ಗಣೇಶ ಮೂರ್ತಿಗಳಿಗೆ ಕಂಟಕವಾದ ತೇವಾಂಶ!

| Published : Sep 01 2024, 01:51 AM IST

ಸಾರಾಂಶ

The work begins several months in advance to build the Ganesha idol required for the Ganeshotsav, which is celebrated with great pomp in Karnataka and Maharashtra

ಶಿವಕುಮಾರ ಕುಷ್ಟಗಿ ಗದಗ

ವಿಘ್ನ ವಿನಾಶಕ ಗಣೇಶನನ್ನು ಪ್ರತಿಷ್ಠಾಪಿಸಿ ಸಡಗರ-ಸಂಭ್ರಮದಿಂದ ಪೂಜೆ ಮಾಡಲು ಸಾರ್ವಜನಿಕರು ಭರದ ಸಿದ್ಧತೆ ನಡೆಸಿದ್ದಾರೆ. ಆದರೆ ಪೂಜೆಗೆ ಸಿದ್ಧವಾಗಬೇಕಾಗಿದ್ದ ಗಣೇಶ ಮೂರ್ತಿಗೆ ಈ ಬಾರಿ ಅತಿಯಾದ ಮಳೆ, ತೇವಾಂಶದ ವಾತಾವರಣ ತೊಂದರೆದಾಯಕವಾಗಿ ಪರಿಣಮಿಸಿದೆ.

ಪ್ರಸಕ್ತ ಸಾಲಿನಲ್ಲಿ ಸೆ. 7ರಂದು ರಾಜ್ಯಾದ್ಯಂತ ಮನೆ ಮನೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಇದಕ್ಕಾಗಿ ಮೂರ್ತಿ ನಿರ್ಮಾಣ ಮಾಡುವವರು ಮೂರ್ನಾಲ್ಕು ತಿಂಗಳ ಹಿಂದಿನಿಂದಲೇ ಮೂರ್ತಿ ತಯಾರಿಕೆ ಆರಂಭಿಸುತ್ತಾರೆ. ಆದರೆ ಈ ಬಾರಿ ಅತಿಯಾದ ಮಳೆಯ ವಾತಾವರಣ ಸಮಸ್ಯೆ ಉಂಟುಮಾಡಿದೆ.

ಮಣ್ಣು ಸಂಗ್ರಹಣೆಗೆ ತೊಂದರೆ: ಕರ್ನಾಟಕ, ಮಹಾರಾಷ್ಟ್ರದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಗಣೇಶೋತ್ಸವಕ್ಕೆ ಬೇಕಾಗುವ ಗಣೇಶ ಮೂರ್ತಿ ನಿರ್ಮಿಸಲು ಹಲವಾರು ತಿಂಗಳುಗಳ ಮೊದಲೇ ಕೆಲಸ ಪ್ರಾರಂಭವಾಗುತ್ತದೆ. ಕೆಲbg ಸ್ಥಳಗಳಲ್ಲಿ ಯುಗಾದಿ ದಿನದಂದೇ ಪೂಜೆ ನೆರವೇರಿಸಿ ಮಣ್ಣು ಸಂಗ್ರಹಣೆ ಮಾಡುವುದು ವಾಡಿಕೆ. ಆದರೆ ಈ ಬಾರಿ ಅlfಯಾದ ಮಳೆಯ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ತಯಾರಕರು ಮೂರ್ತಿ ತಯಾರಿಕೆಗೆ ಬೇಕಾದ ಗುಣಮಟ್ಟದ ಮಣ್ಣು ಸಂಗ್ರಹಣೆಗೆ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.

ಮೂರ್ತಿಗಳು ಒಣಗುತ್ತಿಲ್ಲ: ಸತತವಾಗಿ ಸುರಿಯುತ್ತಿರುವ ಮಳೆಯ ಮಧ್ಯೆಯೇ ಹತ್ತಾರು ಸಮಸ್ಯೆ ದಾಟಿ ಮೂರ್ತಿ ತಯಾರಿಕೆಗೆ ಬೇಕಾದ ಜೇಡಿ ಮಣ್ಣು ಸಂಗ್ರಹಿಸಿ ಅದನ್ನು ಹದಗೊಳಿಸಿದ Eನಂತರ ಸಾವಿರಾರು ಸಂಖ್ಯೆಯಲ್ಲಿ ಮೂರ್ತಿಗಳು ನಿರ್ಮಾಣವಾಗಿವೆ. ಆದರೆ ಕಳೆದ ತಿಂಗಳಿಂದ ನಿರಂತರ ಮಳೆಯಿಂದ ಬಿಸಿಲೇ ಇಲ್ಲ, ಅತಿಯಾದ ತೇವಾಂಶದಿಂದ ಈಗಾಗಲೇ ನಿರ್ಮಾಣವಾಗಿರುವ ಗಣೇಶ ಮೂರ್ತಿಗಳು ಕೂಡಾ ಒಣಗುತ್ತಿಲ್ಲ. ಹಾಗಾಗಿ ಅವುಗಳಿಗೆ ಬಣ್ಣ ಹಾಕುವ ಕಾರ್ಯವೂ (ಅಂತಿಮ ರೂಪ) ವಿಳಂಬವಾಗುತ್ತಿದೆ.

