ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಕೆಪಿಸಿಸಿ ವಕ್ತಾರ ಶಿವಮೊಗ್ಗದ ರಮೇಶ ಹೆಗ್ಡೆ ಆರೋಪಿಸಿದರು.
- ಕಾಂಗ್ರೆಸ್ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ರಮೇಶ ಹೆಗ್ಡೆ ಆರೋಪ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಕೆಪಿಸಿಸಿ ವಕ್ತಾರ ಶಿವಮೊಗ್ಗದ ರಮೇಶ ಹೆಗ್ಡೆ ಆರೋಪಿಸಿದರು.
ಶುಕ್ರವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2014 ಹಾಗೂ 2018 ರಲ್ಲಿ ರಾಷ್ಟ್ರೀಯ ಹಸಿರು ಪೀಠಕ್ಕೆ ಡಾ.ಕಸ್ತೂರಿ ರಂಗನ್ ವರದಿ ಜಾರಿ ಗೊಳಿಸುವುದಾಗಿ ( ಗೋವಾ ಫೌಂಡೇಷನ್ ವಿರುದ್ಧ ಭಾರತ ಸರ್ಕಾರದ ಪ್ರಕರಣದಲ್ಲಿ ) ಪ್ರಮಾಣ ಪತ್ರ ಸಲ್ಲಿಸಿದ ಮೇರೆಗೆ ರಾಷ್ಟ್ರೀಯ ಹಸಿರು ಪೀಠ ಕೇಂದ್ರ ಸರ್ಕಾರಕ್ಕೆ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ಅಂತಿಮ ಅಧಿಸೂಚನೆ ಹೊರಡಿಸುವಂತೆ ನಿರ್ದೇಶಿಸಿದೆ. ಈ ಮೂಲಕ 2014 ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ನಾಯಕರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಡಾ.ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದಿಲ್ಲ ಎಂದು ನೀಡಿದ್ದ ಭರವಸೆ ಸುಳ್ಳಾಗಿದೆ ಎಂದು ಟೀಕಿಸಿದರು.ನರೇಂದ್ರ ಮೋದಿ ಸರ್ಕಾರಕ್ಕೆ ಪರಿಸರ ಸಂರಕ್ಷಣಾ ಕಾಯ್ದೆ 1986ರಂತೆ ಮೇಲ್ಕಂಡ ವರದಿ ಕೈ ಬಿಡುವ ಅಧಿಕಾರ ಇದ್ದರೂ ಸಹ ಮೇಲ್ಕಂಡ ವರದಿ ಕೈ ಬಿಟ್ಟಿಲ್ಲ. 2015, 2017 , 2018 ಹಾಗೂ 2022 ರಲ್ಲಿ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಗೆ ಸಂಬಂಧಿಸಿದ ಪ್ರಾಥಮಿಕ ಕರಡು ಅಧಿಸೂಚನೆಯನ್ನು 4 ಬಾರಿ ಹೊರಡಿಸಿ ಪಶ್ಚಿಮ ಘಟ್ಟದ ಜನರಿಗೆ ದ್ರೋಹ ಬಗೆದಿದೆ ಎಂದರು.
2017 ರಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಡಾ.ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ಸಂಪುಟ ಸಭೆ ನಿರ್ಣಯ ಕೈಗೊಂಡು ಮೇಲ್ಕಂಡ ವರದಿ ಕೈ ಬಿಡುವಂತೆ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವರಿಗೆ ಸಲ್ಲಿಸಿದ ಮನವಿಯನ್ನು ಕೇಂದ್ರದ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ ತಿರಸ್ಕರಿಸಿದೆ ಎಂದರು.2015 ಹಾಗೂ 2016 ರಲ್ಲಿ ಕೇಂದ್ರ ಸರ್ಕಾರದ ಅರಣ್ಯ ಸಚಿವರು ಡಾ.ಕಸ್ತೂರಿ ರಂಗನ್ ವರದಿ ಅನುಷ್ಟಾನ ಕುರಿತು ಚರ್ಚೆ ನಡೆಸಲು ಆಯೋಜಿಸಿದ್ದ ಮಹತ್ವದ ಸಭೆಗೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಶಿವಮೊಗ್ಗ ಸಂಸದ ಯಡಿಯೂರಪ್ಪ ಹಾಗೂ ಇತರ ಬಿಜೆಪಿ ಸಂಸದರು ಗೈರು ಹಾಜರಾಗಿದ್ದರು ಎಂದರು.
