ಡೆಂಘೀ ಪ್ರಸರಣ ಕೇಂದ್ರವಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ!

| Published : Jul 12 2024, 01:37 AM IST

ಡೆಂಘೀ ಪ್ರಸರಣ ಕೇಂದ್ರವಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ!
Share this Article
  • FB
  • TW
  • Linkdin
  • Email

ಸಾರಾಂಶ

ಮಹಾನಗರ ಪಾಲಿಕೆಗೆ ಬರುವಂಥ ಜನರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಸಾರ್ವಜನಿಕ ಶೌಚಾಲಯ ನಿರ್ಮಿಸಿದೆ. ಇದು ಪಾಲಿಕೆ ಆಯುಕ್ತರ ಕಚೇರಿಯ ಹಿಂದುಗಡೆಯೇ ಇದೆ. ಇದಕ್ಕೆ ಜನರ ಮರ್ಯಾದೆ ಕಾಪಾಡುವ ಮನೆ ಎಂಬ ಕಾರಣಕ್ಕೆ "ಮರ್ಯಾದೆ ಮನೆ " ನಿರ್ಮಿಸಿ ಒಂದು ವರ್ಷಕ್ಕೂ ಅಧಿಕ ಕಾಲವೇ ಆಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ರಾಜ್ಯದಲ್ಲಿ ಏರಿಕೆಯಲ್ಲಿರುವ ಡೆಂಘೀ ಪ್ರಕರಣಗಳ ನಿಯಂತ್ರಣಕ್ಕೆ ಸರ್ಕಾರ, ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಹರಸಾಹಸ ಪಡುತ್ತಿವೆ. ಆದರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿರುವ "ಮರ್ಯಾದೆ ಮನೆ " (ಸಾರ್ವಜನಿಕ ಶೌಚಾಲಯ) ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಡೆಂಘೀ ಹೆಚ್ಚಾಗಲು ತನ್ನದೇ ಕೊಡುಗೆ ನೀಡುತ್ತಿದೆ.

ಡೆಂಘೀ ಜಾಗೃತಿ:ರಾಜ್ಯದಲ್ಲೆಲ್ಲ ಡೆಂಘೀ ಮಾರಿ ಜನರನ್ನು ನಿದ್ದೆಗೆಡಿಸಿದೆ. ದಿನದಿಂದ ದಿನಕ್ಕೆ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆರೋಗ್ಯ ಇಲಾಖೆಯನ್ನು ಕಂಗೆಡಿಸುತ್ತಿದೆ. ಸರ್ಕಾರ ಎಲ್ಲ ಸ್ಥಳೀಯ ಸಂಸ್ಥೆಗಳು ದಿನನಿತ್ಯ ಡೆಂಘೀ ಕುರಿತು ಜನಜಾಗೃತಿ ಮಾಡಬೇಕು ಎಂಬ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಮಹಾನಗರ ಪಾಲಿಕೆಯಂತೂ ಡೆಂಘೀ ನಿಯಂತ್ರಣಕ್ಕೆ ಪ್ರತ್ಯೇಕವಾದ ಕಾರ್ಯಪಡೆಯನ್ನೇ ರಚಿಸಿದೆ. ಪ್ರತ್ಯೇಕವಾದ ಸಿಬ್ಬಂದಿಯೇ ಜಾಗೃತಿಯಲ್ಲಿ ತೊಡಗಿದ್ದಾರೆ. ಅದು ಪ್ರತಿನಿತ್ಯ ವಿವಿಧ ಗಲ್ಲಿಗಳಲ್ಲಿ ತೆರಳಿ, ತೆಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ, ಬಯಲಲ್ಲಿ ಮೂತ್ರ ಮಾಡಬೇಡಿ. ಬಹಿರ್ದೇಶೆಗೆ ಹೋಗಬೇಡಿ ಎಂದೆಲ್ಲ ಕರಪತ್ರ ಮುದ್ರಿಸಿ ಹಂಚಿ ಜಾಗೃತಿ ಮೂಡಿಸುತ್ತಿದೆ. ಆದರೆ ತನ್ನ ಆವರಣದಲ್ಲೇ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ ಎಂಬುದಕ್ಕೆ ಮರ್ಯಾದೆ ಮನೆಯೇ ಸಾಕ್ಷಿಯಾಗಿದೆ.

ಏನಿದು ಮರ್ಯಾದೆ ಮನೆ:

