ಸಾರಾಂಶ
ಸಂತೋಷ ದೈವಜ್ಞ
ಮುಂಡಗೋಡ: ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಇಲ್ಲಿಯ ಬಹುತೇಕ ಜಲಾಶಯಗಳು ದುರ್ಬಲವಾಗಿದ್ದು, ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ಇಲ್ಲಿಯ ರೈತರಿಗೆ ಬಂದೊದಗಿದೆ. ಕಾಲ ಕಾಲಕ್ಕೆ ಹೂಳೆತ್ತುವುದಾಗಲಿ, ಗೇಟ್ ದುರಸ್ತಿ ಮುಂತಾದ ಅಗತ್ಯ ನಿರ್ವಹಣಾ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಜಲಾಶಯ ಹಾಗೂ ಕೆರೆಗಳನ್ನು ಹೊಂದಿದ ಹೆಗ್ಗಳಿಕೆ ಮುಂಡಗೋಡ ತಾಲೂಕಿನದ್ದಾಗಿದೆ. ಧರ್ಮಾ ಹಾಗೂ ಬಾಚಣಕಿ ಜಲಾಶಯ ಹೊರತುಪಡಿಸಿ ಇನ್ನುಳಿದ ಯಾವೊಂದು ಜಲಾಶಯಗಳು ಸುಭದ್ರವಾಗಿಲ್ಲ. ಒಡ್ಡಿನಲ್ಲಿ ಆಗಾಗ ಡೊಂಬು ಕಾಣಿಸಿಕೊಳ್ಳುವುದು ಗೇಟ್‌ಗಳಿಂದ ನೀರು ಪೋಲಾಗುವುದು ಇಲ್ಲಿ ಸಾಮಾನ್ಯ.ಚಿಗಳ್ಳಿ ಜಲಾಶಯ ಎರಡು ಬಾರಿ ಒಡ್ಡು ಕುಸಿದು ಆಸ್ತಿ- ಪಾಸ್ತಿ ಹಾನಿ ಸಂಭವಿಸಿದ ಆ ಕರಾಳ ದಿನವನ್ನು ಇಂದಿಗೂ ಮರೆಯುವಂತಿಲ್ಲ. ಅದೇ ರೀತಿ ಸನವಳ್ಳಿ, ನ್ಯಾಸರ್ಗಿ, ಸಿಂಗನಳ್ಳಿ, ಅರಶಿಣಗೇರಿ ಸೇರಿದಂತೆ ಬಹುತೇಕ ಜಲಾಶಯಗಳ ಒಡ್ಡು ದುರ್ಬಲಗೊಂಡು ನೀರು ಪೋಲಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಜಲಾಶಯದ ಒಡ್ಡಿನಲ್ಲಿ ಸಮಸ್ಯೆ ಕಾಣಿಸಿಕೊಂಡಾಗಲೆಲ್ಲ ಆ ಕ್ಷಣಕ್ಕೆ ಮಾತ್ರ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು ತಾತ್ಕಾಲಿವಾಗಿ ಮಣ್ಣು ಹಾಕಿ ಡೊಂಬು ಮುಚ್ಚುವ ಕೆಲಸ ಮಾಡಿ ಕೈತೊಳೆದುಕೊಳ್ಳುತ್ತಾರೆ ವಿನಾ ಶಾಶ್ವತ ಪರಿಹಾರ ಕಂಡುಕೊಳ್ಳುವುದಿಲ್ಲ.ಸಾರ್ವಜನಿಕರ ಆಕ್ರೋಶ: ಒಡ್ಡು ದುರಸ್ತಿ, ಕಾಲುವೆ, ಗೇಟ್ ಸೇರಿದಂತೆ ಯಾವುದೇ ರೀತಿ ನಿರ್ವಹಣೆ ಇಲ್ಲದೆ ಬಹುತೇಕ ಜಲಾಶಯಗಳು ದುಸ್ಥಿತಿ ತಲುಪಿವೆ. ತಾಲೂಕಿನಲ್ಲಿ ೬ ಪ್ರಮುಖವಾದ ಜಲಾಶಯಗಳಿದ್ದರೂ ಹಲವು ವರ್ಷಗಳಿಂದ ಯಾವೊಂದು ಜಲಾಶಯಗಳಲ್ಲಿ ಹೂಳು ತೆಗೆಯಲಾಗಿಲ್ಲ.
