ಹಿಂದೂ ಕಾರ್ಯಕರ್ತ ಶ್ರೀನಿವಾಸ ನಾಯ್ಕಗೆ ಗಡಿಪಾರಿಗೆ ನೋಟಿಸ್‌

| Published : Apr 03 2024, 01:31 AM IST

ಸಾರಾಂಶ

ಒಟ್ಟೂ 5 ಕ್ರಿಮಿನಲ್ ಪ್ರಕರಣಗಳಲ್ಲಿ ಮೂರು ಪ್ರಕರಣಗಳು ಖುಲಾಸೆ ಆಗಿರುವುದು ಮತ್ತು ಎರಡು ಪ್ರಕರಣಗಳು ವಿಚಾರಣೆ ಹಂತದಲ್ಲಿರುವ ಬಗ್ಗೆಯೂ ತಿಳಿಸಲಾಗಿದೆ.

ಭಟ್ಕಳ: ಇಲ್ಲಿನ ಹಿಂದೂ ಸಂಘಟನೆಯ ಕಾರ್ಯಕರ್ತ ಹನುಮಾನ ನಗರದ ಶ್ರೀನಿವಾಸ ಮಾಸ್ತಪ್ಪ ನಾಯ್ಕ ಅವರಿಗೆ ಜಿಲ್ಲಾಧಿಕಾರಿ ಅವರು 1 ವರ್ಷ ಗಡಿಪಾರು ಮಾಡುವ ಬಗ್ಗೆ ನೋಟಿಸ್‌ ನೀಡಿದ್ದು, ಏ. 8ರಂದು ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.

ಗಡಿಪಾರಿಗೆ ಸಂಬಂಧಿಸಿದಂತೆ ಶ್ರೀನಿವಾಸ ನಾಯ್ಕರಿಗೆ ನೀಡಿದ ನೋಟಿಸಿನಲ್ಲಿ ಐದು ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ಮತ್ತು ಪ್ರತಿಬಂಧಕ ಕಾನೂನಿನಡಿ ಕೈಗೊಂಡ ಕ್ರಮದ ಬಗ್ಗೆ ವಿವರಿಸಲಾಗಿದೆ. ಒಟ್ಟೂ 5 ಕ್ರಿಮಿನಲ್ ಪ್ರಕರಣಗಳಲ್ಲಿ ಮೂರು ಪ್ರಕರಣಗಳು ಖುಲಾಸೆ ಆಗಿರುವುದು ಮತ್ತು ಎರಡು ಪ್ರಕರಣಗಳು ವಿಚಾರಣೆ ಹಂತದಲ್ಲಿರುವ ಬಗ್ಗೆಯೂ ತಿಳಿಸಲಾಗಿದೆ.

2017ರಿಂದ ದೊಂಬಿ, ಸರ್ಕಾರಿ ನೌಕರರ ಮೇಲೆ ಹಲ್ಲೆ, ಸಾರ್ವಜನಿಕರ ಆಸ್ತಿ ನಷ್ಟ ಮಾಡಿರುವುದಲ್ಲದೇ ಶಾಂತಿ ಸುವ್ಯವಸ್ಥೆ ಕಾಪಾಡಲು ತೊಂದರೆ ನೀಡಿದ್ದೀರಿ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸದಂತೆ ಜಿಲ್ಲೆಯಿಂದ 1 ವರ್ಷಗಳ ಕಾಲ ಗಡಿಪಾರು ಮಾಡುವ ಕುರಿತು ನೋಟಿಸ್ ನೀಡಲಾಗಿದೆ. ಪೊಲೀಸ್ ಇಲಾಖೆಯ ವರದಿ ಆಧಾರದ ಮೇಲೆ ಈ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಏ. 8ರಂದು ಮಧ್ಯಾಹ್ನ 3 ಗಂಟೆಗೆ ನಿಗದಿಪಡಿಸಿದ್ದು, ನ್ಯಾಯಾಲಯಯಕ್ಕೆ ಖುದ್ದಾಗಿ ಹಾಜರಾಗಿ ಪೊಲೀಸ್ ಅಧೀಕ್ಷಕರ ವರದಿಯಲ್ಲಿನ ಅಪಾದನೆಗೆ ಸಂಬಂಧಿಸಿದಂತೆ ಸಮಜಾಯಿಷಿ ನೀಡಬೇಕು. ಇಲ್ಲದಿದ್ದಲ್ಲಿ ನಿಯಮಾನುಸಾರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಗಡಿಪಾರು ಆದೇಶ ಹಿಂಪಡೆಯಲು ಆಗ್ರಹ

ಯಲ್ಲಾಪುರ: ಸರ್ಕಾರದ ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗವಾಗಿ ಭಟ್ಕಳದ ಹಿಂದೂ ಕಾರ್ಯಕರ್ತ, ಹಿಂದೂ ಸಂಘಟನೆಯಲ್ಲಿ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀನಿವಾಸ ನಾಯ್ಕ ಅವರ ಮೇಲಿನ ಗಡಿಪಾರು ಆದೇಶ ವಾಪಸ್‌ ಪಡೆಯಬೇಕೆಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ, ಸಚಿವರು ಹಲವು ಸಂದರ್ಭಗಳಲ್ಲಿ‌ ಬಹಿರಂಗ ಸಭೆಗಳಲ್ಲಿ ಒಂದು ಸಮುದಾಯವನ್ನು ಓಲೈಕೆ ಮಾಡುವ ರೀತಿಯ ಮಾತುಗಳನ್ನು ಆಡುತ್ತಾ ಬಂದಿರುವುದು ಹೊಸ ವಿಷಯವೇನಲ್ಲ. ಅಂತಹ ಓಲೈಕೆ ಮಾತುಗಳ ಗುರಿ ಹಿಂದುತ್ವ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಎನ್ನುವುದೂ ಕಾಂಗ್ರೆಸ್ ಸರ್ಕಾರದ ಇಲ್ಲಿಯವರೆಗಿನ ನಡೆಗಳು ಸಾರಿ ಹೇಳುತ್ತಿವೆ.ಹಿಂದೂ ಸಮಾಜಕ್ಕೆ ಅನ್ಯಾಯವಾದಾಗ ಹಿಂದೂಗಳ ಪರ ಧ್ವನಿ ಎತ್ತುತ್ತಿದ್ದ ಶ್ರೀನಿವಾಸ ನಾಯ್ಕ ಅವರ ವಿರುದ್ಧ ಗಡಿಪಾರು ನೋಟಿಸ್ ನೀಡುವ ಮೂಲಕ ಜಿಲ್ಲೆಯಲ್ಲಿ ಹಿಂದೂಪರ ಕಾರ್ಯಕರ್ತರ ಧ್ವನಿ ಅಡಗಿಸಲು ಹೊರಟಿದೆ ಎಂದಿದ್ದಾರೆ.