ಮಹಾನಗರ ಪಾಲಿಕೆಗೆ ಬರುವಂಥ ಜನರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಸಾರ್ವಜನಿಕ ಶೌಚಾಲಯ ನಿರ್ಮಿಸಿದೆ. ಇದು ಪಾಲಿಕೆ ಆಯುಕ್ತರ ಕಚೇರಿಯ ಹಿಂದುಗಡೆಯೇ ಇದೆ. ಇದಕ್ಕೆ ಜನರ ಮರ್ಯಾದೆ ಕಾಪಾಡುವ ಮನೆ ಎಂಬ ಕಾರಣಕ್ಕೆ "ಮರ್ಯಾದೆ ಮನೆ " ನಿರ್ಮಿಸಿ ಒಂದು ವರ್ಷಕ್ಕೂ ಅಧಿಕ ಕಾಲವೇ ಆಗಿದೆ. ಸುಂದರ ಬಣ್ಣ, ಚಿತ್ರ, ಚಿತ್ತಾರಗಳಿಂದ ಕೂಡಿದ ಗೋಡೆ. ಎಲ್ಲವನ್ನೂ ದೂರದಿಂದ ನೋಡಿದರೆ ಅಬ್ಬಾ ಎಷ್ಟೊಂದು ಚಂದ ಇದೆ ಈ ಶೌಚಾಲಯ ಎಂದೆನಿಸುತ್ತದೆ. ಆದರೆ ಉದ್ಘಾಟನೆ ಮಾತ್ರ ಆಗಿಲ್ಲ. ಈ ಮರ್ಯಾದೆ ಮನೆಗೆ ಬೀಗ ಜಡಿಯಲಾಗಿದೆ. ಸ್ವಚ್ಛತೆಗೆ ಗಮನವನ್ನೇ ಹರಿಸಿಲ್ಲ. ಈ ಬೀಗ ಹಾಕಿರುವ ಶೌಚಾಲಯದ ಮುಂದೆಯೇ ಜನರು ತನ್ನ "ನೈಸರ್ಗಿಕ ಕರೆ " (ಮೂತ್ರ) ಮುಗಿಸಿಕೊಳ್ಳುತ್ತಿದ್ದಾರೆ. ಅದು ಸರತಿ ಸಾಲಿನಲ್ಲಿ ನಿಂತು ಮೂತ್ರಕ್ಕೆ ಹೋಗುತ್ತಾರೆ. ಹೀಗಾಗಿ ದೂರದಿಂದ ಸುಂದರವಾಗಿ ಕಾಣುವ ಈ ಶೌಚಾಲಯ ಸಮೀಪ ಹೋಗಿ ನೋಡಿದರೆ ಎಷ್ಟೊಂದು ಗಲೀಜು ಎಂದು ಮೂಗು ಮುಚ್ಚಿಕೊಳ್ಳದೇ ಇರಲಾಗದು.

ಇನ್ನು ಬಹಳ ದಿನಗಳಿಂದ ಬೀಗ ಜಡಿದಿರುವ ಕಾರಣ ಒಳಗೆ ಹಾಗೂ ಹೊರಗೆ ಎಲ್ಲೆಡೆ ಗಲೀಜೋ ಗಲೀಜು. ಎದುರಗಡೆ ವಾಹನ ಓಡಾಡಿ ಮಳೆ ನೀರು ನಿಂತು ರಾಡಿ ರಾಡಿಯಾಗಿದೆ. ಆ ತೆಗ್ಗಿನಲ್ಲಿ ನೀರು ನಿಂತಿರುವುದು ಸೊಳ್ಳೆಗಳ ಉತ್ಪಾದನಾ ಕೇಂದ್ರದಂತೆ ಆಗಿದೆ. ಹಾಗೆ ನೋಡಿದರೆ ಪಾಲಿಕೆ ಆಯುಕ್ತರ ಕಚೇರಿ, ಎದುರುಗಡೆ ಸಾಕಷ್ಟು ಅಧಿಕಾರಿಗಳ ಕಚೇರಿ, ಮೇಯರ್‌ ಕಾರ್ಯಾಲಯ, ಸಭಾಭವನ ಎಲ್ಲವೂ ಅಕ್ಕಪಕ್ಕದಲ್ಲೇ ಇದೆ. ಡೆಂಘೀ ವಿಷಯವಾಗಿ ಊರಿಗೆಲ್ಲ ಬುದ್ಧಿ ಹೇಳುವ ಮಹಾನಗರ ಪಾಲಿಕೆ ತನ್ನ ಆವರಣದಲ್ಲೇ ಇರುವ ಶೌಚಾಲಯವನ್ನೇ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇನ್ನು ಊರೊಳಗಿನ ತನ್ನ ವ್ಯಾಪ್ತಿಯಲ್ಲಿನ ಶೌಚಾಲಯಗಳನ್ನೇನೂ ನಿರ್ವಹಣೆ ಮಾಡುತ್ತದೆ ಎಂಬುದು ಸಾರ್ವಜನಿಕರ ಪ್ರಶ್ನೆ.

ಇನ್ನಾದರೂ ಪಾಲಿಕೆ ಆಯುಕ್ತರು, ನೂತನ ಮೇಯರ್‌ ಕೊಂಚ ತಮ್ಮ ಕಚೇರಿಯ ಹಿಂದೆಯೇ ಇರುವ ಶೌಚಾಲಯದ ಕಡೆಗೆ, ಅಲ್ಲಿನ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು ಎಂದು ಪ್ರಜ್ಞಾವಂತರ ಅಂಬೋಣ.ಈ ಶೌಚಾಲಯ ನಿರ್ಮಿಸಿ ಒಂದು ವರ್ಷಕ್ಕೂ ಅಧಿಕ ಕಾಲವಾಗಿದೆ. ಆದರೆ ಉದ್ಘಾಟನೆಯಾಗಿಲ್ಲ. ಹೀಗಾಗಿ ಈ ಶೌಚಾಲಯ ಸುತ್ತಮುತ್ತಲೂ ಜನತೆ ನೈಸರ್ಗಿಕ ಕರೆ ಮುಗಿಸಿಕೊಳ್ಳುತ್ತಿದ್ದಾರೆ. ಡೆಂಘೀ ಹೆಚ್ಚಳಕ್ಕೆ ಪಾಲಿಕೆ ಆವರಣದಲ್ಲಿರುವ ಈ ಶೌಚಾಲಯ ಕೂಡ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಮಂಜುನಾಥ ಎಸ್‌.ಕೆ. ಎಂದು ಹೇಳಿದ್ದಾರೆ.