ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಪ್ರಧಾನ ಕಚೇರಿ ಎದುರು ಹಾವೇರಿ ಶಾಖೆಯ ನೂರಾರು ಠೇವಣಿದಾರರು ತಮ್ಮ ಠೇವಣಿ ಹಣ ಮರುಪಾವತಿಸಬೇಕು ಎಂದು ಒತ್ತಾಯಿಸಿ ನಿರ್ದೇಶಕರಿಗೆ ಘೇರಾವ್ ಹಾಕಿ ಮಂಗಳವಾರ ಬೆಳಗ್ಗೆಯಿಂದ ರಾತ್ರಿಯವರೆಗೆ ಪ್ರತಿಭಟನೆ ನಡೆಸಿದ್ದಾರೆ.ಸಹಕಾರಿಯು ಕಳೆದ ಎರಡು ತಿಂಗಳಿನಿಂದ ಠೇವಣಿದಾರರಿಗೆ ಠೇವಣಿ ಹಣ ಮರಳಿಸಲು ವಿಫಲವಾಗಿದ್ದರಿಂದ ದಿನೇ, ದಿನೆ ಠೇವಣಿದಾರರು ಬ್ಯಾಂಕಿಗೆ ಆಗಮಿಸಿ ಖಾಲಿ ಕೈಯಲ್ಲಿ ಮರಳುತ್ತಿದ್ದಾರೆ. ಇಂದು ಹಾವೇರಿ ಶಾಖೆಯ ಸುಮಾರು ₹22 ಕೋಟಿ ಹಣ ಠೇವಣಿ ಮಾಡಿದ ಠೇವಣಿದಾರರು ಒಗ್ಗೂಡಿ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿದರು.
ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾ ನಿರತ ಠೇವಣಿದಾರರಿಗೆ ಎಷ್ಟೇ ತಿಳಿ ಹೇಳಿದರೂ ಕಿವಿಗೊಡಲಿಲ್ಲ. ಬ್ಯಾಂಕಿನ ಒಳಗಾಂಗಣದಲ್ಲಿ ಸೇರಿದ ಪ್ರತಿಭಟನಾಕಾರರು ಬ್ಯಾಂಕ್ ಅಧ್ಯಕ್ಷ ಡಾ.ವಿ.ಎಸ್.ಸಾಧುನವರ, ನಿರ್ದೇಶಕ ಕಿರಣ ಸಾಧುನವರ ಅವರಿಗೆ ಮೊಬೈಲ್ ಮೂಲಕ ಸಂಪರ್ಕಿಸಿದಾಗ ಹಾರಿಕೆ ಉತ್ತರ ನೀಡಿದ್ದು, ಇದಕ್ಕೆ ಪ್ರತಿಭಟನೆಕಾರರು ಮತ್ತಷ್ಟು ಕೆಂಡಾಮಂಡಲವಾದರು.ಸ್ಥಳಕ್ಕೆ ಆಗಮಿಸಿದ ಐದಾರು ಜನ ನಿರ್ದೇಶಕರಿಗೆ ಘೇರಾವ್ ಹಾಕಿ ನಾವು ದುಡಿದು ಕೂಡಿಟ್ಟ ಹಣ ಠೇವಣಿ ಇಟ್ಟಿದ್ದೇವೆ. ನಿಮ್ಮ ಅಪ್ಪಗಳ ದುಡ್ಡಲ್ಲ. ಕೂಡಲೇ ನಮ್ಮ ಠೇವಣಿ ಹಣ ಮರು ಪಾವತಿಸುವಂತೆ ಹಿಗ್ಗಾಮುಗ್ಗಾ ನಿಂದಿಸಿದರು. ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಸಿಪಿಐಗಳಾದ ರಾಘವೇಂದ್ರ ಹವಾಲ್ದಾರ, ಪ್ರವೀಣ ಗಂಗೊಳ್ಳ, ಪಿಎಸ್ಐಗಳಾದ ಗುರುರಾಜ ಕರ್ಜಗಿ, ಸುಮಾ ನಾಯಕ, ಪೊಲೀಸರು ಮಧ್ಯೆ ಪ್ರವೇಶಿಸಿ ನಿರ್ದೇಶಕರಿಗೆ ತಿಳಿ ಹೇಳಿದರು. ಡಿ.10ರ ಗಡುವು ಪಡೆದು ಠೇವಣಿದಾರರಿ ಲಿಖಿತ ಪತ್ರ ಬರೆದು ಕೊಟ್ಟ ನಂತರ ಠೇವಣಿದಾರರು ಪ್ರತಿಭಟನೆ ಕೈಬಿಟ್ಟರು. ನಿರ್ದೇಶಕರಾದ ಮಲ್ಲಿಕಾರ್ಜುನ ಸಾಲಿಮಠ, ಬಾಬು ಹರಕುಣಿ, ಶಿವಪುತ್ರಪ್ಪ ತಟವಟಿ, ಬೊಮ್ಮನಾಯ್ಕ ಪಾಟೀಲ, ಸಿಬ್ಬಂದಿ ತಂಡ ಇದ್ದರು.
ಬೈಲಹೊಂಗಲ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಪ್ರಧಾನ ಕಚೇರಿಗೆ ಹಾವೇರಿ ಠೇವಣಿದಾರರು ಮುತ್ತಿಗೆ ಹಾಕಿ ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದರು.ಕ್ಯಾನ್ಸರ್ ಪೀಡಿತ ಬಾಲಕಿ ರೋದನ:
ಹಾವೇರಿ ಪಟ್ಟಣದ ಪ್ರಿಯಾಂಕಾ ಹಿರೇಗೌಡರ ಎಂಬ 12 ವರ್ಷದ ಕ್ಯಾನ್ಸರ್ ಪೀಡಿತ ಬಾಲಕಿ ರೋದನ ಕರುಳ ಹಿಂಡುವಂತಿತ್ತು. ತಂದೆ ಕಳೆದುಕೊಂಡಿರುವ ಬಾಲಕಿಯ ಕುಟುಂಬಕ್ಕೆ ಸೇರಿದ 1.5 ಎಕರೆ ಜಮೀನು ಮಾರಿ ₹10 ಲಕ್ಷ ಠೇವಣಿ ಇಟ್ಟು ಬಂದ ಬಡ್ಡಿಯ ಹಣದಲ್ಲಿ ಉಪಜೀವನ ಸಾಗಿಸುತ್ತ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಗ ಏಕಾಏಕಿ ಎರಡು ತಿಂಗಳಿನಿಂದ ಬಡ್ಡಿ ಪಾವತಿಸದ ಕಾರಣ ಚಿಕಿತ್ಸೆಗೆ ಹಣ ಇಲ್ಲದ್ದರಿಂದ ಬಾಲಕಿಯ ಆರೋಗ್ಯ ಬಿಗಡಾಯಿಸಿದೆ. ಈ ಕುರಿತು ಅಧ್ಯಕ್ಷ ಡಾ.ವಿ.ಎಸ್. ಸಾಧುನವರಗೆ ಹಾವೇರಿ ಪಟ್ಟಣ ಜನತೆ ಬಾಲಕಿಗೆ ₹1 ಲಕ್ಷ ಹಣವಾದರೂ ನೀಡಿ ಎಂದು ಹೇಳಿದ್ದರು. ಮಾತು ಕೊಟ್ಟು ಬಂದ ಅಧ್ಯಕ್ಷರು ಇದುವರೆಗೆ ಏನೂ ಕ್ರಮ ಕೈಕೊಳ್ಳದ್ದರಿಂದ ಬಾಲಕಿಗೆ ದ್ರೋಹ ಬಗೆದಿದ್ದಾರೆ ಎಂದು ಬಾಲಕಿ ಹಾಗೂ ಠೇವಣಿದಾರರು ಆರೋಪಿಸಿದರು.