ಕುಶಾಲನಗರ: ಇಲಾಖೆ ಅಧಿಕಾರಿಗಳ ಸಭೆ

| Published : Jun 17 2024, 01:33 AM IST

ಸಾರಾಂಶ

ಕುಶಾಲನಗರ ತಾಲೂಕು ತಹಸೀಲ್ದಾರ್‌ ಕಿರಣ್‌ ಗೌರಯ್ಯ ಅವರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ವಾರದ ಸಂತೆ ನಡೆಯುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ತಲೆದೋರಿರುವ ಕೆಲವು ಸಮಸ್ಯೆಗಳನ್ನು ತಕ್ಷಣ ನಿವಾರಣೆ ಮಾಡುವ ನಿಟ್ಟಿನಲ್ಲಿ ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಅವರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಿದರು.

ಕಳೆದ ಕೆಲವು ವರ್ಷಗಳಿಂದ ಕುಶಾಲನಗರ ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ವಾರದ ಸಂತೆ ನಡೆಯುತ್ತಿದ್ದು ಸಾರ್ವಜನಿಕರಿಂದ ಹಲವು ದೂರುಗಳು ಕೇಳಿ ಬಂದಿವೆ.

ಸಂತೆ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ, ಹೆದ್ದಾರಿಯಲ್ಲಿ ವಾಹನ ಸಂಚಾರ ಸಮಸ್ಯೆ, ಸಂತೆ ಆವರಣದಲ್ಲಿ ಕಸ ವಿಲೇವಾರಿ ಸಮಸ್ಯೆಗಳ ಸೇರಿದಂತೆ ಸಮರ್ಪಕವಾಗಿ ಸಂತೆ ನಡೆಸುವ ಸಂಬಂಧ ಸ್ಥಳೀಯ ಪೊಲೀಸ್, ಕೃಷಿ ಮಾರುಕಟ್ಟೆ ಅಧಿಕಾರಿಗಳು ಮತ್ತು ಸಂತೆ ವ್ಯಾಪಾರಿಗಳ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.

ಸಂತೆ ಪ್ರಾರಂಭವಾಗುವ ಸಂದರ್ಭ ಸಂಬಂಧಿಸಿದ ಅಧಿಕಾರಿಗಳು ಆ ಬಗ್ಗೆ ಗಮನಿಸಿ ಕ್ರಮ ಕೈಗೊಳ್ಳುವುದು.

ಮಾರುಕಟ್ಟೆಯಲ್ಲಿ ಕೆಲವು ಮಧ್ಯವರ್ತಿಗಳು ವ್ಯಾಪಾರಿಗಳ ಮೇಲೆ ಅನಾವಶ್ಯಕ ಹಣ ವಸೂಲಿ ಬಗ್ಗೆ ದೂರುಗಳು ಕೇಳಿ ಬಂದಿವೆ.

ವ್ಯಾಪಾರಿಗಳು ಎಲ್ಲೆಂದರಲ್ಲಿ ವ್ಯಾಪಾರ ಮಾಡುವ ಮೂಲಕ ಸಂಚಾರ ವ್ಯವಸ್ಥೆಗೆ ತೊಡಕುಂಟು ಮಾಡುವುದು ವಾಹನಗಳ ಅಸಮರ್ಪಕ ನಿಲುಗಡೆ ಹಿನ್ನೆಲೆಯಲ್ಲಿ ಹೆದ್ದಾರಿ ರಸ್ತೆಗೆ ಸಂಚಾರಕ್ಕೆ ಅಡ್ಡಿ ಉಂಟು ಮಾಡುವುದು ಇವುಗಳನ್ನು ತಕ್ಷಣ ಸರಿಪಡಿಸುವಂತೆ ತಹಸೀಲ್ದಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು.

ನಿಯಮ ಉಲ್ಲಂಘಿಸುವ ವ್ಯಾಪಾರಿಗಳಿಗೆ ಸ್ಥಳದಲ್ಲೇ ಸಾವಿರ ರು. ದಂಡ ವಿಧಿಸುವ ಕ್ರಮಕ್ಕೆ ಮುಂದಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಹಸೀಲ್ದಾರ್ ಕಿರಣ್ ಗೌರಯ್ಯ ಅವರು ನಿರ್ದೇಶನ ನೀಡಿದರು.

ಮುಂದಿನ ಮಂಗಳವಾರದಿಂದ ಸಮರ್ಪಕವಾಗಿ ಸಂತೆ ವ್ಯಾಪಾರ ವಹಿವಾಟು ಮತ್ತು ಯಾವುದೇ ರೀತಿಯ ಗೊಂದಲ ಇರದಂತೆ ನೋಡಿಕೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭ ಕುಶಾಲನಗರ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್, ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು, ಸಂತೆ ವ್ಯಾಪಾರಿಗಳ ಸಂಘದ ಪ್ರಮುಖರು ಇದ್ದರು.