ಬೆಂಗಳೂರು ಬಳ್ಳಾರಿ ರಸ್ತೆಯ ಚಿಕ್ಕಬಳ್ಳಾಪುರದ ಚದಲಪುರ ಸಮೀಪ ರಾಷ್ಟ್ರೀಯ ಹೆದ್ದಾರಿ ಮೇಲ್ ಸೇತುವೆ ನಿರ್ಮಿಸುವ ಕಾಮಗಾರಿ ಕಳೆದ ಒಂದುವರೆ ವರ್ಷದಿಂದ ಕುಂಟುತ್ತಾ ತೆವಳುತ್ತಾ ನಡೆದಿರುವ ಕಾರಣ ಅಪಘಾತಗಳಿಗಿಂತ ಇಲ್ಲಿಂದ ಸಾಗಿ ಹೋಗಬೇಕಾದ ವಾಹನ ಚಾಲಕರು ನರಕಯಾತನೆ ಅನುಭವಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸುರಿಯುತ್ತಿರುವ ಮಂಜಿನಿಂದಾಗಿ ಜಿಲ್ಲಾ ಕೇಂದ್ರವು ಸೇರಿದಂತೆ ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ಕಳೆದ ಒಂದು ತಿಂಗಳಲ್ಲಿ ಈಚೆಗೆ ಸುಮಾರು 50ಕ್ಕೂ ಅಧಿಕ ಕಡೆ ಅಪಘಾತಗಳಂತಹ ಅವಘಡ ನಡೆದು ಸಾವು ನೋವುಗಳು ಸಂಭವಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ನಗರದಲ್ಲಿ ಹಾದುಹೋಗಿರುವ ಬೆಂಗಳೂರು- ಹೈದರಾದ್ ಗೆ ತೆರಳುವ ರಾಷ್ಟ್ರೀಯ ಹೆದ್ದಾರಿ-44 ಹಾಗೂ ಮಂಗಳೂರು-ತಿರುವಣ್ಣಾಮಲೆಗೆ ತೆರಳುವ ರಾಷ್ಟ್ರೀಯ ಹೆದ್ದಾರಿ 234 ಗಳಲ್ಲಿ ಅಪಘಾತ ಹೆಚ್ಚು.

ಅಪಘಾತ ವಲಯ ನಾಮಫಲಕ ಇಲ್ಲ

ಕಳೆದ ಎರಡು ತಿಂಗಳಿಂದೀಚೆಗೆ ಈ ಭಾಗದಲ್ಲಿ ದಟ್ಟವಾದ ಮಂಜು ಆವರಿಸುತ್ತಿರುವ ಕಾರಣ ಹಾಗೂ ಈ ಹೆದ್ದಾರಿಗಳಲ್ಲಿ ಯಾವುದೇ ಅಪಘಾತ ವಲಯಗಳೆಂಬ ಸೂಚನಾ ಫಲಕಗಳು ಇಲ್ಲದ ಕಾರಣ ಇಲ್ಲಿ ನಡೆಯುವ ಅಪಘಾತಗಳಿಂದಾಗಿ ಸಣ್ಣಪುಟ್ಟ ಗಾಯಗಳಿಗಿಂತ ಹೆಚ್ಚಾಗಿ ಸಾವು ನೋವುಗಳೆ ಹೆಚ್ಚಾಗಿ ಆಗಿರುವುದರಿಂದಾಗಿ ಈ ಭಾಗದ ಜನ ಆತಂಕಕ್ಕೆ ಒಳಗಾಗಿದ್ದಾರೆ.