ಇಲಾಖೆಯ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಹೂಳೆತ್ತುವ ಕೆಲಸ ನಡೆದೇ ಇಲ್ಲ. ಅಲ್ಲದೇ ಮಳೆಗಾಲದಲ್ಲಿ ಅರಣ್ಯ ಪ್ರದೇಶದಿಂದ ಜಲಾಶಯಗಳಿಗೆ ನೀರು ಹರಿದು ಬರುವ ಕಾಲುವೆಗಳು ಕೂಡ ಹೂಳು ತುಂಬಿಕೊಂಡಿರುವುದರಿಂದ ಜಲಾಶಯಗಳಿಗೆ ಸಮರ್ಪಕ ಮಳೆಯ ನೀರು ಹರಿದು ಬರುವುದಿಲ್ಲ. ಇದು ಕೂಡ ತಾಲೂಕಿನ ರೈತ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆತಂಕ: ಜಲಾಶಯಗಳಲ್ಲಿ ನೀರು ಭರ್ತಿಯಾದರೂ ಯಾವ ಜಲಾಶಯಗಳಲ್ಲಿ ಯಾವ ಸಮಯದಲ್ಲಿ ಏನು ಅನಾಹುತ ಸಂಭವಿಸುತ್ತದೆಯೋ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ತಾಲೂಕಿನಲ್ಲಿ ಯಾವುದೇ ರೀತಿಯ ನೀರಾವರಿ ಯೋಜನೆ ಇಲ್ಲದಿರುವುದರಿಂದ ಇಲ್ಲಿಯ ರೈತರು ಮಳೆಯನ್ನೇ ಆಶ್ರಯಿಸಿ ವ್ಯವಸಾಯ ಮಾಡಬೇಕಿರುವುದು ಅನಿವಾರ್ಯ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಜಲಾಶಯಗಳು ಅಭಿವೃದ್ಧಿ ಕಾಣದೆ ಇರುವುದು ವಿಪರ್ಯಾಸವೇ ಸರಿ.ಬರಗಾಲ ಕಾಮಗಾರಿ ಮರೀಚಿಕೆ: ಕಳೆದ ವರ್ಷ ಮಳೆಯಾಗದ ಕಾರಣ ಕೆರೆ- ಕಟ್ಟೆಗಳು ಸಂಪೂರ್ಣ ಬತ್ತಿವೆ. ಇಂತಹ ಸಂದರ್ಭದಲ್ಲಿ ಬರಗಾಲ ಕಾಮಗಾರಿ ಕೈಗೊಳ್ಳಬಹುದಿತ್ತು. ಆದರೆ ಅರ್ಧ ಬೇಸಿಗೆ ಕಳೆದರೂ ಈವರೆಗೂ ಯಾವುದೇ ಬರಗಾಲ ಕಾಮಗಾರಿ ಕೈಗೊಳ್ಳಲಾಗಿಲ್ಲ ಹಾಗೂ ಮಳೆಗಾಲ ಪೂರ್ವ ನಿರ್ವಹಣೆ ಕೈಗೊಳ್ಳದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ಹೂಳೆತ್ತಲು ಉತ್ತಮ ಅವಕಾಶವಿದ್ದು, ಈಗಲಾದರೂ ಎಚ್ಚೆತ್ತು ಜಲಾಶಯಗಳ ಅಧ್ಯಯನ ನಡೆಸಿ ನಿರ್ವಹಣೆ, ಭದ್ರತೆ ಮತ್ತು ಸಂರಕ್ಷಣೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಅನಾಹುತಗಳನ್ನು ಎದುರಿಸಬೇಕಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.ಅಭಿವೃದ್ಧಿ ಕಂಡಿಲ್ಲ: ತಾಲೂಕಿನ ಜಲಾಶಯಗಳೆಲ್ಲ ನಿರ್ವಹಣೆ ಇಲ್ಲದೇ ದುರ್ಬಲಾವಸ್ಥೆ ತಲುಪಿವೆ. ಪ್ರತಿವರ್ಷ ಜಲಾಶಯಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಹೆಸರಲ್ಲಿ ಕೋಟ್ಯಂತರ ರು. ಖರ್ಚು ಹಾಕಲಾಗುತ್ತದೆ ವಿನಾ ಯಾವುದೇ ರೀತಿ ಜಲಾಶಯಗಳು ಮಾತ್ರ ಅಭಿವೃದ್ಧಿ ಕಂಡಿಲ್ಲ. ಈ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ನಡೆಯಬೇಕು ಎಂದು ರೈತ ಮುಖಂಡ ರಾಜು ಗುಬ್ಬಕ್ಕನವರ ತಿಳಿಸಿದರು.