ಸಾರಾಂಶ
ಚಿತ್ರದುರ್ಗ : ಡೆಂಘೀ ನಿಯಂತ್ರಣಕ್ಕೆ ಗುಣಾತ್ಮಕ ಲಾರ್ವ ಸಮೀಕ್ಷೆ, ಅಂತರ್ ವೈಯಕ್ತಿಕ ಸಮಾಲೋಚನಾ ಶಿಕ್ಷಣ ಅವಶ್ಯಕಾಗಿದ್ದು ಚಿತ್ರದುರ್ಗ ನಗರದಲ್ಲಿ 41,117 ಮನೆಗಳಲ್ಲಿ ಲಾರ್ವಾ ಸಮೀಕ್ಷೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡೆಂಘೀ ನಿಯಂತ್ರಣಕ್ಕಾಗಿ ಜೂ.25 ರಿಂದ 27ರವರೆಗೆ ಮೂರು ದಿನಗಳ ಕಾಲ ಡೆಂಘೀ ಪ್ರಕರಣಗಳು ಹೆಚ್ಚು ಕಂಡು ಬಂದಿರುವ ಚಿತ್ರದುರ್ಗ ನಗರದ 35 ವಾರ್ಡ್‍ಗಳಲ್ಲಿ ಮನೆ ಮನೆಗಳ ಭೇಟಿ, ಲಾರ್ವಾ ಸಮೀಕ್ಷೆ, ಜ್ವರ ಸಮೀಕ್ಷೆ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಪರಿಶೀಲನೆ ನಡೆಸಿ ಮಾತನಾಡಿದರು.
ರಾಜ್ಯಾದ್ಯಂತ ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಚಿತ್ರದುರ್ಗ ನಗರದ ಎಲ್ಲಾ ವಾರ್ಡ್‍ಗಳಲ್ಲಿ ವಿಶೇಷ ಲಾರ್ವ ಸಮೀಕ್ಷೆ ಹಮ್ಮಿಕೊಂಡಿದೆ. ಡೆಂಘೀ ನಿಯಂತ್ರಣಕ್ಕೆ ಗುಣಾತ್ಮಕ ಲಾರ್ವ ಸಮೀಕ್ಷೆ, ಅಂತರ್ ವೈಯಕ್ತಿಕ ಸಮಾಲೋಚನಾ ಶಿಕ್ಷಣ ಅವಶ್ಯಕ ಎಂದರು.
ಜಿಲ್ಲಾ ಆಶ್ರಿತ ರೋಗಗಳ ರೋಗವಾಹಕ ನಿಯಂತ್ರಣಾಧಿಕಾರಿ ಡಾ.ಕಾಶಿ ಮಾತನಾಡಿ, ನಗರ ಪ್ರದೇಶಗಳಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದ್ದರಿಂದ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ಲಾರ್ವಾ ಸಮೀಕ್ಷೆ ಹಮ್ಮಿಕೊಂಡಿದೆ. ಒಟ್ಟು36 ವಾರ್ಡ್, 3 ನಗರ ಆರೋಗ್ಯ ಕೇಂದ್ರಗಳಿಂದ ಒಟ್ಟು 41,117 ಮನೆ ಮನೆ ಭೇಟಿ, ಲಾರ್ವಾ ಸಮೀಕ್ಷೆ, ಜ್ವರ ಪರೀಕ್ಷೆ ಅಲ್ಲಲ್ಲಿ ಗುಂಪು ಸಭೆಯ ಮೂಲಕ ಡೆಂಘೀ ನಿಯಂತ್ರಣ ಮಾಹಿತಿ ಶಿಕ್ಷಣ ನೀಡುವುದರ ಮೂಲಕ ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಿ. ಘನತ್ಯಾಜ್ಯ ವಸ್ತುಗಳನ್ನು ಸರಿಯಾದ ಜಾಗದಲ್ಲಿ ವಿಲೇವಾರಿ ಮಾಡಿ. ಹಂಚು, ಒಡೆದ ಮಡಕೆ, ಪ್ಲಾಸ್ಟಿಕ್ ಬಾಟಲ್, ಎಳನೀರಿನ ಚಿಪ್ಪು ಇವುಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿ ತಾಣಗಳಾಗದಂತೆ ಕಾಳಜಿವಹಿಸಬೇಕು. ಹೂವಿನ ಗಿಡಗಳ ಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಡೆಂಘೀ ಬಗ್ಗೆ ಆತಂಕ ಭಯ ಬೇಡ ವಾರಕ್ಕೊಮ್ಮೆಯಾದರು ನೀರು ಸಂಗ್ರಹಿಸುವ ತೊಟ್ಟಿ ಟ್ಯಾಂಕ್ ಬ್ಯಾರೆಲ್ ಸ್ವಚ್ಛವಾಗಿ ತೊಳೆದು ಒಣಗಿಸಿ ನೀರು ಸಂಗ್ರಹಿಸಿ ಮುಚ್ಚಳ ಮುಚ್ಛಬೇಕು ಎಂದರು.
ತೀವ್ರ ಜ್ವರ, ತಲೆನೋವು ಕಣ್ಣಿನ ಹಿಂಭಾಗ ನೋವು, ಮೈಕೈ ನೋವು ಕಂಡು ಬಂದಲ್ಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೇ ಹತ್ತಿರದ ನಗರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ, ಚಿಕಿತ್ಸೆ ಸಲಹೆ ಪಡೆದುಕೊಳ್ಳಬೇಕು. ಸೊಳ್ಳೆಗಳ ಕಡಿತದಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳುವುದರ ಮೂಲಕ ಮಾರಣಾಂತಿಕ ಡೆಂಘೀ ನಿಯಂತ್ರಿಸಲು ಸಲಹೆ ನೀಡಿದರು.
ಈ ವೇಳೆ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸುರೇಶ್ ಬಾಬು, ಪ್ರಸನ್ನಕುಮಾರ್, ನಾಗರಾಜ್, ಸಿರೀಶ್, ಶ್ರೀನಿವಾಸ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ಪರ್ವಿನ್, ಸುಶೀಲಾ, ಆಶಾ ಕಾರ್ಯಕರ್ತೆ ಜರೀನಾ, ಗೀತಾ ಉಪಸ್ಥಿತರಿದ್ದರು.