ಇತ್ತೀಚೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅರಣ್ಯ ಸಚಿವ ಭೂಪೇಂದ್ರ ಯಾದವ್, ಡಾ.ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಕೇಂದ್ರ ಅರಣ್ಯ ಇಲಾಖೆ ನಿವೃತ್ತ ಮಹಾ ನಿರ್ದೇಶಕ ಸಂಜಯ್ ಕುಮಾರ್ ನೇತೃತ್ವದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದರು. ಆ ಸಭೆಯಲ್ಲಿ ಪಶ್ಚಿಮ ಘಟ್ಟದ ಭೌತಿಕ, ಭೂ ದೃಶ್ಯ ಕಾರ್ಯ ನಡೆಸಿ ಅದರ ವರದಿ ಬಂದ ನಂತರ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಅಂತಿಮ ಘೋಷಣೆ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಪಶ್ಚಿಮ ಘಟ್ಟಗಳಲ್ಲಿ ಡಾ.ಕಸ್ತೂರಿ ರಂಗನ್ ವರದಿ ಜಾರಿಗೆ ಬರುವುದು ಗ್ಯಾರಂಟಿಯಾಗಿದೆ ಎಂದರು.ಡಾ ಕಸ್ತೂರಿ ರಂಗನ್ ವರದಿಯಂತೆ ಚಿಕ್ಕಮಗಳೂರು ಜಿಲ್ಲೆಯ 142 ಗ್ರಾಮ, ಉಡುಪಿ ಜಿಲ್ಲೆಯ 37 ಗ್ರಾಮಗಳು ಸೇರಿ 179 ಗ್ರಾಮಗಳು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರಲಿದೆ. ಅಲ್ಲದೆ ರಾಜ್ಯದ 10 ಜಿಲ್ಲೆಗಳ 1572 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶವಾಗಲಿದೆ. ಈ ಮೂಲಕ ಹೊಸ ಕಠಿಣವಾದ ಅರಣ್ಯ ಕಾನೂನಿನಿಂದ ಮಲೆನಾಡಿನ ಜನರ ನೆಮ್ಮದಿ ಹಾಳಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
2014 ರ ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಮುಖಂಡರು ಈ ವಿಚಾರ ಇಟ್ಟುಕೊಂಡು ಚುನಾವಣೆ ಪ್ರಚಾರಕ್ಕೆ ಬಂದು ಕಸ್ತೂರಿ ರಂಗನ್ ವರದಿ ಜಾರಿಗೆ ಬಿಡುವುದಿಲ್ಲ ಎಂಬ ಭರವಸೆ ನೀಡಿದ್ದರು. ಈಗ ಆ ಭರವಸೆ ಸುಳ್ಳಾಗಿದೆ ಎಂದರು.ಯಾವುದೇ ಅರಣ್ಯ ಕಾಯ್ದೆಯನ್ನು ಘೋಷಣೆ ಮಾಡದೆ ಕೈ ಬಿಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದ್ದರೂ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡಲು ಹೊರಟ ಕೇಂದ್ರದ ಬಿಜೆಪಿ ಸರ್ಕಾರ ಪಶ್ಚಿಮ ಘಟ್ಟದ ಜನರಿಗೆ ಮೋಸ ಮಾಡಿದೆ. ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳಿಸಿದರೆ ಅವರು ಮಲೆನಾಡಿನ ಜನರ ದ್ವನಿಯಾಗಿ ಲೋಕಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸುತ್ತಾರೆ. ಆದ್ದರಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸುದ್ದಿ ಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಕಾಂಗ್ರೆಸ್ ಮುಖಂಡರಾದ ಎಸ್.ಡಿ. ರಾಜೇಂದ್ರ, ಇ.ಸಿ. ಜೋಯಿ, ಸಾಜು, ಕೆ.ಎಂ.ಸುಂದರೇಶ್, ಎಚ್.ಎಂ.ಮನು, ಕೆ.ಎ.ಅಬೂಬಕರ್, ಮಾಳೂರು ದಿಣ್ಣೆ ರಮೇಶ್, ಎಂ.ಆರ್.ರವಿಶಂಕರ್, ಎಲ್ದೋಸ್, ವೆಂಕಟೇಶ್ ಇದ್ದರು.-- ಬಾಕ್ಸ್--
ಅಗತ್ಯವಿದೆಯೆ ಈ ಕಾಯ್ದೆ.?ಈಗಾಗಲೇ 1980ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ, 1972 ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1963 ರಲ್ಲಿ ಕರ್ನಾಟಕ ಅರಣ್ಯ ಕಾಯ್ದೆ ಇದೆ. ಇಂತಹ ಕಠಿಣ ಕಾಯ್ದೆಗಳಿದ್ದರೂ ಮತ್ತೆ ಕಸ್ತೂರಿ ರಂಗನ್ ವರದಿಯಂತೆ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂಬ ಕಠಿಣ ಅರಣ್ಯ ಕಾನೂನು ತರುವ ಅಗತ್ಯವಿತ್ತೇ ? ಎಂದು ಕೆಪಿಸಿಸಿ ವಕ್ತಾರ ಶಿವಮೊಗ್ಗದ ರಮೇಶ ಹೆಗ್ಡೆ ಪ್ರಶ್ನಿಸಿದರು.