ಸಾರಾಂಶ
ಸಂದೀಪ್ ವಾಗ್ಲೆ
ಕನ್ನಡಪ್ರಭ ವಾರ್ತೆ ಮಂಗಳೂರುನಾಲ್ಕೈದು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಹೈರಾಣು ಮಾಡಿದ್ದ ಡೆಂಘೀ ಈ ವರ್ಷ ಮತ್ತೆ ಮತ್ತದೇ ಬಿರುಸಿನಿಂದ ಜಿಲ್ಲೆಗೆ ದಾಂಗುಡಿ ಇಡುತ್ತಿದೆ. ಮಳೆಗಾಲ ಆರಂಭವಾದದ್ದೇ ತಡ ಡೆಂಘೀ ಅವತಾರ ಶುರುವಾಗಿದೆ.
ಈ ಬಾರಿ ಇದುವರೆಗೆ 264 ಡೆಂಘೀ ಪ್ರಕರಣಗಳು ವರದಿಯಾಗಿದ್ದು, ಮುಂದಿನ ಕೆಲವು ವಾರಗಳಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆಯನ್ನು ಅಧಿಕಾರಿಗಳು ಅಂದಾಜಿಸಿದ್ದಾರೆ.ಪ್ರತಿ ಮಳೆಗಾಲದಲ್ಲೂ ಕರಾವಳಿ ಭಾಗದಲ್ಲಿ ಡೆಂಘೀ ಹಾವಳಿ ಇದ್ದದ್ದೇ. 2019ರಲ್ಲಂತೂ ಭೀಕರ ಸ್ವರೂಪ ತಾಳಿದ್ದು, ಬರೋಬ್ಬರಿ 1539 ಸೋಂಕಿನ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದ್ದವು. ನಂತರದ ವರ್ಷಗಳಲ್ಲಿ ಇಳಿಮುಖವಾಗಿತ್ತು. ಕಳೆದ ವರ್ಷ 2023ರಲ್ಲಿ 566 ಮಂದಿಗೆ ಸೋಂಕು ತಗುಲಿತ್ತು. ಜನವರಿಯಿಂದ ಜುಲೈ 6ರವರೆಗಿನ ಅಂಕಿ ಅಂಶಗಳಿಗೆ ಹೋಲಿಸಿದರೆ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಡೆಂಘೀ ಪ್ರಕರಣಗಳು ಕಂಡುಬಂದಿವೆ. ಒಂದೆರಡು ವಾರದಿಂದೀಚೆಗೆ ಏಕಾಏಕಿ ಸೋಂಕಿನ ಪ್ರಕರಣಗಳ ಸಂಖ್ಯೆ ಏರುಮುಖದಲ್ಲಿ ಸಾಗಿದೆ. ಹೀಗೇ ಮುಂದುವರಿದರೆ ಮತ್ತೆ ಕರಾವಳಿಗರು ಹೈರಾಣಾಗುವುದು ಖಚಿತ.
ಕರಾವಳಿ ಸೇರಿದಂತೆ ರಾಜ್ಯದಲ್ಲಿ ಡೆಂಘೀ ಹಾವಳಿ ಹೆಚ್ಚುತ್ತಿರುವುದನ್ನು ಅರಿತ ಸರ್ಕಾರ ಆರೋಗ್ಯ ಇಲಾಖೆಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ. ಅದರಂತೆ ಜಿಲ್ಲೆಯಲ್ಲಿ ಪ್ರತಿ ಶುಕ್ರವಾರ ಸಾರ್ವಜನಿಕರನ್ನು ಒಳಗೊಂಡು ಲಾರ್ವಾ ನಿರ್ಮೂಲನಾ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ. ಆದರೆ ಡೆಂಘೀ ಪ್ರಕರಣಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ.ನೀರು ನಿಲ್ಲಲು ಬಿಡಬೇಡಿ: ಪ್ರಸ್ತುತ ಕರಾವಳಿ ಭಾಗದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದು ಮುಂದಿನ ದಿನಗಳಲ್ಲಿ ಬಿಟ್ಟೂ ಬಿಟ್ಟು ಮಳೆ ಸುರಿದರೆ ಸೊಳ್ಳೆಗಳಿಗೆ ಹಬ್ಬ. ಅಂತಹ ಸಮಯದಲ್ಲಿ ಶುದ್ಧ ನೀರು ನಿಂತ ತಾಣಗಳಲ್ಲಿ ಸೊಳ್ಳೆಗಳ ಉತ್ಪತ್ತಿಯಾಗುತ್ತದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಕಾರಣಕ್ಕೂ ತಮ್ಮ ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದಷ್ಟೇ ಈಗಿರುವ ಪರಿಹಾರ. ಸಾರ್ವಜನಿಕ ಪ್ರದೇಶಗಳಲ್ಲಿ ಸೊಳ್ಳೆ ಉತ್ಪತ್ತಿಯಾಗುವುದಕ್ಕಿಂತ ಮನೆಗಳ ಆವರಣದಿಂದಲೇ ಸೊಳ್ಳೆ ಉತ್ಪತ್ತಿ ಆಗುವ ಪ್ರಮಾಣ ಹೆಚ್ಚಿದೆ ಎಂದು ಹೇಳುತ್ತಾರೆ ದ.ಕ. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್.ಇತರ ಸೋಂಕು ಇಳಿಮುಖ: ಉಳಿದಂತೆ ಚಿಕೂನ್‌ಗುನ್ಯಾ, ಇಲಿಜ್ವರ, ಮಂಗನ ಕಾಯಿಲೆ ಕಳೆದೈದು ವರ್ಷಗಳಿಂದ ಗಮನಾರ್ಹವಾಗಿ ಇಳಿಕೆಯಾಗಿದೆ. ಮಲೇರಿಯಾದಲ್ಲಿ 5 ವರ್ಷಗಳ ಹಿಂದೆ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದ್ದ (2797 ಪ್ರಕರಣಗಳು) ದ.ಕ.ದಲ್ಲಿ ಈ ವರ್ಷ ಜೂ.6ರವರೆಗೆ ಕೇವಲ 43 ಪ್ರಕರಣಗಳಷ್ಟೇ ವರದಿಯಾಗಿವೆ. ಡೆಂಘೀ, ಮಲೇರಿಯಾ ಸೇರಿದಂತೆ ವಿವಿಧ ಸೋಂಕುಗಳಿಂದಾಗಿ ಈ ವರ್ಷ ಯಾವ ಮರಣವೂ ಜಿಲ್ಲೆಯಲ್ಲಿ ಸಂಭವಿಸಿಲ್ಲ ಎನ್ನುವುದಷ್ಟೆ ಸದ್ಯದ ಸಮಾಧಾನಕರ ವಿಚಾರ.ನಂ.1ರಿಂದ ನಂ.7ಕ್ಕೆ ಇಳಿದ ದ.ಕ.
ಡೆಂಘೀ ಪ್ರಕರಣಗಳಲ್ಲಿ ಕೆಲವು ವರ್ಷಗಳ ಹಿಂದೆ ನಿರಂತರವಾಗಿ ರಾಜ್ಯದಲ್ಲಿ ನಂ.1 ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಈ ವರ್ಷ ನಂ.7ಕ್ಕೆ ಇಳಿದಿದೆ. ತೇವಾಂಶ ಹೆಚ್ಚಿರುವುದರಿಂದ ಕರಾವಳಿಯಲ್ಲಿ ಸಾಮಾನ್ಯವಾಗಿ ಸೊಳ್ಳೆ ಉತ್ಪತ್ತಿ ಹೆಚ್ಚು. ಆದರೆ ಇತ್ತೀಚಿನ ವರ್ಷಗಳಲ್ಲಿ ಇತರ ಜಿಲ್ಲೆಗಳಲ್ಲೂ ಸೊಳ್ಳೆ ಉತ್ಪತ್ತಿ ಹೆಚ್ಚುತ್ತಿದೆ. ಅಲ್ಲದೆ ದ.ಕ.ದಲ್ಲಿ ಡೆಂಘೀ, ಮಲೇರಿಯಾ ಇತ್ಯಾದಿ ಸೋಂಕುಗಳ ಕುರಿತು ಜನರಲ್ಲಿ ಜಾಗೃತಿ ಮೂಡುತ್ತಿರುವುದರಿಂದ ಸೋಂಕಿನ ಪ್ರಮಾಣ ಕುಸಿಯುತ್ತಿದೆ. ಪ್ರಸ್ತುತ ಜೂ.6ರ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಗರಿಷ್ಠ 521 ಪ್ರಕರಣಗಳೊಂದಿಗೆ ಚಿಕ್ಕಮಗಳೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ, ಮೈಸೂರು (496 ಪ್ರಕರಣ) ದ್ವಿತೀಯ, ಹಾವೇರಿ (481 ಪ್ರಕರಣ) ತೃತೀಯ, ಶಿವಮೊಗ್ಗ (292) ನಾಲ್ಕನೇ ಸ್ಥಾನ, ಧಾರವಾಡ (289) 5ನೇ ಸ್ಥಾನ, ಚಿತ್ರದುರ್ಗ (275 ಪ್ರಕರಣ) ಆರನೇ ಸ್ಥಾನದಲ್ಲಿದ್ದರೆ 263 ಪ್ರಕರಣಗಳಿರುವ ದ.ಕ. ಏಳನೇ ಸ್ಥಾನದಲ್ಲಿದೆ.