ಸಾರಾಂಶ
ಸೋಂಕಿತ ಸೊಳ್ಳೆಗಳ ಕಡಿತದಿಂದ ಮನುಷ್ಯರಿಗೆ ಡೆಂಘೀ ಜ್ವರ ಹರಡಲಿದೆ. ತೀವ್ರ ತರಹದ ಜ್ವರ, ತಲೆನೋವು, ದೇಹದ ನೋವು, ವಾಕರಿಕೆ ಇನ್ನಿತರ ಲಕ್ಷಣ ಕಂಡು ಬಂದಲ್ಲಿ ಕೂಡಲೇ ವೈದ್ಯಕೀಯ ಸೇವೆ ಪಡೆಯುವಂತೆ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಸರಿತಾ ಕರೆ ನೀಡಿದರು.
ಬ್ಯಾಡಗಿ: ಸೋಂಕಿತ ಸೊಳ್ಳೆಗಳ ಕಡಿತದಿಂದ ಮನುಷ್ಯರಿಗೆ ಡೆಂಘೀ ಜ್ವರ ಹರಡಲಿದೆ. ಪ್ರಪಂಚದ ಬಹುತೇಕ ದೇಶಗಳು ಡೆಂಘೀ ಜ್ವರದ ಅಪಾಯದಲ್ಲಿವೆ. ತೀವ್ರ ತರಹದ ಜ್ವರ, ತಲೆನೋವು, ದೇಹದ ನೋವು, ವಾಕರಿಕೆ ಇನ್ನಿತರ ಲಕ್ಷಣ ಕಂಡು ಬಂದಲ್ಲಿ ಕೂಡಲೇ ವೈದ್ಯಕೀಯ ಸೇವೆ ಪಡೆಯುವಂತೆ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಸರಿತಾ ಕರೆ ನೀಡಿದರು.
ಗುರುವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಸಮುದಾಯದೊಂದಿಗೆ ಸೇರೋಣ ಡೆಂಘೀ ಜ್ವರ ನಿಯಂತ್ರಿಸೋಣ’ ಎಂಬ ಘೋಷವಾಕ್ಯದೊಂದಿಗೆ ಡೆಂಘೀ ಜ್ವರ ನಿಯಂತ್ರಣ ಮಂಜಾಗ್ರತಾ ಅರಿವು ಕಾರ್ಯಕ್ರಮ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮಹಾನಗರ, ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಮತ್ತು ಉಷ್ಣವಲಯದ ಹವಾಮಾನದಲ್ಲಿ ಡೆಂಘೀ ಹೆಚ್ಚಾಗಿ ಕಂಡು ಬರುತ್ತದೆ. ತೀವ್ರ ಹೊಟ್ಟೆನೋವು ತ್ವರಿತ ಉಸಿರಾಟ, ನಿರಂತರ ವಾಂತಿ, ಒಸಡು ಅಥವಾ ಮೂಗುಗಳಲ್ಲಿ ರಕ್ತಸ್ರಾವ, ಆಯಾಸ ಡೆಂಘೀ ರೋಗದ ಲಕ್ಷಣಗಳಾಗಿದ್ದು, ಇದೊಂದು ಸೌಮ್ಯ ಸ್ವಭಾವದ ರೋಗವಾಗಿದ್ದು ಪತ್ತೆ ಹಚ್ಚುವತನಕ ಗೊತ್ತಾಗುವುದಿಲ್ಲ ಎಂದರು.
ಹಗಲಿನಲ್ಲಿ ಸೊಳ್ಳೆ ಕಡಿಸಿಕೊಳ್ಳಬೇಡಿ: ಹಗಲಿನಲ್ಲಿ ಸೊಳ್ಳೆ ಕಡಿತವನ್ನು ತಪ್ಪಿಸುವ ಮೂಲಕ ಡೆಂಘೀ ಜ್ವರದಿಂದಾಗುವ ಅಪಾಯವನ್ನು ಕಡಿಮೆ ಮಾಡಬಹುದು, ಡೆಂಘೀ ರೋಗಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ನೋವು ನಿವಾರಕ (ಪೇನ್‌ಕಿಲ್ಲರ್) ಔಷಧಿ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದೊಂದು ಮಾರಣಾಂತಿಕ ರೋಗವಲ್ಲ ಎಂಬುದನ್ನು ಅಳೆಯಲಾಗುವುದಿಲ್ಲ. ಹೀಗಾಗಿ ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.ಇದಕ್ಕೂ ಮುನ್ನ ಪಟ್ಟಣದೆಲ್ಲೆಡೆ ಜಾಗೃತಿ ಜಾಥಾ ನಡೆಸಲಾಯಿತು. ಬಳಿಕ ಪಟ್ಟಣದ ಬಸ್ ನಿಲ್ದಾಣ ಬಳಿ ಮಾನವ ಸರಪಳಿ ನಿರ್ಮಿಸಿ ಅಗತ್ಯವಾದ ಮಾಹಿತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ, ವಿನಯಕುಮಾರ ಹೊಳಿಯಪ್ಪಗೋಳ, ಪುರಸಭೆ ಪರಿಸರ ಎಂಜಿನಿಯರ್ ಚನ್ನಪ್ಪ ಅಂಗಡಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.