ವಿಜ್ಞಾನ ವಿಭಾಗ: ಹುಬ್ಬಳ್ಳಿಯ ಎ. ವಿದ್ಯಾಲಕ್ಷ್ಮೀ ರಾಜ್ಯಕ್ಕೆ ಪ್ರಥಮ

| Published : Apr 11 2024, 12:47 AM IST

ವಿಜ್ಞಾನ ವಿಭಾಗ: ಹುಬ್ಬಳ್ಳಿಯ ಎ. ವಿದ್ಯಾಲಕ್ಷ್ಮೀ ರಾಜ್ಯಕ್ಕೆ ಪ್ರಥಮ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 22 ವರ್ಷಗಳಿಂದ ಹುಬ್ಬಳ್ಳಿ ಬೆಂಗೇರಿಯ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಎ. ವಿದ್ಯಾಲಕ್ಷ್ಮೀ ಹಿಂದಿ (98 ಅಂಕ)ಯೊಂದನ್ನು ಬಿಟ್ಟು ಉಳಿದ ಎಲ್ಲ ವಿಷಯಗಳಿಗೆ 100ಕ್ಕೆ 100ಅಂಕ ಪಡೆದು ಸೈ ಎನಿಸಿಕೊಂಡಿದ್ದಾಳೆ.

ಹುಬ್ಬಳ್ಳಿ:

ಇಲ್ಲಿನ ಭೈರಿದೇವರಕೊಪ್ಪದ ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿನಿ ಎ. ವಿದ್ಯಾಲಕ್ಷ್ಮಿ ಪಿಯು ವಿಜ್ಞಾನ ವಿಭಾಗದಲ್ಲಿ 600ಕ್ಕೆ 598 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕಾಲೇಜ್‌ ವತಿಯಿಂದ ₹ 1 ಲಕ್ಷ ಬಹುಮಾನ ನೀಡಿ ಗೌರವಿಸಲಾಗಿದೆ. ಪಿಯು ದ್ವಿತೀಯ ವರ್ಷದ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಅದರಲ್ಲಿ ವಿಜ್ಞಾನ ವಿಭಾಗದಲ್ಲಿ ಎ. ವಿದ್ಯಾಲಕ್ಷ್ಮಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಮೂಲತಃ ತಮಿಳುನಾಡಿನವರಾದ ಇವರ ತಂದೆ ಅಖಿಲೇಶ್ವರನ್, ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಳೆದ 22 ವರ್ಷಗಳಿಂದ ಹುಬ್ಬಳ್ಳಿ ಬೆಂಗೇರಿಯ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಎ. ವಿದ್ಯಾಲಕ್ಷ್ಮೀ ಹಿಂದಿ (98 ಅಂಕ)ಯೊಂದನ್ನು ಬಿಟ್ಟು ಉಳಿದ ಎಲ್ಲ ವಿಷಯಗಳಿಗೆ 100ಕ್ಕೆ 100ಅಂಕ ಪಡೆದು ಸೈ ಎನಿಸಿಕೊಂಡಿದ್ದಾಳೆ.

ಈ ಕುರಿತು ಮಾತನಾಡಿದ ವಿದ್ಯಾರ್ಥಿನಿ ಎ. ವಿದ್ಯಾಲಕ್ಷ್ಮೀ, ಈ ಯಶಸ್ಸಿಗೆ ನನ್ನ ತಂದೆ-ತಾಯಿಯ ಪ್ರೋತ್ಸಾಹ, ಉಪನ್ಯಾಸಕರ ನಿರಂತರ ಶೈಕ್ಷಣಿಕ ಕಾಳಜಿಯೇ ಕಾರಣ. ನಾನು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವೆ ಎಂದು ಅಂದುಕೊಂಡಿರಲಿಲ್ಲ. ಆದರೆ, ಟಾಪ್‌ ಮೂರರೊಳಗೆ ಬರುವ ಭರವಸೆ ಇತ್ತು. ಕಾಲೇಜು ಪ್ರಾಚಾರ್ಯರು ಬೆಳಗ್ಗೆ ಕರೆ ಮಾಡಿ ವಿಷಯ ತಿಳಿಸಿದಾಗ ತುಂಬಾ ಸಂತಸವಾಯಿತು ಎಂದರು.

ನಿತ್ಯವು ಸಂಜೆ 3-4 ಗಂಟೆ ವಿದ್ಯಾಭ್ಯಾಸಕ್ಕಾಗಿ ಸಮಯ ಮೀಸಲಿಡುತ್ತಿದ್ದೆ. ವಾರದ ರಜೆಯ ವೇಳೆ 7-8 ಗಂಟೆ ವ್ಯಾಸಂಗ ಮಾಡುತ್ತಿದ್ದೆ. ಎಲ್ಲಿಯೂ ಕೋಚಿಂಗ್‌ಗೆ ತೆರಳಿಲ್ಲ. ಮನೆಯಲ್ಲಿದ್ದುಕೊಂಡೇ ಅಧ್ಯಯನ ಮಾಡಿದ್ದೇನೆ. ಮೇ ತಿಂಗಳಲ್ಲಿ ಬರುವ ನೀಟ್‌ ಪರೀಕ್ಷೆಗೆ ಸಿದ್ಧತೆ ನಡೆಸಿರುವುದಾಗಿ ತಿಳಿಸಿದರು.

ವಿದ್ಯಾಲಕ್ಷ್ಮೀ ತಂದೆ ಅಖಿಲೇಶ್ವರನ್, ಪುತ್ರಿಯ ಸಾಧನೆ ನೋಡಿ ತುಂಬಾ ಸಂತಸವಾಗುತ್ತಿದೆ ಎಂದರು.

ಸಂಭ್ರಮಾಚರಣೆ:

ಈ ವೇಳೆ ಕಾಲೇಜು ಸಿಬ್ಬಂದಿ ಹಾಗೂ ಪಾಲಕರು ವಿದ್ಯಾರ್ಥಿನಿ ಎ. ವಿದ್ಯಾಲಕ್ಷ್ಮೀಗೆ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು. ಸಂಸ್ಥೆಯ ಆಡಳಿತ ಮಂಡಳಿಯ ಚೇರ್‌ಮನ್ ಶ್ರೀದೇವಿ ಚೌಗಲಾ ವಿದ್ಯಾಲಕ್ಷ್ಮೀಗೆ ಸಂಸ್ಥೆಯ ವತಿಯಿಂದ ₹ 1 ಲಕ್ಷ ಬಹುಮಾನ ನೀಡಿ ಗೌರವಿಸಿದರು. ನಂತರ ಕಾಲೇಜು ಆವರಣದಲ್ಲಿ ಪಟಾಕಿ ಸಿಡಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದರು. ಪ್ರಥಮ ವರ್ಷದ ಕೆಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾಲಕ್ಷ್ಮೀಯಿಂದ ಆಟೋಗ್ರಾಫ್‌ ಪಡೆದರು.