ಇನ್ನು ಬೆಂಗಳೂರು ಬಳ್ಳಾರಿ ರಸ್ತೆಯ ಚಿಕ್ಕಬಳ್ಳಾಪುರದ ಚದಲಪುರ ಸಮೀಪ ರಾಷ್ಟ್ರೀಯ ಹೆದ್ದಾರಿ ಮೇಲ್ ಸೇತುವೆ ನಿರ್ಮಿಸುವ ಕಾಮಗಾರಿ ಕಳೆದ ಒಂದುವರೆ ವರ್ಷದಿಂದ ಕುಂಟುತ್ತಾ ತೆವಳುತ್ತಾ ನಡೆದಿರುವ ಕಾರಣ ಅಪಘಾತಗಳಿಗಿಂತ ಇಲ್ಲಿಂದ ಸಾಗಿ ಹೋಗಬೇಕಾದ ವಾಹನ ಚಾಲಕರು ನರಕಯಾತನೆ ಅನುಭವಿಸುವಂತಾಗಿದೆ. ಇದೇ ಸ್ಥಳದಲ್ಲಿ ಎರಡು ವರ್ಷಗಳ ಹಿಂದೆ ಸಾಕಷ್ಟು ಅಪಘಾತಗಳು ಉಂಟಾಗಿ ಒಂದೇ ದಿನ ಗವಿಗಾನಹಳ್ಳಿಯ ಆರು ಜನ ಸಾವಿಗಿಡಾಗಿದ್ದರು.

ತೆವಳುತ್ತಿರುವ ಕಾಮಗಾರಿ

ಅದಕ್ಕೂ ಮುನ್ನ ಹಲವಾರು ಅಪಘಾತಗಳಲ್ಲಿ ಸಾವು ನೋವುಗಳೆ ಹೆಚ್ಚಾಗಿ ನಡೆದಿದ್ದರಿಂದ ಇದನ್ನು ಮೇಲ್ ಸೇತುವೆ ಮಾಡಬೇಕೆಂಬ ಒತ್ತಾಯದಿಂದಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಕಾಮಗಾರಿಯನ್ನೇನೋ ಕೈಗೆತ್ತಿಕೊಂಡರು. ಆದರೆ ಕುಂಟುತ್ತಾ ತೆವಳುತ್ತಾ ಈ ಕಾಮಗಾರಿ ನಡೆಯುತ್ತಿರುವುದಿಂದಾಗಿ ಅಪಘಾತಗಳಂಥ ಅವಘಡಗಳು ನಡೆಯುತ್ತಲೇ ಇದ್ದು ಕಾಮಗಾರಿ ತ್ವರಿತವಾಗಿ ಮಾಡಿ ಮುಗಿಸದ ಕಾರಣ ಈ ಭಾಗದ ಜನ ಆಕ್ರೋಶಗೊಂಡಿದ್ದಾರೆ.

ಇನ್ನು ಕಳೆದ 15 ದಿನದಿಂದ ಈಚೆಗೆ ನಂದಿ ಕ್ರಾಸ್, ಚಿಕ್ಕಬಳ್ಳಾಪುರ ಮಾರ್ಗಮಧ್ಯಯೂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಅನೇಕರು ಕೈ ಕಾಲು ಮುರಿದುಕೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದರೆ ಕಳೆದ ಎರಡು ದಿನಗಳ ಹಿಂದೆಯಲ್ಲಷ್ಟೇ ವಿಶೇಷ ಚೇತನ ಕುಟುಂಬ ಒಂದು ಇದೇ ರಾಷ್ಟ್ರೀಯ ಹೆದ್ದಾರಿ ಬನ್ನಿಕುಪ್ಪೆ ಸಮೀಪದ ಗೇಟ್ ನಲ್ಲಿ ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ವಿಶೇಷ ಚೇತನ ಸಾವಿಗೀಡಾದರೆ ಅವರ ಜೊತೆಗಿದ್ದ ಪತ್ನಿ ಹಾಗೂ ಹಿರಿಯ ಮಗ ಗಂಭೀರವಾಗಿ ಗಾಯಗೊಂಡು ಸಾವು ನೋವಿನ ನಡುವೆ ಬೆಂಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಕಿರಿಯ ಮಗ ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತ ತಡೆಗೆ ಕ್ರಮ ಕೈಗೊಂಡಿಲ್ಲ

