ಸಮುದಾಯದ ಸಹಕಾರದಿಂದ ಡೆಂಘಿ ನಿಯಂತ್ರಣ ಸಾಧ್ಯ: ಡಾ. ಶಮ

| Published : Jul 08 2024, 12:31 AM IST

ಸಾರಾಂಶ

ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಡೆಂಘಿ ಜ್ವರ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ಎಂಬ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ನಮ್ಮ ಪರಿಸರ ಸ್ವಚ್ಛವಾಗಿಟ್ಟುಕೊಂಡು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಿಂತ ನೀರಿನಲ್ಲಿ ಈಡಿಸ್ ಸೊಳ್ಳೆ ಉತ್ಪತ್ತಿಯಾಗಿ ಅದು ಮನುಷ್ಯರಿಗೆ ಕಚ್ಚುವ ಮೂಲಕ ಡೆಂಘಿ ಹರಡುತ್ತದೆ. ಜ್ವರ ಬಂದಾಗ ಅದನ್ನು ನಿರ್ಲಕ್ಷಿಸದೇ ವೈದ್ಯರ ಬಳಿ ತೆರಳಿ ಪರೀಕ್ಷಿಸಿ ಸೂಕ್ತ ಔಷಧಿಯನ್ನು ತೆಗೆದುಕೊಳ್ಳಬೇಕು. ಸಮುದಾಯದ ಸಹಕಾರದಿಂದ ಮಾತ್ರ ಡೆಂಘಿ ನಿಯಂತ್ರಣ ಸಾಧ್ಯ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ಹಿರ್ಗಾನದ ವೈದ್ಯಾಧಿಕಾರಿ ಡಾ. ಶಮ ಹೇಳಿದ್ದಾರೆ.

ಅವರು ಇಲ್ಲಿನ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ಡೆಂಘಿ ಜ್ವರ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ಎಂಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಹಿತಿಯನ್ನು ನೀಡಿದರು.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಸಂಸ್ಥಾಪಕರಲ್ಲಿ ಓರ್ವರಾದ ಗಣಪತಿ ಭಟ್ ಅವರು, ಡೆಂಘಿ ಮತ್ತು ಮಲೇರಿಯಾದಂತಹ ಜ್ವರಗಳನ್ನು ನಿರ್ಲಕ್ಷಿಸಿದ್ದಲ್ಲಿ ಅದು ಮಾರಣಾಂತಿಕ ಹಂತಕ್ಕೂ ತಲುಪಬಹುದು ಎಂದು ಎಚ್ಚರಿಸಿದರು.

ಸ್ಥಳೀಯ ಸಮುದಾಯ ಆರೋಗ್ಯ ಅಧಿಕಾರಿಯಾದ ವಿನುತಾ, ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಅನು ಇದ್ದರು. ಕನ್ನಡ ವಿಭಾಗದ ಉಪನ್ಯಾಸಕ ಸಂತೋಷ್ ನಿರೂಪಿಸಿ, ವಂದಿಸಿದರು.