳಗಿರುವ ರೆಫ್ರಿಜರೇಟರ್‌ನ ಹಿಂಭಾಗದಲ್ಲಿ ನೀರಿನ ಬಾಕ್ಸ್ ಇದ್ದು, ಅದರಲ್ಲಿ ಸೊಳ್ಳೆ ಮೊಟ್ಟೆ ಇಟ್ಟು ಸೊಳ್ಳೆಗಳಾಗಿ ರೂಪುಗೊಳ್ಳುತ್ತವೆ. ಸೋಂಕಿತ ಹೆಣ್ಣು ಸೊಳ್ಳೆ ಮನುಷ್ಯನಿಗೆ ಕಚ್ಚಿದರೆ ಅದರಿಂದ ಡೆಂಘೀ ಹರಡು ಸಾಧ್ಯತೆಗಳಿವೆ ಎಂದರಲ್ಲದೇ, ಜೊತೆಗೆ ಚಿಕೂನ್‌ಗುನ್ಯಾ, ಝೀಕಾ, ಮೆದುಳು ಜ್ವರ, ಮಲೇರಿಯಾ, ಆನೆಕಾಲು ರೋಗವೂ ಬರಬಹುದು ಎಂದು ಎಚ್ಚರಿಸಿದರು.
ಲಾರ್ವಾ ಸಮೀಕ್ಷೆಗೆ ಅವಕಾಶ ನೀಡಿ:ಲಾರ್ವಾ ಸಮೀಕ್ಷೆಗಾಗಿ ಆರೋಗ್ಯ ಸಿಬ್ಬಂದಿ ಅಥವಾ ಆಶಾ ಕಾರ್ಯಕರ್ತರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಮನೆಗಳ ಬಳಿಗೆ ಬಂದಾಗ ಅವರಿಗೆ ಮನೆಯೊಳಗೆ ತೆರಳಲು ಅವಕಾಶ ನೀಡಬೇಕು. ಜಿಲ್ಲೆಯಲ್ಲಿ ಸಾಮಾನ್ಯವಾಗಿ ಜಾತಿ ವ್ಯವಸ್ಥೆ ಹೆಚ್ಚಿರುವ ಕಾರಣ ಆರೋಗ್ಯ ಮತ್ತು ಆಶಾ ಕಾರ್ಯಕರ್ತರು ಮನೆಯೊಳಗೆ ಹೋಗಿ ಪರಿಶೀಲನೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಳ್ಳಿಗಳಿಗೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿದಾಗಲೂ ಅವರ ಮನವೊಲಿಸಿ ಒಳಗೆ ತೆರಳಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರ ರೆಫ್ರಿಜರೇಟರ್‌ನ ಹಿಂಭಾಗದಲ್ಲಿರುವ ಬಾಕ್ಸ್‌ನಲ್ಲಿ ಸೊಳ್ಳೆಗಳ ಲಾರ್ವಾ ಇರುವುದು ಪತ್ತೆಯಾಗಿತ್ತು. ಮತ್ತೆ ವಾರ ಬಿಟ್ಟು ಹೋಗಿ ನೋಡಿದಾಗಲೂ ಲಾರ್ವಗಳು ಕಂಡುಬಂದಿವೆ. ಈ ಬಗ್ಗೆ ಗ್ರಾಮಾಂತರ ಜನರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.ಮೂರು ಹಂತದಲ್ಲಿ ಹರಡುವ ಡೆಂಘೀ:
ಡೆಂಘೀ ಮೂರು ಹಂತದಲ್ಲಿ ಹರಡುತ್ತದೆ. ಮೊದಲನೇ ಹಂತದಲ್ಲಿ ಸಾಮಾನ್ಯ ಜ್ವರ ಬರುತ್ತದೆ. ಅದನ್ನು ನಿರ್ಲಕ್ಷಿಸಿ ಔಷಧ ಅಂಗಡಿಗಳಲ್ಲಿ ದೊರೆಯುವ ಮಾತ್ರೆಗಳನ್ನು ತೆಗೆದುಕೊಂಡು ಸುಮ್ಮನಾದರೆ ಡೆಂಘೀ ಆಗಿ ಪರಿವರ್ತನೆಯಾಗುತ್ತದೆ. ನಂತರ ದೇಹದಲ್ಲಿರುವ ಬಹುಭಾಗಗಳಲ್ಲಿ ರಕ್ತಸ್ರಾವವಾಗುವ ಸಾಧ್ಯತೆಗಳಿವೆ. ಇನ್ನು ಮೂರನೇ ಹಂತ ಆಘಾತಕಾರಿ ಡೆಂಘೀ ಆಗಿದ್ದು ಈ ಹಂತದಲ್ಲಿ ಪ್ರಾಣ ಹೋಗುವ ಸಾಧ್ಯತೆಗಳೇ ಹೆಚ್ಚಿರುತ್ತವೆ ಎಂದು ಎಚ್ಚರಿಕೆ ನೀಡಿದರು.ಇನ್ನು ಆನೆಕಾಲಿನ ರೋಗವೂ ಸಹ ಸೋಂಕಿನಿಂದಲೇ ಬರುತ್ತಿದ್ದು, ಇದನ್ನೂ ನಿರ್ಲಕ್ಷಿಸುವಂತಿಲ್ಲ. ಐದಾರು ವರ್ಷಗಳ ನಂತರ ಇದು ಕಾಣಿಸಿಕೊಳ್ಳುತ್ತದೆ. ರೋಗ ಉಲ್ಬಣವಾಗುವ ಮುನ್ನ ಕೇವಲ ೧೨ ದಿನದೊಳಗೆ ಔಷಧ ಪಡೆದಲ್ಲಿ ಗುಣಮುಖರಾಗಬಹುದು. ಈ ರೋಗಗಳು ಸಾಮಾನ್ಯವಾಗಿ ಹೊರಗಿನಿಂದ ಬಂದಿರುವವರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಹೊರಗಿನಿಂದ ಬಂದವರನ್ನು ತಪಾಸಣೆ ಒಳಪಡಿಸಲಾಗುತ್ತಿದೆ ಎಂದರು.
ಇತ್ತೀಚೆಗೆ ಝೀಕಾ ವೈರಸ್ ಸಹ ಕಾಣಿಸಿಕೊಳ್ಳುತ್ತಿದ್ದು, ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.ಸಹಾಯಕ ಕೀಟಶಾಸ್ತ್ರಜ್ಞೆ ಜಾನೆಟ್ ಮೆಂಜೇಸ್, ಮೇಲ್ವಿಚಾರಕ ಸೋಮಶೇಖರ್ ಇತರರು ಗೋಷ್ಠಿಯಲ್ಲಿದ್ದರು.