ಆದಾಯಕ್ಕೆ ಹೊಡೆತ:ಮಣ್ಣಿನಿಂದ ಗಣೇಶ ಮೂರ್ತಿ ತಯಾರಿಸುವ ಕಲಾವಿದರು ವರ್ಷ ಪೂರ್ತಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಹೆಚ್ಚಿನ ಆದಾಯ ತಂದು ಕೊಡುವುದು ಗಣೇಶ ಮೂರ್ತಿ ತಯಾರಿಕಾ ಕೆಲಸ, ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಅತಿಯಾದ ಮಳೆಯಿಂದ ಈ ಬಾರಿ ಅವರ ಆದಾಯಕ್ಕೂ ಹೊಡೆದ ಬೀಳುತ್ತಿದೆ.

ಪಿಒಪಿ ಮಾರಾಟ ಮತ್ತೆ ತಲೆ ಎತ್ತಲಿದೆ: ಮಣ್ಣಿನಿಂದ ನಿರ್ಮಾಣವಾಗುವ ಗಣೇಶ ಮೂರ್ತಿಗಳನ್ನು ಬಳಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಅತಿಯಾದ ಮಳೆಯಾಗಿರುವ ಹಿನ್ನೆಲೆಯಲ್ಲಿ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಮಣ್ಣಿನ ಗಣೇಶ ಮೂರ್ತಿಗಳು ನಿರ್ಮಾಣವಾಗಿಲ್ಲ. ಅನಿವಾರ್ಯವಾಗಿ ಸಾರ್ವಜನಿಕರು ಮತ್ತೆ ಪಿಒಪಿ ಗಣಪತಿಗಳ ಖರೀದಿಗೆ ಮೊರೆ ಹೋಗುವಂತಾಗಿದೆ.

ಪಿಒಪಿ ಗಣಪತಿ ಮೂರ್ತಿಗಳ ನಿರ್ಮಾಣ ಮತ್ತು ಮಾರಾಟಕ್ಕೆ ಈಗಾಗಲೇ ಸರ್ಕಾರ ನಿಷೇಧ ಹೇರಿದೆ, ಆದರೆ ಅದು ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಗಣೇಶೋತ್ಸವ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಪೂರ್ವಭಾವಿಯಾಗಿ ನಡೆಸುವ ಸಭೆಗಳಲ್ಲಿ ಗಣೇಶ ಮೂರ್ತಿ ತಯಾರಿಸುವ ಕಲಾವಿದರನ್ನೇ ಆಹ್ವಾನಿಸುವುದಿಲ್ಲ. ರಾಜ್ಯಾದ್ಯಂತ 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಗಣೇಶ ಮೂರ್ತಿ ತಯಾರಕರಿದ್ದರೂ ಅವರ ಸಮಸ್ಯೆಗಳಿಗೆ ಯಾರೂ ಸ್ಪಂದಿಸುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ ಅತಿಯಾದ ಮಳೆ ಮತ್ತು ತೀವ್ರ ತೇವಾಂಶದಿಂದ ಮೂರ್ತಿ ತಯಾರಕರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ರಾಜ್ಯ (ಮಣ್ಣಿನ) ಗಣೇಶ ಮೂರ್ತಿ ತಯಾರಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಭರಡಿ ಹೇಳಿದರು.

ಸತತ ಮಳೆಯಾದ ಹಿನ್ನೆಲೆಯಲ್ಲಿ ಮಣ್ಣಿನ ಗಣೇಶ ಮೂರ್ತಿ ನಿರ್ಮಾಣಕ್ಕೆ ಸಮಸ್ಯೆಯಾಗಿದೆ. ಸಾರ್ವಜನಿಕರು ಪಿಒಪಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಬಾರದು. ಇದರಿಂದ ಪರಿಸರಸ್ನೇಹಿ ಮಣ್ಣಿನ ಗಣೇಶನನ್ನು ತಯಾರು ಮಾಡುವ ನಮ್ಮಂತಹ ಮೂರ್ತಿ ತಯಾರಿಕರಿಗೆ ಪ್ರೋತ್ಸಾಹವೇ ಇಲ್ಲದಂತಾಗುತ್ತಿದೆ. ಎಲ್ಲರೂ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಬೇಕು ಎಂದು ಯುವ ಗಣೇಶ ಮೂರ್ತಿ ತಯಾರಕ ಗದಗ ಚೇತನ್ ರಾಜೇಶ್ ಹೇಳಿದರು.