ಹೀಗೆ ನಾನಾ ಕಡೆಗಳಲ್ಲಿ ನಡೆದ ಅಪಘಾತಗಳಿಂದಾಗಿ ಸ್ಥಳೀಯ ಸಂಚಾರಿ ಪೊಲೀಸ್ ಠಾಣೆ, ನಗರ ಪೊಲೀಸ್ ಠಾಣೆ, ಗ್ರಾಮಾಂತರ ಪೊಲೀಸ್ ಠಾಣೆ, ನಂದಿಗಿರಿಧಾಮ ಮತ್ತು ಪೆರೇಸಂದ್ರ ಪೊಲೀಸ್ ಠಾಣೆ ಆವರಣಗಳಲ್ಲಿ ಜಖಂ ಗುಂಡ ದ್ವಿಚಕ್ರ ವಾಹನಗಳು, ಲಾರಿ, ಕಾರುಗಳು ತುಂಬಿಹೋಗಿದೆ. ಇನ್ನು ಜಿಲ್ಲೆಯ ಹಿರಿಯ ಅಧಿಕಾರಿಗಳಾಗಲಿ ಸಂಚಾರಿ ಪೊಲೀಸರಾಗಲಿ ಅಪಘಾತಗಳಂತಹ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ

ಇನ್ನು ಈ ಭಾಗದಲ್ಲಿ ರೈತರು ತಮ್ಮ ತೋಟಗಳಲ್ಲಿ ಬೆಳೆದ ಹೂವು, ತರಕಾರಿ ಇದೆ ಹೆದ್ದಾರಿಗಳಲ್ಲಿ ತರಬೇಕಾಗಿದೆ. ಈ ಮಧ್ಯೆ ದಟ್ಟವಾದ ಮಂಜಿನಿಂದಾಗಿ ಹಾಗೂ ರಸ್ತೆಗಳಲ್ಲಿ ಯಾವುದೇ ಸೂಚನಾ ಫಲಕಗಳು ಇಲ್ಲದ ಕಾರಣ ಅಪಘಾತಗಳು ಹೆರಳ ವಾಗಿ ಆಗುತ್ತಿವೆ.

ಪೋಲೀಸರು ಹಾಟ್‌ಸ್ಪಾಟ್‌ ಗುರುತಿಸಲಿ

ಕಡಿಮೆ ಸಮಯದಲ್ಲಿ ಹಲವು ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸುವ ಭಾರಿ ಅಪಘಾತಗಳ ಪ್ರದೇಶ ಒಂದು ಕಡೆಯಾದರೆ, ದಟ್ಟವಾದ ಮಂಜು, ಅವೈಜ್ಞಾನಿಕ ರಸ್ತೆಯ ವಿನ್ಯಾಸ, ಅತಿಯಾದ ವೇಗ, ಚಾಲಕರ ಅಜಾಗರೂಕತೆಯಂತಹ ಕಾರಣಗಳಿಂದಾಗಿಯೂ ಅಪಘಾತಗಳು ಪದೇ ಪದೇ ಸಂಭವಿಸುತ್ತದೆ, ಪರಿಣಾಮವಾಗಿ ದೊಡ್ಡ ಸಂಖ್ಯೆಯ ಸಾವು-ನೋವುಗಳು ಮತ್ತು ಆಸ್ತಿಪಾಸ್ತಿ ಹಾನಿಯಾಗುತ್ತದೆ ಮತ್ತು ಇವುಗಳನ್ನು ಅಪಘಾತಗಳ ಹಾಟ್‌ಸ್ಪಾಟ್‌ಗಳೆಂದು ಗುರುತಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಇಲ್ಲವಾದಲ್ಲಿ ಇಂತಹ ಅಪಘಾತಗಳಂತಹ ಅವಘಡಗಳು ಇನ್ನಷ್ಟು ಹೇರಳವಾಗಲಿವೆ ಎಂಬುದರಲ್ಲಿ ಎರಡು ಮಾತಿಲ್ಲ.